ಹುಬ್ಬಳ್ಳಿ-ಧಾರವಾಡ ಸುದ್ದಿ
ಪರಿಷತ್ ಒಳ ಏಟು: ಬೊಮ್ಮಾಯಿ ಟಾರ್ಗೆಟ್!   ವರಿಷ್ಠರಿಗೆ ಪ್ರದೀಪ್ ದೂರು-ಅಸಮಾಧಾನ ಸ್ಪೋಟ

ಪರಿಷತ್ ಒಳ ಏಟು: ಬೊಮ್ಮಾಯಿ ಟಾರ್ಗೆಟ್! ವರಿಷ್ಠರಿಗೆ ಪ್ರದೀಪ್ ದೂರು-ಅಸಮಾಧಾನ ಸ್ಪೋಟ

ಹುಬ್ಬಳ್ಳಿ: ಮಳೆ ನಿಂತರೂ ಹನಿ ನಿಂತಿಲ್ಲವೆಂಬಂತೆ ಅವಿಭಾಜ್ಯ ಧಾರವಾಡ ಜಿಲ್ಲೆಯ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಆಡಳಿತಾರೂಡ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಮತ್ತಷ್ಟು ಬೆಳಕಿಗೆ ಬಂದಿದೆ.
೧೩ ಶಾಸಕರು, ಇಬ್ಬರು ಸಂಸದರು, ಅಲ್ಲದೇ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಓರ್ವ ಕೇಂದ್ರ ಸಚಿವರು, ಇದ್ದರೂ ದ್ವಿತೀಯ ಸ್ಥಾನಿಯಾಗಿ ಬಿಜೆಪಿ ಅಧಿಕೃತ ಅಭ್ಯರ್ಥಿ ಪ್ರದೀಪ ಶೆಟ್ಟರ್ ಗೆದ್ದಿದ್ದು ಅಸಮಾಧಾನ ಭುಗಿಲೇಳುವಂತೆ ಮಾಡಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಹೋಧರರಾಗಿರುವ ಪ್ರದೀಪ ಬಹಿರಂಗವಾಗಿಯೇ ಚುನಾವಣೆಯಲ್ಲಿ ತಮ್ಮ ಷಡ್ಯಂತ್ರ ನಡೆಸಿದವರಾರು ಎಂಬುದು ತನಿಖೆಯಾಗಲಿ ಎಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯ ಅಧ್ಯಕ್ಷ ನಳೀನಕುಮಾರ ಕಟೀಲ ಅವರಿಗೆ ಜಾಲತಾಣದ ಮೂಲಕ ದೂರು ನೀಡಿದ್ದಾರೆ.
ಡಜನ್ ಗಟ್ಟಲೇ ಶಾಸಕರು, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರಿದ್ದು ,ಪರಿಷತ್ ಸದಸ್ಯರು ಅಲ್ಲದೇ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷದ ಹಿಡಿತವಿದ್ದರೂ ಯಾಕೆ ತಮಗೆ ಹಿನ್ನಡೆ ಆಗಿದೆ.
ಪಕ್ಷದ ಮತಗಳೇ ವಿಭಜನೆ ಆಗಿದ್ದು ಅಲ್ಲದೇ ಸಂಘಟನೆಯಲ್ಲಿ ನಮಗಿಂತ ಹಿಂದಿರುವ ಕಾಂಗ್ರೆಸ್ ಹೆಚ್ಚಿನ ಮತಗಳನ್ನು ಪಡೆದುಕೊಂಡಿದೆ ಈ ಬಗ್ಗೆ ತನಿಖೆಯಾಗಲಿ ಎಂದಿದ್ದಾರೆ.
ಪಕ್ಷ ಅಂದ್ರೆ ತಾಯಿ ಇದ್ದಂತೆ- ಪಕ್ಷಕ್ಕೆ ದ್ರೋಹ ಮಾಡಿದವರು ತಾಯಿಗೆ ದ್ರೋಹ ಮಾಡಿದಂತೆ ಎಂದು ಹೇಳಿರುವ ಪ್ರದೀಪ್, ಮುಖ್ಯಮಂತ್ರಿಗಳ ತವರಿನಲ್ಲಿ ತೀವ್ರ ಹಿನ್ನೆಡೆಯಾಗಿದ್ದು, ಇದಕ್ಕೆ ಜವಾಬ್ದಾರರು ಯಾರು ಎಂದು ಪ್ರಶ್ನಿಸುವ ಮೂಲಕ ಸ್ವತಃ ಸಿಎಂ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ.
ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಹಾವೇರಿಗೆ ೧೨೧೭ ಮತ ಬಂದಿದ್ದು ಅವರಿಗೆ ಬೆಂಬಲ ಹಾಗೂ ಸಂಪನ್ಮೂಲ ಯಾರು ನೀಡಿದ್ದಾರೆಂಬುದು ತನಿಖೆಯಾಗಲಿ. ಅವರನ್ನು ಕಣದಿಂದ ಹಿಂದಕ್ಕೆ ತೆಗೆಸುವ ಕೆಲಸ ಆಗಿಯೇ ಇಲ್ಲ ಎನ್ನುವ ಮೂಲಕ ಮುಖ್ಯಮಂತ್ರಿಗಳನ್ನೇ ಆರೋಪಿ ಸ್ಥಾನದಲ್ಲಿ ಯತ್ನ ನಡೆಸಿದ್ದಾರೆ.
ಒಂದೆಡೆ ಬೆಳಗಾವಿಯಲ್ಲಿ ಅಧಿಕೃತ ಅಭ್ಯರ್ಥಿ ಪರಾಭವಗೊಂಡರೆ, ಧಾರವಾಡದಲ್ಲಿ ಗೆದ್ದು ಸೋತಂತಾಗಿರುವುದು ನಿಜಕ್ಕೂ ಬಿಜೆಪಿಯಲ್ಲೂ ಮನೆಯೊಂದು ೬ ಬಾಗಿಲು ಎನ್ನುವಂತಾಗಿದೆ.
ಈಗಾಗಲೇ ದೂರವಾಣಿ ಮೂಲಕ ಹಾಗೂ ಜಾಲತಾಣದ ಮೂಲಕ ವರಿಷ್ಠಗೆ ದೂರು ನೀಡಿದ್ದೇನೆ.
ಅಧಿವೇಶನದ ಬಳಿಕ ಖುದ್ದಾಗಿ ಭೇಟಿ ಮಾಡಿ ಲಿಖಿತ ದೂರು ನೀಡುವದಾಗಿ ಹೇಳಿರುವುದು ಮುಂದಿನ ದಿನಗಳಲ್ಲಿ ೧೯೯೩ರಿಂದಲೂ ಹೊಗೆಯಾಡುತ್ತಲೆ ಇರುವ ಬೊಮ್ಮಾಯಿ ಶೆಟ್ಟರ್ ನಡುವಣ ಅಸಮಾಧಾನದ ಹೊಗೆ ಯಾವ ತಿರುವು ಪಡೆಯುತ್ತದೆ ಎಂಬುದು ಕುತೂಹಲ ಕೆರಳಿಸಿದೆ.
ಈ ತಿಂಗಳಾಂತ್ಯಕ್ಕೆ ನಗರದಲ್ಲಿ ರಾಜ್ಯ ಕಾರ್‍ಯಕಾರಿಣಿಯಿದ್ದು ಬಂದಾಗ ಎಲ್ಲ ಬಗೆಹರಿಸುವುದಾಗಿ ರಾಜ್ಯಾಧ್ಯಕ್ಷ ಕಟೀಲು ಪ್ರದೀಪ್ ಅವರಿಗೆ ಕಿವಿ ಮಾತು ಹೇಳಿದ್ದಾರೆನ್ನಲಾಗಿದೆ.
ಒಂದೆಡೆ ಮುಖ್ಯಮಂತ್ರಿ ಬದಲಾವಣೆ ಗುಸು ಗುಸು, ಇನ್ನೊಂದೆಡೆ ಕೆಲ ದಿನಗಳ ಹಿಂದೆ ಜಗದೀಶ ಶೆಟ್ಟರ್ ದಿಲ್ಲಿ ಭೇಟಿ, ಕಳೆದ ದಿ.೧೭ರಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶೆಟ್ಟರ್‌ಗೆ ಜನ್ಮದಿನ ಶುಭಾಶಯ ಕೋರಿಕೆ ಭೇಟಿ ಎಲ್ಲವೂ ಹೊಸ ಹೊಸ ಲೆಕ್ಕಾಚಾರಗಳಿಗೆ ನಾಂದಿ ಹಾಡಿವೆ.
ಅಲ್ಲದೇ ಶೆಟ್ಟರ್ ಜತೆ ಮಹಾನಗರ ಅಧ್ಯಕ್ಷ ಅರವಿಂದ ಬೆಲ್ಲದ ಸಂಬಂಧವೂ ಅಷ್ಟಕ್ಕಷ್ಟೆ ಎನ್ನುವಂತಾಗಿದೆ.

administrator

Related Articles

Leave a Reply

Your email address will not be published. Required fields are marked *