ಹುಬ್ಬಳ್ಳಿ-ಧಾರವಾಡ ಸುದ್ದಿ
ಕೃಷಿ ವಿ.ವಿ. ಶಿಕ್ಷಕರ ಮುಷ್ಕರ 2ನೇ ದಿನಕ್ಕೆ;  ಕೊಲೆ ಯತ್ನದ ಪ್ರಕರಣ: 11ಕ್ಕೆ ತೀರ್ಪು

ಕೃಷಿ ವಿ.ವಿ. ಶಿಕ್ಷಕರ ಮುಷ್ಕರ 2ನೇ ದಿನಕ್ಕೆ; ಕೊಲೆ ಯತ್ನದ ಪ್ರಕರಣ: 11ಕ್ಕೆ ತೀರ್ಪು

ಧಾರವಾಡ: ಉತ್ತರ ಕರ್ನಾಟಕದ ರೈತರ ಪಾಲಿನ ಜೀವದಾಯಿನಿ ಪ್ರತಿಷ್ಥಿತ ಕೃಷಿ ವಿಶ್ವವಿದ್ಯಾಲಯದ ಆಡಳಿತ ಧೋರಣೆಯನ್ನು ಖಂಡಿಸಿ ಶಿಕ್ಷಕರು ನಡೆಸುತ್ತಿರುವ ಅನಿರ್ಧಿಷ್ಠಾವಧಿಯ ಧರಣಿ ಇಂದು ಎರಡನೇ ದಿನದಲ್ಲಿ ಮುಂದುವರೆದಿದೆ.


ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆಡಳಿತ ಭವನದ ಎದುರು ಶಿಕ್ಷಕರ ಕಲ್ಯಾಣ ಸಂಘದ ಆಶ್ರಯದಲ್ಲಿ ಶಿಕ್ಷಕರು ಸೋಮವಾರ ಧರಣಿ ಆರಂಭಿಸಿದ್ದು, ಕೃವಿವಿ ಆಡಳಿತದ ವಿರುದ್ಧ ತಮ್ಮ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಶಿಕ್ಷಕರ ಕಲ್ಯಾಣ ಸಂಘದ ಅಧ್ಯಕ್ಷ ಡಾ.ಐ.ಕೆ.ಕಾಳಪ್ಪನವರ, ಪ್ರಧಾನ ಕಾರ್ಯದರ್ಶಿ ಡಾ.ಮಹಾಂತೇಶ ನಾಯಕ, ಡಾ. ರಾಮನಗೌಡ ಪಾಟೀಲ, ಡಾ. ನಾಗಪ್ಪ ಗೋವನಕೊಪ್ಪ, ಡಾ.ಆರ್.ಎಚ್.ಪಾಟೀಲ, ಡಾ.ಮಂಜುಳಾ ಎನ್., ಡಾ.ವೀಣಾ ಜಾಧವ, ಸುರೇಖಾ ಸಂಕನಗೌಡರ ಸೇರಿದಂತೆ ಅನೇಕ ಶಿಕ್ಷಕರು ಧರಣಿಯಲ್ಲಿ ಭಾಗವಹಿಸಿದ್ದಾರೆ.
ಇದೇ ವೇಳೆ ವಿಶ್ವವಿದ್ಯಾಲಯದ ಅಧೀನದ ಶಿರಸಿಯಲ್ಲಿ ಡಾ.ಶಿವಶಂಕರ ಮೂರ್ತಿ, ಡಾ.ದಾಸರ, ಡಾ. ಸುರೇಂದ್ರ, ಡಾ.ಇಂದುಮತಿ, ಹನಮನಮಟ್ಟಿಯಲ್ಲಿ ಡಾ.ಎಂ.ವಿ.ಮಂಜುನಾಥ, ಡಾ.ವೀರಣ್ಣ, ಡಾ.ಬಡಿಗೇರ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ರೀತಿ ಸಂಕೇಶ್ವರ, ಮದರಖಂಡಿ, ವಿಜಯಪುರ ಸಂಶೋಧನಾ ಕೇಂದ್ರಗಳಲ್ಲಿಯೂ ಶಿಕ್ಷಕರು ಧರಣಿ ನಡೆಸುತ್ತಿದ್ದಾರೆ.

ಕೊಲೆ ಯತ್ನದ ಪ್ರಕರಣ: 11ಕ್ಕೆ ತೀರ್ಪು

ಹುಬ್ಬಳ್ಳಿ: ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮಹಾದೇವ ಚೆಟ್ಟಿ ವಿರುದ್ದ ಮಹಿಳೆಯೊಬ್ಬರ ಮೇಲೆ ಮಾನಭಂಗಕ್ಕೆ ಯತ್ನಿಸಿ ಕೊಲೆಗೆ ಪ್ರಯತ್ನಿಸಿದ ಪ್ರಕರಣ ದಾಖಲಾಗಿದ್ದು ವಿಚಾರಣೆ ಮುಕ್ತಾಯಗೊಂಡಿದ್ದು ದಿ.11 ರಂದು ಅಂತಿಮ ತೀರ್ಪು ಹೊರಬೀಳಲಿದೆ ಎನ್ನಲಾಗಿದೆ.
ಧಾರವಾಡದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣ ಪ್ರಕರಣ ನಡೆಯುತ್ತಿದೆ.
ಈ ಹಿಂದೆ ಕಳೆದ ವರ್ಷ ನ್ಯಾಯಾಲಯದಿಂದ ಕುಲಪತಿಯವರಿಗೆ ಸಮನ್ಸ ಸಹ ಜಾರಿಯಾಗಿತ್ತು. ೨೦೧೪ರಲ್ಲಿ ಧಾರವಾಡ ಉಪನಗರ ಠಾಣೆಯಲ್ಲಿ ಬಸವರಾಜ ಗಿರೆಣ್ಣವರ, ಮಂಜುನಾಥ ಗಿರೆಣ್ಣವರ, ಅಭಿನೇತ್ರಿ ಮಹಾದೇವ ಚೆಟ್ಟಿ, ಮಹಾದೇವ ಚೆಟ್ಟಿ ಸೇರಿದಂತೆ ೧೦ ಜನರ ವಿರುದ್ಧ ಎಫ್‌ಐಆರ್ (ನಂ. ೦೧೫೯/ ೨೦೧೪) ದಾಖಲಾಗಿತ್ತು.
ನಟಾಲಿಯಾ ಅಲಿಯಾಸ್ ನೇತ್ರಾ ಬಸವರಾಜ ಗಿರೆಣ್ಣವರ ದೂರು ದಾಖಲಿಸಿದ್ದು ತಮ್ಮ ಪತಿ,ಮೈದುನರು ಹಾಗೂ ಹಾಲಿ ಕೃಷಿ ವಿ.ವಿ.ಕುಲಪತಿ ಮಹಾದೇವ ಚೆಟ್ಟಿ ಮುಂತಾದವರ ಕುಮ್ಮಕ್ಕಿನಿಂದ ನಿರಂತರ ದೈಹಿಕ ಹಲ್ಲೆ, ಮಾನಸಿಕ ಹಿಂಸೆ, ವರದಕ್ಷಿಣೆ ನೀಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ಬೈದಾಡಿ ರಿವಾಲ್ವರ್ ತೋರಿಸಿ ಕೊಲೆಗೆ ಪ್ರಯತ್ನಿಸಿರುವುದಾಗಿ ದೂರಿನಲ್ಲಿ ಹೇಳಲಾಗಿತ್ತು. ಮಹಿಳಾ ಉದ್ಯೋಗಿಗಳನ್ನು ಕುಲಪತಿಗಳ ಕಚೇರಿಯೇ ಬೇರೆಡೆ ಕರೆದೊಯ್ದು ವಾಪಸ್ ಬರುವಾಗ ಅಪಘಾತದಲ್ಲಿ ಮೃತಪಟ್ಟ ಘಟನೆಯಲ್ಲೂ ಮಹಾದೇವ ಚೆಟ್ಟಿ ವಿರುದ್ದ ಗುರುತರ ಆರೋಪ ಕೇಳಿಬಂದಿತಲ್ಲದೇ ಶ್ರೀರಾಮ ಸೇನೆ ಸಹಿತ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

 

administrator

Related Articles

Leave a Reply

Your email address will not be published. Required fields are marked *