ಧಾರವಾಡ: ಮಾದಕ ವಸ್ತುಗಳ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ ಕೈಗೊಂಡಿರುವ ಹುಬ್ಬಳ್ಳಿ ಹೆಸ್ಕಾಂನ ಪೊಲೀಸ್ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣವರ ಅವಳಿನಗರದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ.
ಹುಬ್ಬಳ್ಳಿಗೆ ಆಗಮಿಸಿದ ಚೆನ್ನಣ್ಣವರ ಅವರನ್ನು ಸಂಚಾರಿ ಪೂರ್ವ ಹಾಗೂ ಉಪನಗರ ಇನ್ಸಪೆಕ್ಟರ್‌ಗಳಾದ ಎನ್ ಸಿ ಕಾಡದೇವರ,ರವಿಚಂದ್ರ ಡಿ.ಬಿ ಇವರುಗಳು ಸನ್ಮಾನಿಸಿದರಲ್ಲದೇ ವಿವಿಧ ಯುವ ಸಂಘಟನೆಗಳು ಗೌರವಿಸಿ ಮುಂದಿನ ಪ್ರಯಾಣಕ್ಕೆ ಶುಭ ಹಾರೈಸಿ ಬೀಳ್ಕೊಟ್ಟರು.
ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸುಮಾರು 3800 ಕಿಲೋ ಮೀಟರ್ ಸೈಕಲ್ ಯಾತ್ರೆ ಕೈಗೊಂಡಿರುವ ಚೆನ್ನಣ್ಣನವರ ಹಾಗೂ ಹಿಪ್ಪರಗಿ ಅವರಿಗೆ ನಿನ್ನೆ ಧಾರವಾಡ ಹೊರವಲಯದಲ್ಲಿ ಸಾರ್ವಜನಿಕರು ಅಲ್ಲದೇ , ಧಾರವಾಡ ಸಂಚಾರಿ ಪೊಲೀಸರು ಸಹ ರಾಷ್ಟ್ರಧ್ವಜ ನೀಡಿ ಹೂಮಳೆಯ ಸ್ವಾಗತ ನೀಡಿದ್ದರು.
ಈಗಾಗಲೇ ಐರನ್ ಮ್ಯಾನ (ಲೋಹ ಪುರುಷ) ಬಿರುದು ಪಡೆದು ದಾಖಲೆ ಮಾಡಿ, ಹಿರಿಯ ಅಧಿಕಾರಿಗಳಿಂದ ಸೈ ಎನಿಸಿಕೊಂಡಿರುವ ಚೆನ್ನಣ್ಣವರ ಇಲಾಖೆಗೂ ಗೌರವ ತಂದಿದ್ದಾರಲ್ಲದೇ ಅವಳಿನಗರಕ್ಕೂ ಹೆಮ್ಮೆಯಾಗಿದ್ದಾರೆ.