ಅರ್ಚಕರ ಹಕ್ಕು ಕಸಿವ ಹುನ್ನಾರ- ದೊಡ್ಡ ಷಡ್ಯಂತ್ರದ ಶಂಕೆ
ಹುಬ್ಬಳ್ಳಿ : ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶ್ರೀ ಕ್ಷೇತ್ರ ಶಿರಸಂಗಿಯ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ಗೆ ದೇಣಿಗೆ ನೀಡಬೇಡಿ ದವಸ ಧಾನ್ಯ ಕೊಡಬೇಡಿ ಎಂದು ಧಾರವಾಡ ವಿಶ್ವಕರ್ಮ ಸಮಾಜದ ವಾಟ್ಸ್ಪ್ ಗ್ರೂಪಿನಲ್ಲಿ ಹು.ಧಾ. ಮಹಾನಗರ ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ ಅವರು ಪೋಸ್ಟ್ ಮಾಡಿ, ದೇವಸ್ಥಾನದ ಧರ್ಮದರ್ಶಿ ಮಂಡಳಿಗೆ, ಅರ್ಚಕರಿಗೆ ಅಗೌರವ, ಅಪಮಾನ ಮಾಡಿರುವುದನ್ನು ಟ್ರಸ್ಟ್ ತೀವ್ರವಾಗಿ ಖಂಡಿಸಿದೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ದೇವಸ್ಥಾನದ ಟ್ರಸ್ಟಿಗಳು ಹಾಗೂ ಅರ್ಚಕರು ಎಲ್ಲ ಕಾರ್ಯಗಳು ಮುಜರಾಯಿ ಇಲಾಖೆ ನಿಯಮದಂತೆ ನಡೆಯುತ್ತಿದ್ದು, ನಂದಾದೀಪ, ದೇವಸ್ಥಾನದ ವ್ಯವಸ್ಥೆ, ಅಭಿವೃದ್ಧಿಗೆ ಹುಂಡಿ ಹಣ-ದೇಣಿಗೆಯನ್ನು ಬಳಸಿಕೊಂಡು ಪೂಜಾ ಕೈಂಕರ್ಯ ಧಾರ್ಮಿಕ ಸೇವೆ ಮಾಡಲಾಗುತ್ತಿದೆ.ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ಇದನ್ನು ಟ್ರಸ್ಟ್ ಹಿಂದಿನಿಂದಲೂ ನಡೆಸಿಕೊಂಡು ಬರಲಾಗಿದೆ ಎಂದರು.
ಶಿರಸಂಗಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಎಂಬ ಎನ್ಜಿಓಗೆ ಹಣ ನೀಡಿದ್ದಾರೆಂದು ಯಾವ ಆಧಾರದ ಮೇಲೆ ರಾಮಣ್ಣ ಹೇಳಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಇದರ ಹಿಂದೆ ಅರ್ಚಕರ ಬಾಬತ್ತನ್ನು ಕಸಿದುಕೊಳ್ಳುವ ಹುನ್ನಾರ ಇದ್ದು, ಏಕೆಂದರೆ ವಿಕಾಸ ಸಂಸ್ಥೆಯಿಂದ ಸನ್ಮಾನ ಸ್ವೀಕರಿಸಿ ಬಂದ ಎರಡೇ ದಿನದಲ್ಲಿ ಈ ರೀತಿ ಪೋಸ್ಟ್ ಮಾಡಿದ್ದನ್ನು ನೋಡಿದರೆ, ಇದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ ಎಂದರಲ್ಲದೇ . ಈ ಬಗ್ಗೆ ತನಿಖೆ ನಡೆಸಿ, ಸತ್ಯಾಂಶ ಹೊರತರಬೇಕೆಂದು, ಸೈಬರ್ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ ಎಂದರು.
ಅರ್ಚಕರ ಹಕ್ಕು ಕಸಿಯುವ, ಕಾಳಿಕಾದೇವಿಯ ಪೂಜೆ ಮಾಡುವ ಅರ್ಚಕರನ್ನು ಬೀದಿಗೆ ನಿಲ್ಲಿಸಬೇಕು ಎಂಬ ದುರುದ್ದೇಶ ಇದ್ದು, ಮುಂದೆಯೂ ಹೀಗಾದಲಿ ಕಾನೂನು ಹೋರಾಟದ ಮೂಲಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಟ್ರಸ್ಟಿ ಗಳು ಹಾಗೂ ಅರ್ಚಕರಾದ ಇಂದ್ರಾಚಾರ್ಯ ಗಂಗಣೈನವರ, ನಾಗೇಂದ್ರಾಚಾರ್ಯ ಗಂಗಣೈನವರ, ವಿಶ್ವನಾಥ ಆಚಾರ್ಯ ಪೂಜಾರ, ಪ್ರಕಾಶಾಚಾರ್ಯ ಶಹಾಪೂರಕರ, ದಯಾನಂದಾಚಾರ್ಯ ಪೂಜಾರ, ಸಂತೋಷಾಚಾರ್ಯ ಪೂಜಾರ, ಮೌನೇಶಾಚಾರ್ಯ ಪೂಜಾರ ಇದ್ದರು.