ಹುಬ್ಬಳ್ಳಿ: ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ತೆನೆ ಹೊರೆ ಇಳಿಸಿ ಕೈ ಹಿಡಿಯಲಿದ್ದಾರೆಂಬ ಕಳೆದ ಕೆಲ ತಿಂಗಳುಗಳಿಂದ ಕೇಳಿ ಬರುತ್ತಿದ ವದಂತಿಗಳಿಗೆ ನಾಳೆ ತೆರೆ ಬೀಳಲಿದ್ದು ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲೇ ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆನ್ನಲಾಗಿದೆ. ನವಲಗುಂದ ಕ್ಷೇತ್ರದಲ್ಲಿ 2013ರಲ್ಲಿ ಆಯ್ಕೆಯಾಗಿ, ಕಳೆದ ಬಾರಿ ಸೋಲುಂಡಿದ್ದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಕೇತ್ರದಾದ್ಯಂತ ತನ್ನದೇ ಬೃಹತ್ ಪಡೆ ಹೊಂದಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸೇರಿದಂತೆ ಹಲವು ಪ್ರಮುಖರ ಸಮ್ಮುಖದಲ್ಲಿ ಕಾಂಗ್ರೆಸ್ ಬಾವುಟ ಹಿಡಿಯಲಿದ್ದಾರೆ.
ಮೊನ್ನೆ ನಡೆದ ವಿಧಾನಪರಿಷತ್ ಚುನಾವಣೆಯ ಸಮಯದಲ್ಲಿಯೇ ಕಾಂಗ್ರೆಸ್ ಶಾಲು ಹಾಕಿಕೊಂಡೇ ಪ್ರಚಾರ ಮಾಡಿದ್ದರಲ್ಲದೇ ಕಾಂಗ್ರೆಸ್ ಜಾಹೀರಾತುಗಳಲ್ಲಿಯೂ ಅವರ ಭಾವಚಿತ್ರ ಕಾಣಿಸಿಕೊಂಡಾಗಲೇ ಸೇರುವುದು ಖಚಿತವಾಗಿತ್ತು.
ನವಲಗುಂದ ಕ್ಷೇತ್ರದಲ್ಲಿ ಹಾಲಿ ಶಾಸಕ ಹಾಗೂ ಸಚಿವರೂ ಆಗಿರುವ ಶಂಕರ ಪಾಟೀಲಮುನೇನಕೊಪ್ಪ ಅವರ ವಿರುದ್ಧ ಜೆಡಿಎಸ್‌ನಿಂದ ಸೆಣಸಲಾಗದು ಎಂಬ ವಿಷಯ ಮನಗಂಡಿರುವ ಕೋನರೆಡ್ಡಿ ಕಾಂಗ್ರೆಸ್ ಸೇರ್ಪಡೆ ತೀರ್ಮಾನಕ್ಕೆ ಬಂದಿದ್ದಾರೆ.
ಇಂದು ಸಂಜೆ ಪಕ್ಷದ ಹಿರಿಯರು, ಅಭಿಮಾನಿಗಳು ಸೇರಿದಂತೆ ಪ್ರಮುಖರ ಸಭೆಯನ್ನು ನವಲಗುಂದದಲ್ಲಿ ನಡೆಸಲಿದ್ದು ಅಲ್ಲಿ ಎಲ್ಲರ ಅಭಿಪ್ರಾಯ ಪಡೆದು ನಾಳೆ ಕೈ ಸೇರ್ಪಡೆಯಾಗಲಿದ್ದಾರೆನ್ನಲಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿಯವರ ರಾಜಕೀಯ ಕಾರ್ಯದರ್ಶಿಯೂ ಆಗಿದ್ದ ಅಲ್ಲದೇ ಕ್ಷೇತ್ರದಲ್ಲಿ ತನ್ನದೇ ಹಿಡಿತ ಹೊಂದಿರುವ ಕೋನರೆಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದರಿಂದ ಮತ್ತಷ್ಟು ಶಕ್ತಿ ಬರಲಿದ್ದು ಹೊಸ ಸಮೀಕರಣದ ಲೆಕ್ಕಾಚಾರ ಆದಂತಾಗಲಿದೆ.
navalgund ex mla/n.h.konareddi-join congress/12-12-2021