ಧಾರವಾಡ : ಮೀಟರ್ ಬಡ್ಡಿ ಕುಳದ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ಇಲ್ಲಿನ ಸಂಪಿಗೆ ನಗರದಲ್ಲಿ ಕಳೆದ ರಾತ್ರಿ ನಡೆದಿದೆ.
ವಿಜಯ ಅಣ್ಣಪ್ಪ ನಾಗನೂರ(39) ನೇಣಿಗೆ ಶರಣಾದವನು. ಈತನು ಲಕ್ಷ್ಮೀಸಿಂಗನಕೇರಿಯ ಶಿವರಾಜ ಮಾಕಡವಾಲೆ ಎಂಬುವರಿಂದ 25 ಸಾವಿರ ರೂಪಾಯಿಗಳನ್ನು ಬಡ್ಡಿ ರೂಪದಲ್ಲಿ ಪಡೆದಿದ್ದನು. ನಂತರ ವಿಜಯ 50 ಸಾವಿರಕ್ಕೂ ಹೆಚ್ಚು ಹಣವನ್ನು ಮಾಕಡವಾಲೆಗೆ ಮರಳಿ ಕೊಟ್ಡಿದ್ದನು.
ಆದರೂ ಸಾಲ ತೀರಿಲ್ಲ ಎಂದು ಮಾಕಡವಾಲೆ ಕಿರುಕುಳ ನೀಡುತ್ತಿದ್ದನು. ಇದರಿಂದ ಬೇಸತ್ತು ವಿಜಯ ನಿನ್ನೆ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅನಧಿಕೃತವಾಗಿ ಬಡ್ಡಿಯಿಂದ ಹಣ ಕೊಟ್ಟು ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು ಶಿವರಾಜ ಮಾಕಡವಾಲೆಯನ್ನು ಬಂಧಿಸಿದ್ದಾರೆ.
ಸಿಪಿಐ ರಮೇಶ ಹೂಗಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.