ಹುಬ್ಬಳ್ಳಿ: ಪರಿಷತ್ ಚುನಾವಣೆಯ ಉಸ್ತುವಾರಿ ಹಂಚಿಕೆ ವಿಷಯದಲ್ಲಿ ರಾಣೆಬೆನ್ನೂರು ಶಾಸಕ ಅರುಣಕುಮಾರ ಪೂಜಾರ ಹಾಗೂ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ನಡುವೆ ಸಭೆಯಲ್ಲೇ ಜಟಾಪಟಿ ನಡೆದಿದೆ.
ಗೋಕುಲ ರಸ್ತೆಯ ಕ್ಯುಬಿಕ್ಸ್ ಹೋಟೆಲ್‌ನಲ್ಲಿ ಬಿಜೆಪಿ ಪ್ರಮುಖರ ಸಭೆಯನ್ನು ಮುಖ್ಯಮಂತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿ ಹೋದ ಬಳಿಕ ನಡೆದ ಇನ್ನೊಂದು ಸಭೆಯಲ್ಲಿ ಈ ಘಟನೆ ನಡೆದಿದೆ. ಗಲಾಟೆ ಜೋರಾಗುತ್ತಿದ್ದಂತೆ ಇಬ್ಬರೂ ಶಾಸಕರ ಬೆಂಬಲಿಗರು ಶಾಸಕ ಜಗದೀಶ ಶೆಟ್ಟರ್ ಸಮ್ಮುಖದಲ್ಲೇ ಪರಸ್ಪರ ಕೈ ಕೈ ಮಿಲಾಯಿಸುವ ಹಂತ ತಲುಪಿತೆನ್ನಲಾಗಿದೆ.
ರಾಜೀನಾಮೆ ಕೊಡುವುದಾಗಿ ಪೂಜಾರ ಹೇಳಿದರೆಂದು ಅವರ ಆಪ್ತರೊಬ್ಬರು ತಿಳಿಸಿದರು. ಆಗ ಪಕ್ಷದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜು ಕಲಕೋಟೆ ಸಮಾಧಾನ ಪಡಿಸಿದರು. ಆಗ ಮಧ್ಯ ಪ್ರವೇಶಿಸಿದ ಕೆಲ ಕಾರ್ಯಕರ್ತರು ಹಾಗೂ ಜಗದೀಶ ಶೆಟ್ಟರ್ ಎಲ್ಲರನ್ನೂ ಸಮಾಧಾನ ಪಡಿಸಿದರು.
ಘಟನೆ ಬಳಿಕ ಕೆಲ ಹೊತ್ತು ಹೋಟೆಲ್‌ನ ಕೊಠಡಿಯಲ್ಲಿ ಕುಳಿತು ಆರ್. ಶಂಕರ್ ನಿರ್ಗಮಿಸಿದರು. ಈ ವೇಳೆ ಪ್ರತಿಕ್ರಿಯಿಸಿ ’ಯಾವ ಗಲಾಟೆಯೂ ಆಗಿಲ್ಲ. ಅರುಣ ರಾಜೀನಾಮೆ ಕೊಡುವುದಾದರೆ ಕೊಡಲಿ; ಅದನ್ನು ಅಂಗೀಕಾರ ಮಾಡಬೇಕು’ ಎಂದು ಕಾರು ಹತ್ತಿಕೊಂಡು ಹೊರಟು ಹೋದರು.
ಯಾವುದೇ ಭಿನ್ನಾಭಿಪ್ರಾಯವಿಲ್ಲ
ಸಭೆಯ ನಂತರ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಣೆಬೆನ್ನೂರ ಶಾಸಕ ಅರುಣಕುಮಾರ ಹಾಗೂ ಎಂಎಲ್‌ಸಿ ಆರ್.ಶಂಕರ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ಆಗಿಲ್ಲ. ಅವರಿಬ್ಬರು ಕ್ಷೇತ್ರದ ವಿಚಾರದಲ್ಲಿ ಚರ್ಚೆ ಮಾಡುವ ವೇಳೆ ಕೈ ಕೈ ಮಿಲಾಯಿ ಸುವ ಹಂತಕ್ಕೇನೂ ತಲುಪಿಲ್ಲ ಎಂದರು.
ಡಿಸೆಂಬರ್ ೧೦ರ ನಂತರ ಅವರಿಬ್ಬರ ಬಗ್ಗೆ ಪಕ್ಷದ ನಾಯಕರು ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲಿದ್ದಾರೆ. ಇಲ್ಲಿ ಯಾವುದೇ ನಾಯಕರ ಮಧ್ಯದಲ್ಲಿ ಮನಸ್ತಾಪ ಹಾಗೂ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಹಾಗೂ ಪಕ್ಷದ ನಾಯಕರ ಸಮ್ಮುಖದಲ್ಲಿ ಸಭೆ ನಡೆಸಿ ಚರ್ಚೆ ಮಾಡಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸುತ್ತೇವೆ ಎಂದರು.