ಹುಬ್ಬಳ್ಳಿ-ಧಾರವಾಡ ಸುದ್ದಿ

ಬೊಮ್ಮಾಯಿ ಸ್ಥಾನ ಭದ್ರ; ಸಿಎಂ ಪರ ಜೋಶಿ ಬ್ಯಾಟಿಂಗ್

ಹುಬ್ಬಳ್ಳಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಯಾವುದೇ ಊಹಾಪೋಹಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಶನಿವಾರ ನಗರದ ಹೆಗ್ಗೇರಿಯ ರುದ್ರಭೂಮಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯ ದಲ್ಲಿ ಪಾಲ್ಗೊಂಡು, ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ೯೮ನೇ ಜನ್ಮದಿನದ ಅಂಗವಾಗಿ ಬಿಜೆಪಿ ಮತ್ತು ಮಹಾನಗರ ಪಾಲಿಕೆ ಸಹಯೋಗದಲ್ಲಿ ಹಳೇಹುಬ್ಬಳ್ಳಿ ಹೆಗ್ಗೇರಿ ರುದ್ರಭೂಮಿಯಲ್ಲಿ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಪಾಲ್ಗೊಂಡು ಶ್ರಮದಾನ ಮಾಡಿ ಸಸಿ ನೆಟ್ಟರು. ಆಯುಕ್ತ ಸುರೇಶ ಇಟ್ನಾಳ, ಸದಸ್ಯರಾದ ರಾಜಣ್ಣ ಕೊರವಿ, ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ, ಪೂರ್ವ ಅಧ್ಯಕ್ಷ ಪ್ರಭು ನವಲಗುಂದಮಠ ಸಹಿತ ಇತರ ಪಾಲಿಕೆ ಸದಸ್ಯರು ಇದ್ದರು.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ವರಿಷ್ಠರ ಮಟ್ಟದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಊಹಾಪೋಹಗಳಿಗೆ ಕಿವಿಗೊಡಬೇಡಿ. ಯಾರೋ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅದನ್ನು ಕೈ ಬಿಡಬೇಕು’ ಎಂದರು.
ಬೊಮ್ಮಾಯಿ ಚಿಕಿತ್ಸೆಗೆ ಅಮೆರಿಕಕ್ಕೆ ಹೋಗಲಿದ್ದಾರೆ. ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಲಾಗುತ್ತದೆ ಎಂಬುದು ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದರು. ’ಪ್ರಧಾನಿ ನರೇಂದ್ರ ಮೋದಿ ಏನೇ ಮಾಡಿದರೂ ಅದನ್ನು ಕಾಂಗ್ರೆಸ್‌ನವರು ವಿರೋಧಿಸುತ್ತಾರೆ. ಅವರಲ್ಲಿ ಮೋದಿ ಫೋಬಿಯಾ ಆರಂಭವಾಗಿದೆ’ ಎಂದ ಅವರು,’ಚುನಾವಣಾ ಕಾನೂನುಗಳ(ತಿದ್ದುಪಡಿ) ಮಸೂದೆಗೆ ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತಿದೆ. ಸಂಸತ್‌ನ ಸ್ಥಾಯಿ ಸಮಿತಿಯಲ್ಲಿ ಮಸೂದೆ ಚರ್ಚೆಯಾಗು ವಾಗ ಯಾರೊಬ್ಬರೂ ಭಿನ್ನಾಭಿಪ್ರಾಯದ ಟಿಪ್ಪಣೆ ಸಲ್ಲಿಸಿಲ್ಲ. ನಂತರ ಚುನಾವಣಾ ಆಯೋಗ ಅದನ್ನು ಎಲ್ಲ ಪಕ್ಷದವರ ಚರ್ಚಿಸಿದೆ. ಆಗಲೂ ವಿರೋಧ ವ್ಯಕ್ತಪಡಿಸಿಲ್ಲ. ಸಂಸತ್‌ನಲ್ಲಿ ಪ್ರಧಾನಿ ಅದನ್ನು ಪ್ರಸ್ತಾವ ಮಾಡಿದಾಗ ವಿರೋಧ ಯಾಕೆ’ ಎಂದು ಪ್ರಶ್ನಿಸಿದರು.

’ಬಿಜೆಪಿಗೆ ಆಡಳಿತ ನಡೆಸಲು ಜನರೇ ನೀಡಿದ ಜನಾದೇಶವನ್ನು ಕಾಂಗ್ರೆಸ್ ಒಪ್ಪುತ್ತಿಲ್ಲ. ಜನರ ಪರವಾಗಿಯೇ ನಾವು ಆಡಳಿತ ನಡೆಸುತ್ತ, ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎನ್ನುವ ಮಾನಸಿಕ ಸಿನಿಕತೆ ಅವರಲ್ಲಿ ಮನೆ ಮಾಡಿದೆ’ ಎಂದು ಆರೋಪಿಸಿದರು.
’ರಾಜ್ಯದಲ್ಲಿ ಮತಾಂತರ ನಿಷೇಧ ಮಸೂದೆಗೆ ವಿಧಾನ ಪರಿಷತ್‌ನಲ್ಲಿ ಬಹುಮತ ಇಲ್ಲದ ಕಾರಣ ಮಂಡನೆ ಆಗಿಲ್ಲ. ಮುಂಬರುವ ದಿನಗಳಲ್ಲಿ ಅದು ಮಂಡನೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಮರಗೋಳದಲ್ಲಿರುವ ಜಗಜ್ಯೋತಿ ಬಸವೇಶ್ವರ ಎಪಿಎಂಸಿಯಲ್ಲಿ ಹುಬ್ಬಳ್ಳಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಉದ್ಘಾಟಿಸಿದರು. ಸಭಾಪತಿ ಬಸವರಾಜ್ ಹೊರಟ್ಟಿ, ಮಾಜಿ ಸಚಿವ ಪಿ.ಸಿ.ಸಿದ್ದನಗೌಡ್ರ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ, ಚೇರಮನ್ ಬಿ.ಡಿ. ನಾಗನಗೌಡರ, ಶತಮಾನೋತ್ಸವ ಸಮಿತಿ ಅಧ್ಯಕ್ಷ ವಿ.ಎಸ್.ಕೆಂಚನಗೌಡ್ರ, ವೈಸ್ ಚೇರಮನ್ ಎಸ್.ಎಫ್.ಹಿರೇಮಠ, ನಿರ್ದೇಶಕರಾದ ಜಿ.ಆರ್. ಮೂಲಗಿ, ಸಿ.ಸಿ.ಪಾಟೀಲ, ಎಂ.ಪಿ.ಸೂರಣಗಿ, ಜಿ.ಎಲ್.ಹೊಂಬಳ, ಎಂ.ಆರ್.ಪಾಟೀಲ, ವೈ.ಆರ್.ಮೂಲಗಿ, ಆರ್.ಪಿ. ನದಾಫ್, ಶ್ರೀಮತಿ ಎಸ್.ವಿ.ಕೆಂಚನಗೌಡ್ರ, ಶ್ರೀಮತಿ ಎ.ಬಿ.ನಾಗನಗೌಡ್ರ, ಪ್ರಭಾರ ವ್ಯವಸ್ಥಾಪಕ ಜಿ.ಆರ್.ಹಿರೇಗೌಡ್ರ, ರಘು ಕೆಂಪಲಿಂಗನಗೌಡರ ಇನ್ನಿತರರಿದ್ದರು.

ಬಂದ್ ಮಾಡಬೇಡಿ

ಕನ್ನಡ ಪರ ಸಂಘಟನೆಗಳು ಡಿ.31ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ನಾವು ನಮ್ಮದೇ ಬಂದ್ ಮಾಡಿದರೆ ಏನು ಪ್ರಯೋಜನ. ಯಾವುದೇ ಕಾರಣಕ್ಕೂ ಕರ್ನಾಟಕ ಬಂದ್ ಮಾಡಬೇಡಿ ಎಂದು ಬಂದ್ ಗೆ ಕರೆಕೊಟ್ಟವರಿಗೆ ತಮ್ಮ ಆಗ್ರಹ ಎಂದು  ಮುಖ್ಯಮಂತ್ರಿ ಬೊಮ್ಮಾಯಿ ಮನವಿ ಮಾಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಪ್ರಕರಣಕ್ಕೆ ಎಂಇಎಸ್ ಕಾರಣ ಎನ್ನಲಾಗದು ಎಂದ ಅವರು,ಮರಾಠಿಗರ ಹೆಸರಿನಲ್ಲಿ ಕೆಲವರು ಈ ರೀತಿ ಮಾಡುತ್ತಿದ್ದಾರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಕೆಲವರು ಈ ರೀತಿ ಕೃತ್ಯ ನಡೆಸಿದ್ದಾರೆ ಎಂದರು.
ಉದ್ದವ್ ಠಾಕ್ರೆ ಮತ್ತು ಶರತ್ ಪವಾರ್ ಇದನ್ನು ಗಮನಿಸಬೇಕು. ಬೆಳಗಾವಿ ಸಮಗ್ರ ಕರ್ನಾಟಕದ್ದು, ಅವರು ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ರಕ್ಷಣೆ ಕೊಡಬೇಕು. ಇಲ್ಲಿ ಮರಾಠಿಗರಿಗೆ ರಕ್ಷಣೆ ಕೊಡುವ ಜವಾಬ್ದಾರಿ ನಮ್ಮದು ಎಂದರು.

ನಿಷೇಧ ಮಸೂದೆಗೆ ಹಿನ್ನಡೆಯಾಗಿಲ್ಲ

ಹುಬ್ಬಳ್ಳಿ: ’ಮತಾಂತರ ನಿಷೇಧ ಮಸೂದೆಗೆ ಹಿನ್ನಡೆಯಾಗಿಲ್ಲ. ವಿಧಾನ ಪರಿಷತ್‌ನಲ್ಲಿ ನಮಗೆ ಅಗತ್ಯ ಬೆಂಬಲವಿಲ್ಲ. ಈ ಬಗ್ಗೆ ಸ್ಪಷ್ಟತೆ ಇದೆ. ಹಾಗಾಗಿ, ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಲಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಮೂರ್ನಾಲ್ಕು ಸದಸ್ಯರು ಅಧಿವೇಶನಕ್ಕೆ ಗೈರಾಗಿದ್ದರು. ಅವರು ಬಂದಿದ್ದರೆ ಮಸೂದೆ ಮಂಡಿಸಿ ಪಾಸ್ ಮಾಡಿಸುವ ಆಲೋಚನೆ ನಮ್ಮದಾಗಿತ್ತು. ಅವರನ್ನು ಕರೆತರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹಾಗಾಗಿ, ನ್ಯಾಯಸಮ್ಮತವಾಗಿ ಮುಂದಿನ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಿದ್ದೇವೆ ಎಂದರು.
ಪ್ರತಿಪಕ್ಷದವರು ಹೀಗೆಯೇ ಆಗಬೇಕು ಎಂಬ ಹಠದ ಧೋರಣೆಯಿಂದ, ಸಭಾಪತಿ ಸ್ಥಾನದ ಘನತೆ ಮರೆತು, ಬಸವರಾಜ ಹೊರಟ್ಟಿ ಅವರೊಂದಿಗೆ ಮಿತಿಮೀರಿ ವರ್ತಿಸಿದ್ದಾರೆ. ಇದು ಹೊರಟ್ಟಿ ಅವರಿಗೆ ನೋವುಂಟು ಮಾಡಿದ್ದರಿಂದಾಗಿ, ರಾಜೀನಾಮೆಗೂ ಅವರು ಮುಂದಾದರು. ನಾನು ಅವರನ್ನು ಸಮಾಧಾನಪಡಿಸಿದೆ. ಬಳಿಕ, ಪ್ರತಿಪಕ್ಷಗಳ ನಾಯಕರು ವಿಷಾದ ವ್ಯಕ್ತಪಡಿಸಿದರು. ಸದನದ ಸಮಯ ಎಲ್ಲರದ್ದು ಎಂದು ಅರಿತು ನಡೆದುಕೊಂಡರೆ, ಇಂತಹ ಘಟನೆಗಳಿಗೆ ಆಸ್ಪದವಿರುವುದಿಲ್ಲ ಎಂದರು.

ವಿದೇಶ ಪ್ರವಾಸಕ್ಕೆ ಹೋಗುವುದಿಲ್ಲ

ಹುಬ್ಬಳ್ಳಿ : ವಿದೇಶದಲ್ಲಿ ತಮ್ಮ ಮಂಡಿ ನೋವಿನ ಶಸ್ತ್ರ ಚಿಕಿತ್ಸೆ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಡಾವೋಸ್ ಶೃಂಗ ಸಭೆಯೇ ಮುಂದೆ ಹೋಗಿದೆ. ಹೀಗಿರೋವಾಗ ಯಾವುದೇ ಕಾರಣಕ್ಕೂ ಮುಂದೆಯೂ ನಾನು ವಿದೇಶ ಪ್ರವಾಸಕ್ಕೆ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *