ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ 34 ನೇ ಘಟಿಕೋತ್ಸವ ನಾಳೆ ಬೆಳಿಗ್ಗೆ 11 ಘಂಟೆಗೆ ರೈತ ಜ್ಞಾನಾಭಿವೃದ್ದಿ ಕೇಂದ್ರದಲ್ಲಿ ಜರುಗಲಿದ್ದು, ಶಿಕ್ಷಕರ ಅನಿರ್ಧಿಷ್ಠಾವಧಿ ಧರಣಿ ಕುಲಪತಿ ಡಾ.ಮಹಾದೇವ ಚೆಟ್ಟಿ ಅವರಿಗೆ ಸಾಕಷ್ಟು ಮುಜುಗರ ಉಂಟು ಮಾಡಲಿದೆ.
ಕೃಷಿ ವಿಶ್ವವಿದ್ಯಾಲಯದ ಆಡಳಿತ ಭವನದ ಎದುರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಿಕ್ಷಕರ ಕಲ್ಯಾಣ ಸಂಘದ ಆಶ್ರಯದಲ್ಲಿ ಶಿಕ್ಷಕರು ಕಳೆದ ದಿ.4 ರಿಂದ ಅನಿರ್ಧಿಷ್ಠಾವಧಿ ಧರಣಿ ನಡೆಸುತ್ತಿದ್ದಾರೆ.
ಈ ಕುರಿತು ಸಭಾಪತಿ ಬಸವರಾಜ ಹೊರಟ್ಟಿ ಅವರ ಮಧ್ಯಸ್ಥಿಕೆಯಲ್ಲಿ ಕುಲಪತಿ ಡಾ.ಮಹಾದೇವ ಚೆಟ್ಟಿ ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳ ನಡೆದ ಸಂಧಾನ ಸಭೆಯಲ್ಲಿನ ತೀರ್ಮಾನದಂತೆ ಕುಲಪತಿ ಡಾ.ಮಹಾದೇವ ಚೆಟ್ಟಿ ಅವರು ಕಾರ್ಯೋನ್ಮುಖರಾಗಿಲ್ಲ. ಹೀಗಾಗಿ ನಮಗೆ ಅನ್ಯಾಯವಾಗುತ್ತಿದೆ. ಈ ಕಾರಣದಿಂದ ತಾವು ಧರಣಿ ಮುಂದುವರೆಸುತ್ತಿದ್ದೇವೆ. ನಾಳೆ ನಡೆಯಲಿರುವ ಘಟಿಕೋತ್ಸವದ ಸಂದರ್ಭಲ್ಲಿಯೂ ಶಾಂತಿಯುತವಾಗಿ ನಮ್ಮ ಬೇಡಿಕೆಗಳಿಗೆ ಆಗ್ರಹಿಸುತ್ತೆವೆ ಎಂದು ಶಿಕ್ಷಕರು ಪಟ್ಟು ಹಿಡಿದ್ದಾರೆ.
ಆದರೆ, ಇದಾವುದಕ್ಕೂ ಕುಲಪತಿ ಡಾ.ಚೆಟ್ಟಿ ಅವರು ತಲೆಕೆಡಿಕೊಳ್ಳುವ ಗೋಜಿಗೆ ಹೋಗಿಲ್ಲ. ಹೀಗಾಗಿ ನಾಳೆಯೂ ಶಿಕ್ಷಕರ ಧರಣಿ ನಡೆಯುವುದು ನಿಶ್ಚಿತವಾಗಿದೆ. ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮತ್ತು ಕೃಷಿ ಸಚಿವ ಬಿ.ಸಿ.ಪಾಟೀಲ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕರ ಧರಣಿ ಕುಲಪತಿ ಡಾ.ಚೆಟ್ಟಿ ಅವರಿಗೆ ಮುಜುಗರ ತರಲಿದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ತಾತ್ಕಾಲಿಕವಾಗಿ ಧರಣಿ ಮುಂದೂಡುವಂತೆ ಪೊಲೀಸರು ಶಿಕ್ಷಕರ ಸಂಘಕ್ಕೆ ಮನವಿ ಮಾಡಿದ್ದಾರೆ. ಆದರೆ, ತಾವು ಶಾಂತಿಯುತವಾಗಿ ಧರಣಿ ನಡೆಸುತ್ತೆವೆ. ಘಟಿಕೋತ್ಸವದ ಘನತೆಗೆ ಧಕ್ಕೆ ಉಂಟು ಮಾಡುವುದಿಲ್ಲ. ಮತ್ತು ಗಣ್ಯರ ಆಗಮನದ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಯಾವುದೇ ಅಡಚಣಿ ಮಾಡುವುದಿಲ್ಲ ಎಂದು ಉತ್ತರಿಸಿರುವ ಸಂಘದ ಪದಾಧಿಕಾರಿಗಳು, ರಾಜ್ಯಪಾಲರು ಮತ್ತು ಕೃಷಿ ಸಚಿವರ ಬಳಿ ನಮಗೆ ಆಗಿರುವ ಅನ್ಯಾಯ ನಿವೇದಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೃಷಿ ಸಚಿವರ ಪ್ರತಿಕ್ರಿಯೆ ಏನು?
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಿಕ್ಷಕರು ಧರಣಿ ನಡೆಸುತ್ತಿದ್ದು, ಶಿಕ್ಷಕರ ಸಮಸ್ಯೆಗಳಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಸ್ಪಂದಿಸುತ್ತಾರೋ ಅಥವಾ ಇಲ್ಲವೋ ಎಂಬುದು ನಾಳೆ ಗೊತ್ತಾಗಲಿದೆ. ನಾಲೀನ ಘಟಿಕೋತ್ಸವದಲ್ಲಿ ಸಚಿವರು ಕೂಡ ಭಾಗವಹಿಸುತ್ತಿದ್ದು, ಈ ಸಮಸ್ಯೆ ಇತ್ಯರ್ಥಕ್ಕೆ ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದು ಕೂಡ ಮುಖ್ಯವಾಗಿದೆ. ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಚೆಟ್ಟಿ ಅವರನ್ನು ಸುತ್ತಿಕೊಂಡಿರುವ ಹಲವು ಅನುಮಾಗಳಿಗೆ ಈ ಭಾಗದವರೇ ಆದ ಬಿ.ಸಿ.ಪಾಟೀಲರು ಯಾವ ರೀತಿ ಪ್ರತಿಕ್ರಿಯಿಸುವರು ನೋಡಬೇಕಿದೆ.