ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಬೆಂಗಳೂರಿನಲ್ಲಿ ಆಯೋಜಿಸಿದ್ದ 25 ವರ್ಷದ ಒಳಗಿನವರ ಎಸ್.ಎ. ಶ್ರೀನಿವಾಸನ್ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಧಾರವಾಡ ವಲಯ ತಂಡ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದೆಯಲ್ಲದೇ ಸುಮಾರು 23 ವರ್ಷಗಳ ನಂತರ ಮತ್ತೊಮ್ಮೆ ಪುರಸ್ಕಾರದ ಪುಳಕದಲ್ಲಿ ಮಿಂದೆದ್ದಿದೆ.
ಸೋಮವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ತುಮಕೂರ ವಲಯವನ್ನು ಏಳು ವಿಕೆಟ್‌ಗಳಿಂದ ಹಿಮ್ಮೆಟ್ಟಿಸಿ ಗೆಲುವು ದಾಖಲಿಸಿತು.
ಮೊದಲು ಬ್ಯಾಟ್ ಮಾಡಿ ತುಮಕೂರು ವಲಯ 49.5 ಓವರ್‌ಗಳಲ್ಲಿ 195 ರನ್ ಗಳಿಸಿದರೆ, ಧಾರವಾಡ ವಲಯ 31.4 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿ ವಿಜಯದ ಕೇಕೆ ಹಾಕಿತು.
ಸುಧನ್ವ ಕುಲಕರ್ಣಿ (ಅಜೇಯ 50), ವಿಜಯಕುಮಾರ ಪಾಟೀಲ (115) ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಸೋಮೇಶ್ವರ ನಾವಳ್ಳಿಮಠ ಹಾಗೂ ರೋಹಿತ್ ಕುಮಾರ ತಲಾ ಮೂರು ವಿಕೆಟ್ ಉರುಳಿಸಿದರು.
ಸ್ವಪ್ನಿಲ್ ಎಳವೆ ನಾಯಕತ್ವದ ಧಾರವಾಡ ವಲಯ ತಂಡ ಟೂರ್ನಿಯಲ್ಲಿ ಆಡಿದ ಎಲ್ಲಾ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಒಟ್ಟು ೨೦ ಅಂಕಗಳನ್ನು ಗಳಿಸಿದೆ. ’ಎ’ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದೆ.
ಒಟ್ಟು 16 ವಿಕೆಟ್‌ಗಳನ್ನು ಕಬಳಿಸಿದ ಧಾರವಾಡ ವಲಯದ ರೋಹಿತ್ ಕುಮಾರ ಎ.ಸಿ. ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರ ಹೊಮ್ಮಿದರು.
ಮೂರನೇ ಬಾರಿ ಪ್ರಶಸ್ತಿಯ ಗರಿ
1978ರಲ್ಲಿ ಕೈಲಾಸ ಮುನಾವರ ನಾಯಕತ್ವದಲ್ಲಿ ಧಾರವಾಡ ವಲಯ ಶ್ರೀನಿವಾಸ್ ಟ್ರೋಫಿ ಎತ್ತಿ ಹಿಡಿದರೆ, ಅದಾದ 20ವರ್ಷಗಳ ಬಳಿಕ 1998ರಲ್ಲಿ ಮಹೇಶ ಪಾಟೀಲ ಮುನ್ನಡೆಸಿದ್ದ ತಂಡ ಮೈಸೂರು ವಲಯದ ನಂತರ ಎರಡನೆ ಬಾರಿ ಪ್ರಶಸ್ತಿಗೆ ಭಾಜನವಾಗಿತ್ತು. ಈಗ ಸ್ವಪ್ನಿಲ್ ಎಳವೆ ತಂಡ ಮೂರನೇ ಬಾರಿಗೆ ಪ್ರಶಸ್ತಿಗೆ ಭಾಜನವಾಗಿದೆ.