ಹುಬ್ಬಳ್ಳಿ-ಧಾರವಾಡ ಸುದ್ದಿ

ಬಿಎಸ್‌ವೈ ಶುಭಾಶಯ: ಹೊಸ ಲೆಕ್ಕಾಚಾರ ಸಿಎಂ ಬದಲಾವಣೆ ದಟ್ಟ ಗುಸು ಗುಸು

ಹುಬ್ಬಳ್ಳಿ: ಮುಖ್ಯಮಂತ್ರಿ ಬದಲಾವಣೆ ಖಚಿತ ಎಂಬ ಮಾತುಗಳು ಸಂಪುಟದ ಸಚಿವರ ಬಾಯಲ್ಲೇ ಹೊರಬರುತ್ತಿರುವದು ಹಾಗೂ ಸಂಕ್ರಮಣದ ನಂತರ ಹೊಸ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಳ್ಳುವರೆಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ದಟ್ಟವಾಗಿರುವಾಗಲೇ ಯಡಿಯೂರಪ್ಪ ಇನ್ನೋರ್ವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿ ಅವರಿಗೆ 66ನೇ ಜನ್ಮದಿನದ ಶುಭಾಶಯ ಕೋರಿರುವುದು ಹಲವು ಹೊಸ ಲೆಕ್ಕಾಚಾರಗಳನ್ನು ಹುಟ್ಟು ಹಾಕಿದೆ.

ಉಪಚುನಾವಣೆಯಲ್ಲಿ ಸಿಎಂ ತವರಲ್ಲೇ ಸೋಲು, ಪರಿಷತ್ ಚುನಾವಣೆ ಯಲ್ಲೂ ವಿಪಕ್ಷಕ್ಕಿಂತ ಹೆಚ್ಚು ಸ್ಥಾನ ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ಸೊರಗುತ್ತಿರುವುದು ಹೈಕಮಾಂಡ್ ಆತಂಕಕ್ಕೆ ಕಾರಣವಾಗಿದ್ದು ಆ ನಿಟ್ಟಿನಲ್ಲಿ ಚಿಂತನೆಗೆ ಮುಂದಾಗಿದ್ದು ಮತ್ತೊಮ್ಮೆ ಬಿಎಸ್ ವೈ ಹೇಳಿದ ಲಿಂಗಾಯತ ಮುಖಂಡರಿಗೆ ಪಟ್ಟ ಕಟ್ಟಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಅಲ್ಲದೇ ಅಧಿವೇಶನದ ಅವಧಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಗುಟ್ಟಾಗಿ ಚರ್ಚೆ ನಡೆಸಿದ ಮರುದಿನವೇ ಶೆಟ್ಟರ್ ಅವರನ್ನು ಅವರ ನಿವಾಸದಲ್ಲೇ ಭೇಟಿಯಾಗಿ ಜನ್ಮದಿನದ ಶುಭಾಶಯ ಕೋರಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಶೆಟ್ಟರ್ ದಿಲ್ಲಿ ಭೇಟಿ ಸಹ ಭಾರೀ ಸದ್ದು ಮಾಡಿತ್ತಲ್ಲದೇ ಈಗ ಮತ್ತೆ ಸುದ್ದಿ ಮಾಡಲಾರಂಭಿಸಿದೆ. ಹೈಕಮಾಂಡ್ ಮುಖ್ಯಮಂತ್ರಿ ಬದಲಿಸಿದಲ್ಲಿ ಲಿಂಗಾಯತ ಸಮುದಾಯವರನ್ನೇ ಮಾಡಲು ಮುಂದಾಗಿದ್ದು ಜಗದೀಶ ಶೆಟ್ಟರ್, ಮುರಗೇಶ ನಿರಾಣಿಯವರ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗುತ್ತಿದೆ.
ಈ ಹಿಂದೆ ಬೊಮ್ಮಾಯಿ ಸಂಪುಟದಲ್ಲಿ ಧಾರವಾಡ ಜಿಲ್ಲಾ ಪ್ರಾತಿನಿಧ್ಯದಲ್ಲೂ ಬಿಎಸ್ ವೈ ಮತ್ತು ಶೆಟ್ಟರ್ ಹೇಳಿದವರಿಗೆ ವರಿಷ್ಠರು ಮಣೆ ಹಾಕಿದ್ದನ್ನು ಸ್ಮರಿಸಬಹುದು.
ಮಂಡಿನೋವಿನ ಸರ್ಜರಿಗೆ ಹಾಲಿ ಮುಖ್ಯಮಂತ್ರಿ ಅಮೇರಿಕಕ್ಕೆ ಹೋಗಲಿರುವರೆಂಬ ಸುದ್ದಿ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸತತವಾಗಿ ಬರುತ್ತಿರುವುದು ಹಲವು ಮುನ್ಸೂಚನೆಗಳಿಗೆ ನಾಂದಿ ಹಾಡಿದೆ.
ಪಕ್ಷ ದಿನದಿಂದ ಸೊರಗುತ್ತಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಹೇಳಿದವರಿಗೆ ಮಣೆ ಹಾಕಿ ಅವರ ಮಾರ್ಗದರ್ಶನದಲ್ಲಿಯೇ ಪಕ್ಷ ಸಂಘಟನೆಯಾಗಲಿ ಎನ್ನುವ ಫರ್ಮಾನು ಹೊರಡಿಸುವ ಸಾಧ್ಯತೆಗಳಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

 

administrator

Related Articles

Leave a Reply

Your email address will not be published. Required fields are marked *