ನಾಯ್ಕರ್- ಸಾಂಡ್ರಾ ತಿಕ್ಕಾಟದ ನೆನಪು
ಹುಬ್ಬಳ್ಳಿ : ಈ ಹಿಂದೆ ಪಾಲಿಕೆಯಲ್ಲಿ ಕಾಂಗ್ರೆಸ್ ಹಳ್ಳ ಹಿಡಿಯಲು ಮಾಜಿ ಸಂಸದ ಡಿ.ಕೆ.ನಾಯ್ಕರ ಹಾಗೂ ಮಾಜಿ ಸಚಿವ ಗೋಪಿನಾಥ ಸಾಂಡ್ರಾ ನಡುವಣ ತಿಕ್ಕಾಟ ಕಾರಣ ಎಂಬುದನ್ನು ಇಂದು ಹಿರಿಯ ಕಾಂಗ್ರೆಸ್ ಮುಖಂಡರು ಒಪ್ಪಿಕೊಳ್ಳುತ್ತಾರೆ.
ಈಗ ಇಂತಹದ್ದೆ ವಾತಾವರಣ ಅವಳಿನಗರದಲ್ಲಿ ಪ್ರಸಕ್ತ ಪಾಲಿಕೆ ಚುನಾವಣೆ ವೇಳೆ ಬಿಜೆಪಿಯಲ್ಲಿ ಕಂಡು ಬಂದಿದೆ.
ಇಂದು ದೇಶಪಾಂಡೆ ನಗರದದ ಕಾರ್ಯಾಲಯದಲ್ಲಿಂದು ನಡೆದ ಚುನಾವಣೆ ಪ್ರಚಾರ ಕಾರ್ಯಾಲಯ ಉದ್ಘಾಟನೆ ವೇಳೆ ಧಾರವಾಡ ಪಶ್ಚಿಮ ಶಾಸಕ, ಮಹಾನಗರ ಬಿಜೆಪಿ ಅಧ್ಯಕ್ಷ ಅರವಿಂದ ಬೆಲ್ಲದ ಗೈರು ಇಂದು ಇದನ್ನು ಮತ್ತೊಮ್ಮೆ ಜಗಜಾಹೀರುಗೊಳಿಸಿದೆ.
ಕಳೆದ ಸಂಪುಟ ರಚನೆಯ ನಂತರ ಅವಳಿನಗರದಲ್ಲಿನ ಬಿಜೆಪಿಯಲ್ಲಿನ ಬಿರುಕು ಮತ್ತಷ್ಟು ಆಳವಾಗುತ್ತಲೇ ಸಾಗಿದ್ದು ಅಧಿಕಾರದಲ್ಲಿರುವ ಪಕ್ಷಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ನಾಮಪತ್ರ ಸಲ್ಲಿಸುವ ಅಂತಿಮ ದಿನ ೧೨ಗಂಟೆವರೆಗೆ ಬೇಕಾದಾಗಲೇ ಎಲ್ಲವೂ ಸರಿ ಇಲ್ಲ ಎಂಬುದು ಎಲ್ಲರ ಅರಿವಿಗೆ ಬಂದಿತ್ತು.
ಅಲ್ಲದೇ ಅಭ್ಯರ್ಥಿಗಳ ಅಂತಿಮಗೊಳಿಸುವಿಕೆಯಲ್ಲೂ ಒಬ್ಬರಿಗೊಬ್ಬರು ಸಂಬಂಧವಿಲ್ಲದಂತೆ ಇದ್ದುದಲ್ಲದೇ ಅಸಮಾಧಾನ ಬೂದಿಮುಚ್ಚಿದ ಕೆಂಡದಂತೆ ಇರುವುದು ಮೇಲ್ನೋಟಕ್ಕೆ ಕಂಡು ಬರುವಂತಾಗಿದೆ.
ಇಂದು ಕಾರ್ಯಾಲಯದ ಉದ್ಘಾಟನೆ ವೇಳೆ ಬೆಲ್ಲದ ಗೈರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಶೆಟ್ಟರ್ ಅವರು, ಪ್ರಶ್ನೆ ಪಾಸ್ ಮಾಡಿ, ಮುಂದೆ ಏನಾದ್ರೂ ಬೇರೆ ಪ್ರಶ್ನೆ ಇದ್ದರೆ ಕೇಳಿ ಎಂದು ಹೇಳುವ ಮೂಲಕ ಬೆಲ್ಲದ ಅನುಪಸ್ಥಿತಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಒಟ್ಟಿನಲ್ಲಿ ಪ್ರಸಕ್ತ ಪಾಲಿಕೆ ಚುನಾವಣೆ ಬಿಜೆಪಿ ಕೇಸರಿ ಕಾಂಗ್ರೆಸ್ ಆಗುತ್ತಿರುವದಕ್ಕೆ ಮುನ್ನುಡಿ ಬರೆಯುವಂತಾಗಿದೆ.ಎಸ್ ಎಸ್ ಕೆ.ಸಮುದಾಯದ ಬೇಡಿಕೆಗೆ ಸ್ಪಂಧಿಸದಿರುವುದು ಅಲ್ಲದೇ ಪಕ್ಷದ ಅನೇಕ ನಿಷ್ಟಾವಂತರಿಗೆ ಮಣೆ ಹಾಕದಿರುವುದರಿಂದ ಅನೇಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.ಅಲ್ಲದೇ ಪ್ರಸಕ್ತ ಅವಳಿನಗರದ ರಸ್ತೆಯ ಗುಂಡಿಗಳು, ಧೂಳು ಸಹ ಕೇಸರಿ ಪಡೆಗೆ ಸುಳಿಗಾಳಿಯಾಗುವ ಸಾಧ್ಯತೆಗಳು ಇಲ್ಲದಿಲ್ಲ.