ಹುಬ್ಬಳ್ಳಿ: ’ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಲಾದ ಸೋಮು ಅವರಾಧಿಯವರನ್ನು ನವನಗರ ಎಪಿಎಂಸಿ ಠಾಣೆ ಪೊಲೀಸರು ಬೆಳಗಿನಜಾವ ಬಂಧಿಸಿದ್ದಾರೆನ್ನಲಾಗಿದೆ.
ವಶಕ್ಕೆ ಪಡೆದಿರುವ ಪೊಲೀಸರು ಇಂದು ದೂರು ನೀಡಿದ ವಿಶ್ವನಾಥ ಬೂದೂರು ಸಹಿತ ಅನೇಕರನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಪಂಚನಾಮೆ ನಡೆಸಿದ್ದಾರೆನ್ನಲಾಗಿದೆ.
ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಲಿಂಗಾಯತ ಸಮುದಾಯದ ಪ್ರಮುಖರು ನಿನ್ನೆ ತಡರಾತ್ರಿಯ ತನಕವೂ ನವನಗರದ ಎಪಿಎಂಸಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಅವರಾದಿಯವರ ಬಂಧನಕ್ಕೆ ಪಟ್ಟು ಹಿಡಿದಿದ್ದರು.
ನಿನ್ನೆ ಮಧ್ಯಾಹ್ನ ಪೊಲೀಸ್ ಠಾಣೆ ಎದುರು ಪ್ರತಿಭಟಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಂಜೆ ಹುಬ್ಬಳ್ಳಿ-ಧಾರವಾಡ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಶಾಸಕ ಅರವಿಂದ ಬೆಲ್ಲದ ಸಹ ಪಾಲ್ಗೊಂಡಿದ್ದರು.
ಆರೋಪಿಯನ್ನು ಬಂಧಿಸುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರೂ ಕಮಿಷನರ್ ಲಾಬೂರಾಮ್ ಕಾನೂನು ಪ್ರಕಾರ ಕ್ರಮದ ಭರವಸೆ ನೀಡಿದ್ದರಿಂದ ಪ್ರತಿಭಟನೆ ವಾಪಸ್ ಪಡೆದಿದ್ದರು.
ನಿನ್ನೆ ಪ್ರತಿಭಟನೆ ನಡೆಸಿದವರ ಮೇಲೆ ಎಫ್ ಐ ಆರ್ ದಾಖಲು ನಿಶ್ಚಿತ ಎನ್ನಲಾಗುತ್ತಿದ್ದು ಡಿಸಿಪಿ ರಾಮರಾಜನ್ ವರ್ಗಾವಣೆ ನಿಶ್ಚಿತ ಎಂಬ ಮಾತುಗಳು ಕೇಳಿ ಬರಲಾರಂಬಿಸಿವೆ.
ಡಿಸಿಪಿ ಸಸ್ಪೆಂಡ್ ಮಾಡಿ
ಪ್ರಾರ್ಥನಾ ಮಂದಿರದಲ್ಲಿ ಎಲ್ಲ ಧರ್ಮದವರಿಗೂ ಪ್ರಾರ್ಥನೆ ಮಾಡಿಸುವುದಾಗಿ ಹೇಳಿ ಬೂದೂರು ಅವರನ್ನು ಕರೆಯಿಸಿಕೊಂಡು, ಯೇಸು ಭಕ್ತನಾದ ಬಳಿಕ ತಿಂಗಳಿಗೆ ೪ ಲಕ್ಷ ಗಳಿಸುತ್ತಿದ್ದೇನೆ. ನೀನೂ ಯೇಸುವನ್ನು ನಂಬಿದರೆ ನಿನಗೂ ಅಷ್ಟೊಂದು ಹಣ ಸಿಗುತ್ತದೆ ಎಂದು ಹೇಳಿದ ಆರೋಪಿ ಸೋಮು ಅವರಾದಿಯನ್ನು ನಿನ್ನೆಯೇ ಬಂಧಿಸಬೇಕಾಗಿತ್ತು. ಇದರಲ್ಲಿ ಡಿಸಿಪಿ ರಾಮರಾಜನ್ ಕೈವಾಡವಿದ್ದು ಅವರನ್ನೂ ಕೂಡ ಸಸ್ಪೆಂಡ್ ಮಾಡಬೇಕು.