ಧಾರವಾಡ: ಇಲ್ಲಿನ ಕಲ್ಯಾಣ ನಗರದ ಸಿದ್ಧರಾಮೇಶ್ವರ ಸಭಾಂಗಣದಲ್ಲಿ ಡಾ. ಸಿ. ಆರ್. ಯರವಿನತೆಲಿಮಠರ ’ಎನಗಿಂತ ಕಿರಿಯರಿಲ್ಲ’ ಆತ್ಮಕಥೆ ಬಿಡುಗಡೆ ಕಾರ್ಯಕ್ರಮ ರವಿವಾರ ಜರುಗಿತು.
ಹಿರಿಯ ಸಾಹಿತಿ ಮತ್ತು ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಅವರು ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿ, ’ಎನಗಿಂತ ಕಿರಿಯರಿಲ್ಲ’ ಗ್ರಂಥವು ಸಾತ್ವಿಕತೆ ಮತ್ತು ವಿನಯವಂತಿಕೆಗಳನ್ನು ರೂಢಿಸಿಕೊಂಡ ಮಧ್ಯಮ ವರ್ಗದ ಕುಟುಂಬದ ಬಾಲಕನ ಬದುಕಿನ ಹೋರಾಟದ ಕಥನವನ್ನು ಚಾರಿತ್ರಿಕ ರೂಪದಲ್ಲಿ ದಾಖಲಿಸಿದ ಅಪರೂಪದ ಗ್ರಂಥ. ತುಂಬು ಕುಟುಂಬದ ಪರಿಸರ, ತಾಯ್ತನದ ಪ್ರೀತಿ, ವಾತ್ಸಲ್ಯದ ಬದುಕು, ಹಿರಿಯರ ಆಶೀರ್ವಾದ ಈ ಎಲ್ಲ ಅಂಶಗಳನ್ನು ಅತ್ಯಂತ ಸರಳವಾಗಿ ಮತ್ತು ಕರಾರುವಕ್ಕಾಗಿ ದಾಖಲಿಸಿದ್ದಾರೆ. ಈ ಕೃತಿಯು ಡಾ.ಜಿ.ಎಸ್.ಆಮೂರ ಆತ್ಮಕಥೆಯಂತೆ ಸ್ವ ವೈಭವಿಕರಣ ಮತ್ತು ಬೇರೊಬ್ಬರ ತೇಜೋವಧೆಯನ್ನು ಮಾಡದೇ ಅಂದಿನ ಕಾಲದ ವಿವರಗಳನ್ನು ಸರಳ ಶೈಲಿಯಲ್ಲಿ ನಿರೂಪಿಸಿದ್ದಾರೆ ಎಂದರು.
ಗ್ರಂಥ ಕುರಿತು ಮಾತನಾಡಿದ ಉಪನ್ಯಾಸಕ ಡಾ.ಶ್ರೀಧರ್ ಹೆಗಡೆ ಭದ್ರನ್, ’ಎನಗಿಂತ ಕಿರಿಯರಿಲ್ಲ’ ಎನ್ನುವ ಬಸವಣ್ಣನವರ ವಚನದ ಸಾಲನ್ನು ತಿಳಿಸುವ ಈ ಕೃತಿಯು ಶರಣರ ಬದುಕಿನ ತತ್ವವನ್ನು ಪಾಲಿಸುವ ಸಾಧಕರೊಬ್ಬರ ಕಥೆಯಾಗಿದೆ. ಇಲ್ಲಿ ಪರ್ವಗಳ ರೂಪದಲ್ಲಿ ಅಧ್ಯಾಯಗಳು ದಾಖಲಾಗಿವೆ. ಪರ್ವ ಎಂದರೆ ಹಬ್ಬ ಎಂದರ್ಥ. ಅಂದರೆ ಬದುಕಿನ ಪ್ರತಿಯೊಂದು ಸಂದರ್ಭವನ್ನು ಸಂಘರ್ಷದ ಮೂಲಕ ಹೋರಾಡುತ್ತಲೇ ಅವುಗಳನ್ನು ಹಬ್ಬವಾಗಿ ಪರಿವರ್ತಿಸಿಕೊಂಡವರು ಯರವಿನತೆಲಿಮಠ. ಅವರ ಶಿಸ್ತು, ಅಧ್ಯಯನ ಶೀಲತೆ, ವಿನಯವಂತಿಕೆ, ವಿದ್ಯಾರ್ಥಿಗಳ ಕುರಿತ ಕಾಳಜಿ ಎಲ್ಲವೂ ಇಂದಿನ ಜನತೆಗೆ ಮಾದರಿಯಾಗಿವೆ ಎಂದರು.
ಗ್ರಂಥದ ಲೇಖಕ ಡಾ.ಸಿ.ಆರ್.ಯರವಿನತೆಲಿಮಠ ಅವರು ಮಾತನಾಡಿ, ನನ್ನ ಪ್ರಯತ್ನ ಹಾಗೂ ಗುರು ಹಿರಿಯರ ಆಶೀರ್ವಾದಿಂದ ನಾನು ಈ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ವಿಶ್ವವಿದ್ಯಾಲಯಲ್ಲಿ ಪ್ರಾಧ್ಯಾಪಕನಾಗಿ ವಿಶ್ರಾಂತಿಯ ನಂತರ ಬರಹದಲ್ಲಿ ತೊಡಗಿಕೊಂಡದ್ದು ನನಗೆ ಅತ್ಯಂತ ಖುಷಿಕೊಟ್ಟಿದೆ. ಈ ಕಾರಣಕ್ಕಾಗಿಯೇ ಅನೇಕ ಸಾಹಿತ್ಯ ಕಾರ್ಯಗಳ ಜೊತೆಗೆ ನನ್ನ ಆತ್ಮಕಥೆಯನ್ನು ಬರೆಯಲು ಸಾಧ್ಯವಾಯಿತು ಎಂದರು.
ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಹಿರಿಯ ಲೇಖಕ ಡಾ.ವೀರಣ್ಣ ರಾಜೂರ ವಹಿಸಿದ್ದರು. ಗ್ರಂಥ ದಾಸೋಹಿಗಳಾದ ಎಸ್.ಎಸ್.ಹಿರೇಮಠ ಜಾಲಿಹಾಳ ಮತ್ತು ಮಹಾನಂದಾ ದಿಗ್ಗಾಂವಕರ ಅವರನ್ನು ಗೌರವಿಸಲಾಯಿತು. ಪ್ರಾಚಾರ್ಯ ಶಶಿಧರ ತೋಡಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಈರಣ್ಣ ಇಂಜಗನೇರಿ ಪರಿಚಯಿಸಿದರು. ಡಾ. ಕೇಯೂರ ಕರಗುದರಿ ನಿರೂಪಿಸಿದರು. ಡಾ. ಕುಮಾರ ಹಿರೇಮಠ ವಂದಿಸಿದರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಸಾಹಿತಿಗಳಾದ ಡಾ. ವೀಣಾ ಶಾಂತೇಶ್ವರ, ಮಾಲತಿ ಪಟ್ಟಣಶೆಟ್ಟಿ, ಡಾ.ಬಾಳಣ್ಣ ಶೀಗೀಹಳ್ಳಿ ಹಾಗೂ ಯರವಿನತೆಲಿ ಮಠರ ಶಿಷ್ಯರು ಕಾರ್ಯಕ್ರಮದಲ್ಲಿದ್ದರು.