ಹುಬ್ಬಳ್ಳಿ: ನಗರದ ನೇತಾಜಿ ಕಾಲೋನಿಯಲ್ಲಿ ಗಾಂಜಾ ಹಾವಳಿ ಹೆಚ್ಚಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಪೊಲೀಸ್ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ನಾವೆಲ್ಲ ಸಂಘಟಿತ ಹೋರಾಟ ನಡೆಸಬೇಕಾಗಿದೆ. ಆಗಲಾದರೂ ಪೊಲೀಸ ಇಲಾಖೆ ಎಚ್ಚರಗೊಳ್ಳಬಹುದೆಂದು ನೇತಾಜಿ ಕಾಲೋನಿ ಹಿತರಕ್ಷಣಾ ಸಮಿತಿ ನೂತನ ಅಧ್ಯಕ್ಷರಾದ ಡಾ.ರಾಮಚಂದ್ರ ಕಾರಟಗಿ ಹೇಳಿದರು.
ಇಲ್ಲಿನ ಕಾರಟಗಿ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ನೇತಾಜಿ ಕಾಲೋನಿಯ ಹಿತರಕ್ಷಣಾ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದಲ್ಲಿ ಮಾತನಾಡಿ, ಗಾಂಧೀಜಿಯವರ ಕನಸಿನಂತೆ ಮಧ್ಯರಾತ್ರಿಯಲ್ಲಿ ಮಹಿಳೆಯರು ನಿರ್ಭಯವಾಗಿ ಸಂಚರಿಸಬೇಕು ಎಂಬುದು ನಮ್ಮ ಸಮಿತಿಯ ಆದ್ಯತೆಯಾಗಲಿದೆ ಎಂದರು.
ಕಾಲೋನಿಯಲ್ಲಿರುವ ಖಾಲಿ ನಿವೇಶನಗಳಲ್ಲಿ ಹಾಗೂ ರಸ್ತೆಗಳ ಸ್ವಚ್ಛತೆ ನಡೆಯಬೇಕು. ಸಮರ್ಪಕ ಕಸ ವಿಲೇವಾರಿಯಾಗಬೇಕು. ಬಹುಮುಖ್ಯವಾಗಿ ಕಾಲೋನಿಯ ಜನರ ಆರೋಗ್ಯದ ಕಾಳಜಿ ನನ್ನ ಧ್ಯೇಯವಾಗಿದೆ. ಮುಂದಿನ ದಿನಗಳಲ್ಲಿ ನೇತಾಜಿ ಕಾಲೋನಿ ನಾಗರೀಕ ಹಿತರಕ್ಷಣಾ ಸಮಿತಿಯು ಈ ಪ್ರದೇಶವನ್ನು ಮಾದರಿ ವಾರ್ಡ್ ಆಗಿ ರೂಪುಗೊಳಿಸುವತ್ತ ಕಾರ್ಯ ನಿರ್ವಹಿಸುವದು ಅದಕ್ಕೆ ಸ್ಥಳೀಯರ ಸಹಕಾರ ಅಗತ್ಯ ಬೇಕು ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಸ್ಥಳೀಯರು ಡಾ.ರಾಮಚಂದ್ರ ಕಾರಟಗಿಯವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಅನುಮೋದಿಸಿದರು. ಉಳಿದಂತೆ ಉಪಾಧ್ಯಕ್ಷರಾಗಿ ಡಾ.ರಾಮು ತೇಗೂರ, ಕಾರ್ಯದರ್ಶಿಯಾಗಿ ರಾಮಚಂದ್ರ ಹಬೀಬ, ಖಜಾಂಚಿಯಾಗಿ ಪ್ರಭಾಕರ ಚಿನ್ನಯ್ಯ, ಸದಸ್ಯರಾಗಿ ವಿನಾಯಕ ವೆಂಕಟರ ಮಣ, ಶೇಖ್, ವಿವೇಕಾನಂದ ಚೌವಾಣ, ಬಸವರಾಜ ಕೊಪ್ಪಳ, ನಾಗರಾಜ, ರತನ್, ಶ್ರೀಮತಿ ನೆಲೆಶಿಯಾ ಜೋಸೆಫ್ ಆಯ್ಕೆಯಾದರು. ಕಾಲೋನಿಯ ಸಾರ್ವಜನಿಕರು ಭಾಗವಹಿಸಿದ್ದರು.