ಧಾರವಾಡ : ಇಲ್ಲಿನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಸಲಹಾ ಸಮಿತಿ ಮತ್ತು ವಿಶೇಷಾಧಿಕಾರಿಗಳ ಕಾರ್ಯನಿರ್ವಹಣೆಗೆ ಧಾರವಾಡ ಹೈಕೋರ್ಟ್ ಅನುಮತಿಸಿದೆ.
ಧಾರವಾಡ ಪ್ರಾಂತೀಯ ಸಲಹಾ ಸಮಿತಿಗೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯು ಬೈಲಾ ಅನ್ವಯ ತೀರ್ಮಾನ ಕೈಕೊಳ್ಳಬೇಕು. ಸಲಹಾ ಸಮಿತಿಯು ಯಾವುದೇ ಹೊಸ ಸದಸ್ಯರನ್ನು ನೊಂದಣಿ ಮಾಡಿಕೊಳ್ಳುವಂತಿಲ್ಲ. ಮತ್ತು ನ್ಯಾಯಾಲಯದ ಅನುಮತಿಯ ಆದೇಶದ 6 ತಿಂಗಳೊಳಗೆ ಮಹಾ ಸಭಾಗೆ ಚುನಾವಣೆ ಜರುಗಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಈ ಮೂಲಕ ನ್ಯಾಯಾಲಯವು ಅರ್ಜಿದಾರರ ಭಾಗಶಃ ಪ್ರಾರ್ಥನೆಯನ್ನು ಪುರಸ್ಕರಿಸಿದೆ. ಇನ್ನೊಂದೆಡೆ ಈರೇಶ ಅಂಚಟಗೇರಿ ಅಧ್ಯಕ್ಷತೆಯ ಸಲಹಾ ಸಮಿತಿಯ ಆಡಳಿತ ನಿರ್ವಹಣೆಗೂ ಅನುಮತಿ ನೀಡಿದ್ದು, ಎರಡೂ ಗುಂಪುಗಳಿಗೆ ಸ್ವಲ್ಪ ಮಟ್ಟಿನ ಸಮಾಧಾನ ನೀಡಿದೆ.
ಕಳೆದ 2020 ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದಿದ್ದ ಹೊಸ ಆಡಳಿತ ಮಂಡಳಿಯ ಅಧಿಕಾರಕ್ಕೆ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿತ್ತು.
ನ್ಯಾಯಾಲಯದ ಮಧ್ಯಂತರ ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಅರ್ಜಿದಾರರು ತಡೆಯಾಜ್ಞೆಯ ಪ್ರತಿಯನ್ನು ಸಭೆಯ ಕಚೇರಿಗೆ ಸಲ್ಲಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಎರಡೂ ಗುಂಪುಗಳ ಮಧ್ಯೆ ಪರಸ್ಪರ ವಾಗ್ವಾದ ನಡೆದಿತ್ತು. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ನಗರ ಶಾಖೆಯ ಆಡಳಿತಾಧಿಕಾರಿ ಎಸ್.ರಾಧಾಕೃಷ್ಣ ಅವರು 50 ಕ್ಕೂ ಅಧಿಕ ಜನರ ವಿರುದ್ಧ ದೂರು ನೀಡಿದ್ದು, ಅನಧೀಕೃತವಾಗಿ ಸಭೆಯ ಆವರಣ ಪ್ರವೇಶ ಮಾಡಿ ಗದ್ದಲವುಂಟು ಮಾಡಿದ್ದಾರೆ ಎಂದು ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.