ಹುಬ್ಬಳ್ಳಿ : ನಿನ್ನೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವ ಪಕ್ಷ ಮೇಲುಗೈ ಸಾಧಿಸಲಿದೆ ಎಂಬ ಕುತೂಹಲ ಒಂದೆಡೆಯಾದರೆ ಇನ್ನೊಂದೆಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರಿನಲ್ಲಿ ಏನಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.
ನೆರೆಯ ಬೆಳಗಾವಿಯಲ್ಲಿ ರಾಜ್ಯ ರಾಜಕೀಯವನ್ನೇ ಅಲುಗಾಡಿಸುವ ದಟ್ಟವಾಗಿದ್ದು ಅವಿಭಾಜ್ಯ ಧಾರವಾಡ ಜಿಲ್ಲೆಯಲ್ಲಿ ಸಹ ಪಕ್ಷೇತರ ಮಲ್ಲಿಕಾರ್ಜುನ ಹಾವೇರಿ ಸ್ಪರ್ಧೆ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆಯಂತೆ ಕಾಣಿಸಿದರೂ ಒಳ ಏಟು ಯಾರಿಗೆ ಎಂಬುದು ನಿಗೂಢವಾಗಿದ್ದು ಒಂದರ್ಥದಲ್ಲಿ ಕಮಲ ಪಾಳೆಯದ ಮುಸುಕಿನ ಯುದ್ಧ ಎಂದರೆ ತಪ್ಪಾಗಲಾರದು.
ಶೇ 99.68ರಷ್ಟು ಮತದಾನವಾಗಿದ್ದು,ಬೆಳಗಾವಿ, ಬೆಂಗಳೂರು, ಮಂಡ್ಯ ,ಕಲಬುರಗಿಗಳಿಗೆ ಹೋಲಿಸಿದಲ್ಲಿ ಅವಿಭಾಜ್ಯ ಧಾರವಾಡ ಜಿಲ್ಲೆಯಲ್ಲಿ ಹಣದ ಹೊಳೆ ಹರಿದಿದ್ದು ಕಡಿಮೆಯೇ ಆಗಿದ್ದರೂ,ಪಕ್ಷೇತರ ಮಲ್ಲಿಕಾರ್ಜುನ ಬಹುತೇಕ ಗ್ರಾ.ಪಂ.ಗೂ ಮುಟ್ಟಿರುವುದರ ಹಿಂದೆ ಯಾರಿದ್ದಾರೆಂಬುದು ಇನ್ನೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಬಿಜೆಪಿಯವರು ಯಾರೂ ಬಂಡಾಯ ಅಭ್ಯರ್ಥಿಗಳಿಲ್ಲ ಎಂದು ತಿಪ್ಪೆ ಸಾರಿಸಿದರೂ ಕೇಸರಿ ಪಡೆಯವರಿಗಿಂತ ಮೊದಲೆ ೫೦೦ರ ೨೦ ಗರಿ ಗರಿ ನೋಟುಗಳನ್ನು ಪಕ್ಷೇತರ ಹಂಚಿದ್ದು ನೋಡಿದರೆ ’ಪ್ರಭಾವಿ’ಗಳ ಕೈ ಹಾವೇರಿ ಹೆಗಲ ಮೇಲೆ ಇರುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ.ಅಲ್ಲದೇ ಸಮಾಜದ ಬೆಂಬಲ ದೊರೆತಿದ್ದು ಎಲ್ಲೆಡೆ ಮುಟ್ಟಲು ಸಾಧ್ಯವಾಗಿದೆ ಎನ್ನಲಾಗುತ್ತಿದೆ.
ಅವಿಭಾಜ್ಯ ಜಿಲ್ಲೆಯಲ್ಲಿ ಅಂತ್ಯದ ಪ್ರಭಾವ ಹೊಂದಿರುವ ಪಕ್ಷವಾದ ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಹೋದರ ಪ್ರದೀಪ ಶೆಟ್ಟರ್ ಮರು ಆಯ್ಕೆಗೆ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ನ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ ಮೊದಲ ಬಾರಿಗೆ ಸ್ಪರ್ಧೆ ಸ್ಥಳೀಯ ಸಂಸ್ಥೆಗಳ ಅಖಾಡಕ್ಕೆ ಇಳಿದಿದ್ದಾರೆ.
ಲೆಕ್ಕಕ್ಕೆ ಸಿಗದ ನಡೆ : ಹಾವೇರಿ ಎಪಿಎಂಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಂಡುಕೋರರಾಗಿಯೇ ಆ ಗದ್ದುಗೆ ಏರಿದವರಾಗಿದ್ದು ಹೇಗಾದರೂ ಮಾಡಿ ಚಿಂತಕರ ಚಾವಡಿ ಪ್ರವೇಶಿಸಲೇ ಬೇಕೆಂಬ ಆಸೆಯಿಂದ ಚುನಾವಣೆ ಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ನಿರೀಕ್ಷೆಯೊಂದಿಗೆ ಬಹಿರಂಗವಾಗಿ ಕಾಣಿಸಿಕೊಳ್ಳದ ಪ್ರಭಾವಿಗಳ ಬೆಂಬಲದಿಂದ ಮುನ್ನಡೆದಿದ್ದರೂ ಇವರ ಲೆಕ್ಕಾಚಾರ ಲೆಕ್ಕಕ್ಕೆ ಸಿಗುತ್ತಿಲ್ಲ. ಹಾವೇರಿ ಹಾಗೂ ಗದಗ ಜಿಲ್ಲೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಪ್ರದೀಪ ಬಗ್ಗೆ ನಿರಂತರ ಸಂಪರ್ಕದಲ್ಲಿಲ್ಲ ಎಂಬ ಕೊರಗು ಇದ್ದೇ ಇದ್ದು ಅದನ್ನು ಮತವಾಗಿ ಪರಿವರ್ತಿಸಲು ಹರಸಾಸಹ ಪಟ್ಟಿದ್ದರೂ ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಪಡೆಯುವುದರಿಂದ ತೊಂದರೆ ಸಾಧ್ಯತೆ ಕಡಿಮೆ.ಅಲ್ಲದೇ ಕಾಂಗ್ರೆಸ್ ಸಹ ಪ್ರಥಮ ಪ್ರಾಶಸ್ತ್ಯದಲ್ಲೇ ಗೆಲುವಿನ ದಡ ಮುಟ್ಟಲು ಎಳ್ಳಷ್ಟು ಕೊರತೆಯಾಗದಂತೆ ವ್ಯವಸ್ಥೆ ಮಾಡಿದ್ದಾಗಿ ತಿಳಿದು ಬಂದಿದೆ.
ಸದ್ಯದ ಅಂದಾಜಿನಂತೆ ಕಾಂಗ್ರೆಸ್‌ನ ಸಲೀಮ್ ಅಹ್ಮದ ಮತ್ತು ಬಿಜೆಪಿಯ ಪ್ರದೀಪ ಶೆಟ್ಟರ್ ಇಬ್ಬರೂ ದಡ ಮುಟ್ಟುವ ಸಾಧ್ಯತೆ ದಟ್ಟವಾಗಿದೆ.
ಶೆಟ್ಟರ್ ದಿಲ್ಲಿ ಭೇಟಿ ಸುತ್ತ ಗಿರಕಿ!
ಮಾಜಿ ಜಗದೀಶ ಶೆಟ್ಟರ್ ಅವರ ಇತ್ತೀಚಿನ ದಿಲ್ಲಿ ಭೇಟಿ ಹಲವು ಊಹಾಪೋಹಗಳಿಗೆ ಕಾರಣವಾಗಿದ್ದು, ಅವರಿಗೆ ಮತ್ತೊಮ್ಮೆ ಸಿಎಂ ಪಟ್ಟ ಜ.10ರ ನಂತರ ನಿಕ್ಕಿ ಎಂಬ ಗುಸು ಗುಸು ಪಕ್ಷದ ಒಳವಲಯದಲ್ಲಿದ್ದು ಅದು ಅವಿಭಾಜ್ಯ ಅನೇಕರಿಗೆ ನುಂಗಲಾರದ ತುತ್ತಾಗಿದೆ. ಈ ಪರಿಷತ್ ಚುನಾವಣೆಯಲ್ಲೇ ’ಟಾಂಗ್’ ನೀಡಬೇಕೆಂಬ ’ಪ್ರಭಾವಿ’ಗಳ ಲೆಕ್ಕಾಚಾರ ದಿ.14ಕ್ಕೆ ಮತ ಪೆಟ್ಟಿಗೆ ಒಡೆದಾಗಲೇ ಸತ್ಯ ಹೊರ ಬರಲಿದೆ.
ಸದ್ಯದ ಅಂದಾಜಿನಂತೆ ಕಾಂಗ್ರೆಸ್‌ನ ಸಲೀಮ್ ಅಹ್ಮದ ಮತ್ತು ಬಿಜೆಪಿಯ ಪ್ರದೀಪ ಶೆಟ್ಟರ್ ಇಬ್ಬರೂ ದಡ ಮುಟ್ಟುವ ಸಾಧ್ಯತೆ ದಟ್ಟವಾಗಿದೆ.