ಹುಬ್ಬಳ್ಳಿ : ನಗರದ ಗೋಕುಲರಸ್ತೆಯ ಅಶೋಕ ವನ ಬಡಾವಣೆಯಲ್ಲಿ ಹಾಡುಹಗಲೇ ಕಳ್ಳರು ಮುಂಬಾಗಿಲಿನ ಕೀಲಿ ಮುರಿದು ಸುಮಾರು 10 ಲಕ್ಷ ರೂ ಮೌಲ್ಯದ 20 ತೊಲೆ ಬಂಗಾರದ ಆಭರಣಗಳನ್ನು ಕಳುವು ಮಾಡಿದ ಘಟನೆ ಸೋಮವಾರ ನಡೆದಿದೆ.
ಅಟೋಮೋಬೈಲ್ ಅಂಗಡಿ ಹೊಂದಿರುವ ರಾಹುಲ್ ರಾಮಕೃಷ್ಣ ಟಿಕಾರೆ(36) ಎಂಬುವವರ ಮನೆಯಲ್ಲಿಯೇ ಕಳ್ಳತನ ನಡೆದಿದ್ದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯ ಒಳಗೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು ಮನೆಯ ಒಳಕ್ಕೆ ನುಗ್ಗಿ ಕಪಾಟಿನಲ್ಲಿದ್ದ ಸುಮಾರು 10 ಲಕ್ಷ ಮೌಲ್ಯದ ಒಡವೆ ಹಾಗೂ 15ರಿಂದ 20 ಸಾವಿರ ನಗದನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ರಾಹುಲ್ ಬೆಳಿಗ್ಗೆ 10ರ ಸುಮಾರಿಗೆ ಅಂಗಡಿಗೆ ತೆರಳಿದ್ದು ಇವರ ಪತ್ನಿ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕೆಲಸಕ್ಕೆ ಹೋಗಿದ್ದಾರೆ. ಇವರ ತಾಯಿ ಸಹ ಬೇರೆ ಊರಿಗೆ ಹೋದ ಹಿನ್ನೆಲೆಯಲ್ಲಿ ಮನೆಗೆ ಬೀಗ ಹಾಕಿ ಹೋದಾಗ ಕಳುವು ಮಾಡಲಾಗಿದೆ.
ಅಬಕಾರಿ ನಿವೃತ್ತ ಡಿಎಸ್ಪಿ ಈಳಿಗೇರ ಇವರ ಮನೆಯ ಕೆಳ ಅಂತಸ್ತಿನಲ್ಲಿ ರಾಹುಲ್ ಟಿಕಾರೆ ಬಾಡಿಗೆಗೆ ಇದ್ದು 12ರ ಸುಮಾರಿಗೆ ಮೇಲಂತಸ್ತಿನಲ್ಲಿರುವ ಮನೆಯ ಮಾಲಕರು ಬಾಗಿಲು ತೆರದಿರುವುದನ್ನು ನೋಡಿ ಬಾಗಿಲು ಹಾಕದೇ ಹೋಗಿದ್ದೀರಲ್ಲ ಎಂದು ಕರೆ ಮಾಡಿದಾಗ ಕೂಡಲೆ ಧಾವಿಸಿ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಗೋಕುಲ ರಸ್ತೆ ಪೊಲೀಸ್ ಠಾಣೆಗೆ ಮಾಹಿತಿ ಸಿಕ್ಕ ತಕ್ಷಣ ಇನ್ಸಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರಲ್ಲದೇ ಬೆರಳಚ್ಚು ತಜ್ಞರು ಪರಿಶೀಲಿಸಿದ್ದಾರೆ.ಶ್ವಾನ ದಳವನ್ನು ಕರೆಸಲಾಗಿತ್ತು.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸೆಂಟರ್ ಲಾಕ್ ಹಾಕಿದಲ್ಲಿ ಕಳ್ಳರಿಗೆ ಬೀಗ ಒಡೆದು ಒಳಹೋಗುವುದು ಕಷ್ಟಸಾಧ್ಯ. ಹಾಗಾಗಿ ಸೆಂಟರ್ಲಾಕ್ ಹಾಕಲು ಅಲ್ಲದೇ ಸಿಸಿಟಿವಿ ಅಳವಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.
ಸಿಸಿಟಿವಿಯಲ್ಲಿ ಸುಳಿವು
ಈಗಾಗಲೇ ಕಾರ್ಯ ಪ್ರವೃತ್ತರಾದ ಗೋಕುಲ ಠಾಣೆ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿವಿಧ ಆಯಾಮಗಳಲ್ಲಿ ಕಳ್ಳರಿಗಾಗಿ ಜಾಲ ಬೀಸಿದ್ದು ಸಿಸಿಟಿವಿ ಮುಂತಾದವುಗಳನ್ನು ಪರಿಶೀಲಿಸಿದ್ದಾರೆನ್ನಲಾಗಿದೆ.
ಈಗಾಗಲೇ ಸಿಸಿಟಿವಿಯಲ್ಲಿ ಸಂಶಯಾಸ್ಪದವಾಗಿ ಅಡ್ಡಾಡಿದ ನಾಲ್ವರ ಸುಳಿವು ದೊರೆತಿದೆ ಎನ್ನಲಾಗಿದ್ದು, ಆ ನಿಟ್ಟಿನಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆನ್ನಲಾಗಿದೆ.