ಹುಬ್ಬಳ್ಳಿ-ಧಾರವಾಡ ಸುದ್ದಿ

ಸಾಕೇತ ನೃತ್ಯ ಶಾಲೆಯ ಸೀಮಾ ಶಿಷ್ಯೆ ಶೃತಿ ರಂಗಪ್ರವೇಶ

ಧಾರವಾಡ: ಅದೊಂದು ರಸಮಯ ಸಂಜೆ. ಧಾರವಾಡದ ಸೃಜನಾ ರಂಗಮಂದಿರದ ವೇದಿಕೆ. ಮನಸೂರೆಗೊಳ್ಳುವ, ಹಿತವಾದ ತಾಳ, ಲಯಗಳನ್ನೊಳಗೊಂಡ ನೃತ್ಯಕಲೆಯ ಅಮೋಘ ಪ್ರದರ್ಶನ. ಧಾರವಾಡದ ಸಾಕೇತ ನೃತ್ಯ ಶಾಲೆಯ ನಿರ್ದೇಶಕಿ, ಖ್ಯಾತ ವಿದುಷಿ ಸೀಮಾ ಕುಲಕರ್ಣಿ ಅವರ ಶಿಷ್ಯೆ ಕುಮಾರಿ ಶೃತಿ ಕುಲಕರ್ಣಿ ಅವರ ರಂಗಪ್ರವೇಶದ ಅಪರೂಪದ ಸಂದರ್ಭ.


ಇಲ್ಲಿ ಗುರು ವಿದುಷಿ ಸೀಮಾ ತಮ್ಮ ಶಿಷ್ಯೆಗೆ ಧಾರೆ ಎರೆದ ಭರತನಾಟ್ಯ ಕಲೆಯನ್ನು ಗುರುವೂ ಅಚ್ಚರಿಗೊಳ್ಳುವಂತೆ ಚಾಚೂ ತಪ್ಪದಂತೆ, ಮೋಹಕ ವಾಗಿ ಪ್ರದರ್ಶಿಸಿ, ಪ್ರೇಕ್ಷಕರ ಹಾಗೂ ಗುರುಗಳ ಮೆಚ್ಚುಗೆಗೆ ಪಾತ್ರರಾದ ವರು ಕುಮಾರಿ ಶೃತಿ ಕುಲಕರ್ಣಿ.


ಸುಮಾರು ೪-೫ ಗಂಟೆಗಳ ಅವಧಿಯಲ್ಲಿ ದಣಿವು ಎಂಬುದನ್ನೇ ತೋರದ ಉತ್ಸಾಹಭರಿತ ನೃತ್ಯದಲ್ಲಿ, ಹಲವು ವರ್ಷಗಳ ಕಠಿಣ ಪರಿಶ್ರಮ ಎದ್ದು ಕಾಣುತ್ತಿತ್ತು. ಪುಷ್ಪಾಂಜಲಿ, ಗಣಪತಿ ಸ್ತುತಿ, ಶಿವಸ್ತುತಿ, ವರ್ಣ ಮುಂತಾದ ವಸ್ತುವಿಷಯಗಳನ್ನೊಳಗೊಂಡ ಪ್ರತಿಯೊಂದು ಪ್ರದರ್ಶನವು ವಿಭಿನ್ನವಾಗಿ ಯೂ, ಶಾಸ್ತ್ರೀಯವಾಗಿ ಪರಿಪೂರ್ಣವಾಗಿಯೂ ಇತ್ತು. ವಿದುಷಿ ಸೀಮಾ ಅವರ ನುರಿತ ನಟುವಾಂಗ, ಶಿವಕುಮಾರ ಅವರ ಕಂಚಿನ ಕಂಠದ ಗಾಯನ ಹಾಗೂ ಕೊಳಲು, ವಾಯಲಿನ್ ವಾದ್ಯವೃಂದ ಇವೆಲ್ಲವು ನಂಬಲಸಾಧ್ಯವಾಗುವಷ್ಟು ಏಕತಾನತೆಯನ್ನು ಹೊಂದಿದ್ದವು.


ಕುಮಾರಿ ಶೃತಿಯ ಆಂಗಿಕ ಭಾಷೆ, ಹೆಜ್ಜೆ, ಮುಖಭಾವಗಳು ಅತ್ಯಂತ ಆಕರ್ಷಕ ವಾಗಿದ್ದು ಕಣ್ರೆಪ್ಪೆಯನ್ನೂ ಮಿಟುಕಿಸದಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದವು. ಶೃತಿ ಅವರು ಕೇವಲ ವೇದಿಕೆಯನ್ನಷ್ಟೇ ಅಲ್ಲ, ಅಲ್ಲಿ ನೆರೆದ ಪ್ರತಿಯೊಬ್ಬರ ಮೈಮನಗಳನ್ನೂ ಆವರಿಸಿಕೊಂಡಿದ್ದರು. ಇಲ್ಲಿ ಗುರುವಿನ ಉನ್ನತಮಟ್ಟದ, ಅವಿರತ ತರಬೇತಿ ಮತ್ತು ಮಾರ್ಗದರ್ಶನ ಹಾಗೂ ಒಬ್ಬ ಸಮರ್ಪಿತ ಶಿಷ್ಯೆಯ ಪರಿಶ್ರಮ ಹಾಗೂ ಛಲದ ಪರಿಣಾಮ ಅತ್ಯಂತ ಗಮನೀಯವಾಗಿತ್ತು.


ಯಾವುದೇ ಒಂದು ಕಾರ್ಯಕ್ರಮ ಏರ್ಪಾಡಾಗಬೇಕೆಂದರೆ ಅದಕ್ಕೆ ಬೇಕಾದ ಪೂರ್ವತಯಾರಿ ಅತ್ಯಂತ ಮಹತ್ವದ್ದಾಗಿರುತ್ತದೆ. ಸಾಕೇತ ಸ್ಕೂಲ ಆಫ್ ಡಾನ್ಸ್, ಒಂದು ಅದ್ಭುತ ಕಾರ್ಯವೈಖರಿಯಿಂದ ಕೂಡಿದ ಕೇಂದ್ರವಾಗಿದೆ. ತುಂಬಾ ವೃತ್ತಿಪರವಾಗಿಯೂ, ಭಾವನೆಗಳಿಗೆ ಹತ್ತಿರವಾಗಿ ಯೂ, ಸಮಯ ನಿರ್ವಹಣೆ ಮತ್ತು ವ್ಯವಸ್ಥಿತವಾದ ಸಿದ್ಧತೆಯೊಂದಿಗೆ ಇಡೀ ನೃತ್ಯತಂಡ ಕಾರ್ಯನಿರ್ವಹಿಸಿದ್ದು ಗಮನ ಸೆಳೆಯಿತು.

ಶ್ರೀಮತಿ ಮಾಯಾ ರಾಮನ್ ಅವರ ಸುಂದರ ವಾಕ್‌ಲಹರಿ, ಸ್ಪಷ್ಟತೆ, ಮತ್ತು ಧಾರವಾಡದ ಜವಾರಿ ಭಾಷಾಮಿಶ್ರಿತ ನಿರೂಪಣೆ ತುಂಬಾ ಆತ್ಮೀಯ ವಾಗಿತ್ತು. ನಟರಾಜನ ಸುಂದರ ವಿಗ್ರಹದ ಅಲಂಕಾರ ಹಾಗೂ ಭಕ್ತಿಪೂರ್ವಕ ನಮನದೊಂದಿಗೆ ನಮ್ಮ ನಾಡಿನ ಅಮೂಲ್ಯ ಗುರು-ಶಿಷ್ಯ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುವ ನಿರಂತರ ಪ್ರಯತ್ನ ವನ್ನು ಸಾಕೇತ ನೃತ್ಯಶಾಲೆ ಎತ್ತಿಹಿಡಿಯಿತು.

ಆರಂಭಿಕ ಕೆಲವು ಪ್ರದರ್ಶನಗಳ ನಂತರ ಚೊಕ್ಕವಾಗಿ ನಡೆದ ಸಭಾ ಕಾರ್ಯಕ್ರಮ ಎಲ್ಲರನ್ನು ಆಕರ್ಷಿಸಿತು. ಅತಿಥಿಗಳಾಗಿ ಸಮಾಜದ ಕೆಲವು ಗಣ್ಯವ್ಯಕ್ತಿಗಳ ಉಪಸ್ಥಿತಿ, ಅವರ ಹಿತನುಡಿಗಳು, ಸಮಾಜಮುಖಿ ಕೆಲಸ ಗಳನ್ನು ಮಾಡುತ್ತಿರುವ ಹಲವರ ಸನ್ಮಾನ, ಅವರ ಅನಿಸಿಕೆಗಳು, ಅಲ್ಲದೇ ಮುಖ್ಯವಾಗಿ ಕುಮಾರಿ ಶೃತಿಯ ಕುಟುಂಬಸ್ಥರ ಆಸ್ಥೆ, ಅಭಿಮಾನ, ಉತ್ಸಾಹ ಮತ್ತು ಸಾಕೇತ ಸ್ಕೂಲಿಗೆ ತಮ್ಮದೇ ಆದ ಕೊಡುಗೆ ನೀಡಿದ ಅದರ ಸಿಬ್ಬಂದಿಗೆ ಗೌರವ ಸೂಚಿಸುವ ಮೂಲಕ ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ಮೂಡಿಬಂದಿತು. ಸೀಮಾ ಅವರಿಗೆ ಬೆನ್ನೆಲುಬಾಗಿ ನಿಂತು ಹೆಜ್ಜೆಹೆಜ್ಜೆಯೂ ಅವರಿಗೆ ತಮ್ಮ ತುಂಬುಹೃದಯದ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತಿರುವ ಅವರ ಪತಿ ಡಾ. ಕಿರಣ ಕುಲಕರ್ಣಿ ಅವರು ತಮ್ಮ ಬಿಡುವಿಲ್ಲದ ವೃತ್ತಿಯಲ್ಲಿಯೂ ಸಾಕೇತ ಪ್ರತಿಷ್ಠಾನದ ಅಧ್ಯಕ್ಷರಾಗಿ ನೃತ್ಯಶಾಲೆಯನ್ನು ಮನೆಮಾತಾಗಿಸಿದ್ದಾರೆ.

ಸೀಮಾ ಅವರ ಅತ್ತೆ ರಮಾಬಾಯಿಯವರು ಸೊಸೆಯ ಕಲಾನೈಪುಣ್ಯ, ಶ್ರಮ ಮತ್ತು ಯಶಸ್ಸಿನ ಬಗ್ಗೆ ತಾಯಿಯ ಹಾಗೆ ಅಭಿಮಾನ ಹೊಂದಿರು ವವರು. ತಮ್ಮ ಸ್ವರ್ಗೀಯ ಮಾತಾ-ಪಿತೃಗಳ ಆಶೀರ್ವಾದದಿಂದ ಸೀಮಾ ಅವರು ನೂರಾರು ಆಸಕ್ತ ಪ್ರತಿಭೆಗಳಿಗೆ ನೃತ್ಯಕಲೆಯನ್ನು ಧಾರೆ ಎರೆಯು ತ್ತಲೇ ಇದ್ದಾರೆ.

ಸಾಕಷ್ಟು ರಂಗಪ್ರವೇಶಗಳೂ ಆಗಿವೆ. ಇವರ ಅನೇಕ ಶಿಷ್ಯರು ತಾವೂ ನೃತ್ಯಶಾಲೆಯನ್ನು ನಡೆಸುವಷ್ಟರ ಮಟ್ಟಕ್ಕೇರಿದ್ದಾರೆ. ಧಾರವಾಡದ ಕಲಾರಸಿಕರಿಗೆ ಪ್ರತಿವರ್ಷವೂ ಹಲವಾರು ಮೋಹಕ ಪ್ರದರ್ಶನಗಳನ್ನು ಶೃತಿಯಂತಹ ಅತ್ಯುತ್ತಮ ನೃತ್ಯಪಟುಗಳ ಮೂಲಕ ಉಣಬಡಿಸುತ್ತಿರುವ ಸಾಕೇತ ಶಾಲೆಯ ಪ್ರಯತ್ನ ಹೀಗೆಯೇ ನಿರಂತರ ವಾಗಿ ಸಾಗಲಿ ಎಂಬುದೇ ನಮ್ಮ ಆಶಯ.

 

administrator

Related Articles

Leave a Reply

Your email address will not be published. Required fields are marked *