ಧಾರವಾಡ: ಅಕ್ಟೋಬರ್ 28 ರಿಂದ 30 ರವರೆಗೆ ಮೂರು ದಿನಗಳ ಕಾಲ ಧಾರವಾಡ ತಾಲೂಕಿನ ಗರಗ ಗ್ರಾಮದ ಬಳಿ ಇರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿ ಮಂಡಳಿಯ ಬೈಠಕ್ ನಡೆಯಲಿದೆ ಎಂದು ಸಂಘದ ಪ್ರಚಾರ ಪ್ರಮುಖರಾದ ಸುನೀಲ ಅಂಬೇಕರ ಹೇಳಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಕಾರ್ಯಕಾರಿ ಬೈಠಕ್ ಮಾಡುತ್ತೇವೆ. 350 ಪ್ರಾಂತದ ಎಲ್ಲ ಪ್ರಮುಖ ಕಾರ್ಯಕರ್ತರು ಬೈಠಕ್‌ಗೆ ಬರುತ್ತಾರೆ ಎಂದರು.
ಮುಂದಿನ ಯೋಜನೆಗಳ ಕುರಿತು ಕಾರ್ಯಕರ್ತರೊಂದಿಗೆ ಬೈಠಕ್ ಹಾಗೂ ಚರ್ಚೆ ನಡೆಯಲಿದೆ. ಸದ್ಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲೆ ದಾಳಿ, ದೇವಾಲಯಗಳ ಧ್ವಂಸಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಕೊರೊನಾ ಬಗ್ಗೆ ಎಲ್ಲ ಜಾಗೃತಿಗಳನ್ನಿಟ್ಟುಕೊಂಡೇ ಕಾರ್ಯಕ್ರಮ ನಡೆಸಲಾಗುತ್ತಿದೆ. ಜುಲೈನಲ್ಲೇ ಈ ಬೈಠಕ್ ನಡೆಸಬೇಕಾಗಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿತ್ತು ಎಂದರು.
1925ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿದೆ. ಅದಕ್ಕಾಗಿ 100 ವರ್ಷದ ಕಾರ್ಯಕ್ರಮದ ಬಗ್ಗೆಯೂ ಚರ್ಚೆ ನಡೆಯಲಿದೆ. ಮೂರು ವರ್ಷದಲ್ಲಿ ಏನು ಮಾಡಬಹುದು? ಎಲ್ಲಿ ನಮ್ಮ ಸಂಘ ತಲುಪಿಲ್ಲ ಎನ್ನುವುದರ ಬಗ್ಗೆ ವಿಚಾರ ವಿನಿಮಯಗಳು ನಡೆಯುತ್ತವೆ. ಆದರೆ, ಈ ಕಾರ್ಯಕ್ರಮದಲ್ಲಿ ಯಾವುದೇ ಮಂತ್ರಿಗಳು ಭಾಗವಹಿಸುವುದಿಲ್ಲ ಎಂದರು.
ಮಹ್ಮದ್ ಶಮಿ ಓರ್ವ ಕ್ರೀಡಾಪಟು ಎಂದು ನೋಡಿ
ಧಾರವಾಡ: ಮೊನ್ನೆ ನಡೆದ ಭಾರತ ಮತ್ತು ಪಾಕಿಸ್ತಾನ ಟಿ-20 ಕ್ರಿಕೆಟ್ ಮ್ಯಾಚ್‌ನಲ್ಲಿ ಪಾಕಿಸ್ತಾನ ಗೆದ್ದಿದ್ದಕ್ಕೆ ಭಾರತದ ವೇಗಿ ಬೌಲರ್ ಮಹ್ಮದ್ ಶಮಿ ಮೇಲೆ ಗಂಭೀರ ಆರೋಪಗಳು ಕೇಳಿ ಬಂದಿವೆ. ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರ ಪ್ರಮುಖರಾದ ಸುನೀಲ ಅಂಬೇಕರ ಅವರು ಸೂಕ್ಷ್ಮ ಉತ್ತರವೊಂದನ್ನು ಕೊಟ್ಟಿದ್ದಾರೆ.
ಧಾರವಾಡದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕ್ರೀಡೆ ಮತ್ತು ಕ್ರೀಡಾಪಟುಗಳು ಯಾವುದೇ ಕಾರಣಕ್ಕೂ ಆ ರೀತಿ ನೋಡಬಾರದು ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್ ಮೇಲೆ ಮಾಡುತ್ತಿರುವ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸಂಘ ತನ್ನ ಕೆಲಸ ಮಾಡುತ್ತಿದೆ. ಸಾಮಾಜಿಕ ಸೇವೆಗಾಗಿ ಸಂಘ ಸಾಕಷ್ಟು ಕೆಲಸ ಮಾಡುತ್ತಿದೆ. ಈ ಸಂದರ್ಭದಲ್ಲಿ ಇಷ್ಟನ್ನೇ ಹೇಳಬಹುದು ಎಂದರು.
ಇನ್ನು ಪಂಜಾಬ್ ಮಾಜಿ ಸಿಎಂ ಅಮರೇಂದರ್ ಸಿಂಗ್ ಅವರು ಪಾಕಿಸ್ತಾನದ ಪತ್ರಕರ್ತೆ ಜೊತೆ ಇರುವ ಫೋಟೋ ವೈರಲ್ ಆಗಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆ ಬಗ್ಗೆ ಅ.30 ರಂದು ಮಾತನಾಡುತ್ತೇವೆ ಎಂದರು.