ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆಡಳಿತ ಭವನದ ಎದುರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಿಕ್ಷಕರ ಕಲ್ಯಾಣ ಸಂಘದ ಆಶ್ರಯದಲ್ಲಿ ಶಿಕ್ಷಕರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣಿ 12 ದಿನದಲ್ಲಿ ಮುಂದುವರೆದಿದೆ.
ಇಂದು ಧರಣಿ ನಿರತ ಶಿಕ್ಷಕರನ್ನು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಅವರು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೋನರಡ್ಡಿ, ಶಿಕ್ಷಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಕುಲಪತಿ ಡಾ.ಮಹಾದೇವ ಚೆಟ್ಟಿ ಆಸಕ್ತಿ ತೋರಿಸಬೇಕು. ತಮ್ಮ ಮತ್ತು ಆಡಳಿತ ಮಂಡಳಿ ವ್ಯಾಪ್ತಿಗೊಳಪಡುವ ಬೇಡಿಕೆಗಳನ್ನು ಈಡೇರಿಸದೇ ಇಲ್ಲದ ನೆಪ ಹೆಳುತ್ತಿರುವುದು ಸರಿಯಲ್ಲ. ರಾಜ್ಯದ ಇತರ ವಿಶ್ವವಿದ್ಯಾಲಯಗಳಿಗೆ
ಅನ್ವಯಿಸಿದ ನಿಯಮಾವಳಿಗಳನ್ನು ಈ ವಿಶ್ವವಿದ್ಯಾಲಯದಲ್ಲಿ ಅಳವಡಿಕೆ ಮಾಡಿಕೊಳ್ಳಲಾಗುತ್ತಿದೆ. ಹಳೆ ಮೈಸೂರು ಭಾಗದ ವಿಶ್ವವಿದ್ಯಾಲಯಗಳಲ್ಲಿ ಇಲ್ಲದ ನಿಯಮಗಳನ್ನು ಉತ್ತರ ಕರ್ನಾಟಕ ಭಾಗದ ವಿಶ್ವವಿದ್ಯಾಲಯಗಳಲ್ಲಿ ಅಳವಡಿಸುತ್ತಿರುವುದು ಈ ಭಾಗದಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ.
ಇನ್ನೊಂದೆಡೆ ಶಿಕ್ಷಕರು ಧರಣಿ ನಡೆಸುತ್ತಿದ್ದರೂ ಕೃಷಿ ಸಚಿವರು ಗಮನ ಕೊಡದಿರುವುದು ಸಚಿವರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಶಿಕ್ಷಕರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸದಿರುವುದು ಖಂಡನೀಯ. ಈ ನಿಟ್ಟಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಮತ್ತು ಕುಲಪತಿ ಡಾ.ಮಹಾದೇವ ಚೆಟ್ಟಿ ಕೂಡಲೇ ಮಾತುಕತೆ ನಡೆಸಿ ಶಿಕ್ಷಕರ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಕೋನರಡ್ಡಿ ಆಗ್ರಹಿಸಿದರು.
ಇತ್ತೀಚೆಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಕುಲಪತಿ ಡಾ.ಮಹಾದೇವ ಚೆಟ್ಟಿ ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳ ಮಧ್ಯೆ ಸಂಧಾನ ನಡೆಸಲು ಮಾತುಕತೆ ಕೂಡ ನಡೆಸಿದ್ದರು. ಅಂದಿನ ಸಭೆಯಲ್ಲಿ ಕೈಕೊಂಡ ತೀರ್ಮಾನದಂತೆ ನಾಲ್ಕು ಬೇಡಿಕೆಗಳನ್ನು ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಈಡೇರಿಸಲು ಕುಲಪತಿಗಳು ಒಪ್ಪಿದ್ದರು. ಆದರೆ, ಆಡಳಿತ ಮಂಡಳಿಯ ಸಭೆಯಲ್ಲಿ ತಮಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ ಧರಣಿ ಮುಂದುವರೆಸಲಾಗುತ್ತಿದೆ ಎಂದು ಶಿಕ್ಷಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸಂಘದ ಅಧ್ಯಕ್ಷ ಡಾ.ಐ.ಕೆ.ಕಾಳಪ್ಪನವರ, ಪ್ರಧಾನ ಕಾರ್ಯದರ್ಶಿ ಡಾ.ಮಹಾಂತೇಶ ನಾಯಕ, ಡಾ.ರಾಮನಗೌಡ ಪಾಟೀಲ, ಡಾ. ಸಾಧನಾ ಕಲ್ಲೊಳ್ಳಿ, ಡಾ.ಬಿ.ಎಲ್.ಪಾಟೀಲ, ಡಾ.ಉಮೇಶ ಮುಕ್ತಾಮಠ, ಡಾ. ಸುನೀತಾ, ಡಾ.ಲತಾ ಪೂಜಾರ, ಡಾ.ಪುನೀತಾ, ಡಾ.ಸುಮಾ ಬಿರಾದಾರ, ವೀಣಾ ಜಾಧವ, ಡಾ.ಮಂಜುಳಾ, ಡಾ.ಮಂಜುಳಾ ಮರಳಪ್ಪನವರ, ಡಾ.ಶೋಭಾ ಇಮ್ಮಡಿ, ಡಾ.ಎಂ.ಪಿ.ಶರ್ಮಾ, ಡಾ. ವಿ.ಎಸ್.ಕುಬಸದ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.
18 ರಂದು ಕೃಷಿ ವಿವಿ ಘಟಿಕೋತ್ಸವ
ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ೩೪ನೇ ಘಟಿಕೋತ್ಸವ ಅ. 18 ರಂದು ಬೆಳಿಗ್ಗೆ 11ಕ್ಕೆ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಜರುಗಲಿದೆ.
ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಿ ಪದವಿ ಮತ್ತು ಪ್ರಶಸ್ತಿ ಪ್ರದಾನ ಮಾಡುವರು. ಸೆಲ್ಕೋ ಇಂಡಿಯಾ ಸಂಸ್ಥಾಪಕ ಡಾ.ಹರೀಶ ಹಂದೆ ಮುಖ್ಯ ಅತಿಥಿಯಾಗಿ ಘಟಿಕೋತ್ಸವ ಭಾಷಣ ಮಾಡುವರು.
ಕೃಷಿ ಸಚಿವ ಬಿ.ಸಿ.ಪಾಟೀಲ ಭಾಗವಹಿಸಲಿದ್ದು, ವ್ಯವಸ್ಥಾಪನಾ ಮಂಡಳಿ ಹಾಗೂ ವಿದ್ಯಾವಿಷಯಕ ಪರಿಷತ್ ಸದಸ್ಯರು ಉಪಸ್ಥಿತರಿರುವರು. ಘಟಿಕೋತ್ಸವದಲ್ಲಿ 63 ಡಾಕ್ಟರೇಟ, 247 ಸ್ನಾತಕೋತ್ತರ ಮತ್ತು ೬೦೧ ಸ್ನಾತಕ ಪದವಿ ಸೇರಿದಂತೆ ಒಟ್ಟು 911 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಗುತ್ತಿದೆ. ಅಲ್ಲದೇ ೫೩ ಚಿನ್ನದ ಪದಕಗಳು ಹಾಗೂ ೯ ನಗದು ಬಹುಮಾನಗಳನ್ನು ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ನೀಡಲಾಗುವುದು ಎಂದು ಕೃವಿವಿ ಪ್ರಕಟಣೆ ತಿಳಿಸಿದೆ.
ಕುಲಪತಿ ಚೆಟ್ಟಿ ಹೊಸ ಸಂಪ್ರದಾಯ
ತ್ಸವಕ್ಕೆ ಸಂಬಂಧಿಸಿದಂತೆ ಮಾಧ್ಯಮದವರನ್ನು ಆಮಂತ್ರಿಸಿ ಮಾಹಿತಿ ನೀಡುತ್ತಿದ್ದರು. ಆದರೆ, ಈ ಬಾರಿ ಕುಲಪತಿ ಡಾ.ಮಹಾದೇವ ಚೆಟ್ಟಿ ಅವರು ಮಾಧ್ಯಮದವರನ್ನು ಆಮಂತ್ರಿಸದೇ ಘಟಿಕೋತ್ಸವದ ವಿವರಗಳನ್ನು ಮೇಲ್ ಮೂಲಕ ರವಾನಿಸಿದ್ದಾರೆ. ಈ ಮೂಲಕ ಹೊಸದೊಂದು ಸಂಪ್ರದಾಯಕ್ಕೆ ಡಾ.ಮಹಾದೇವ ಚೆಟ್ಟಿ ನಾಂದಿ ಹಾಡಿದಂತಾಗಿದೆ. ಕೃಷಿ ವಿಶ್ವವಿದ್ಯಾಲಯದ ಶಿಕ್ಷಕರು ನಡೆಸುತ್ತಿರುವ ಧರಣಿ, ಅಪಘಾತದಲ್ಲಿ ಇಬ್ಬರು ಮಹಿಳಾ ನೌಕರರ ಸಾವು, ಕುಲಪತಿಗಳ ಮೇಲಿರುವ ಮಾನಭಂಗ ಮತ್ತು ಕೊಲೆಯತ್ನ ಪ್ರಕರಣಗಳಿಗೆ ಸಂಬಂಧಿಸಿದ ಗುರುತರ ಆರೋಪಗಳು ಮತ್ತಿತರ ಕಾರಣಗಳಿಂದ ಮಾಧ್ಯಮದವರನ್ನು ದೂರವಿಡುವ ದಿಸೆಯಲ್ಲಿ ಈ ಪ್ರಯತ್ನ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.