ಹುಬ್ಬಳ್ಳಿ-ಧಾರವಾಡ ಸುದ್ದಿ
ಪಶ್ಚಿಮ ಶಿಕ್ಷಕರ ಕ್ಷೇತ್ರ : ಹೊರಟ್ಟಿ ಕಣಕ್ಕಿಳಿಸಲು ಬಿಜೆಪಿ ತಂತ್ರ   ಸಖ್ಯ ಮತ್ತಷ್ಟು ಗಟ್ಟಿಗೊಳಿಸಿದ ಮತಾಂತರ ’ಬಂಧ’

ಪಶ್ಚಿಮ ಶಿಕ್ಷಕರ ಕ್ಷೇತ್ರ : ಹೊರಟ್ಟಿ ಕಣಕ್ಕಿಳಿಸಲು ಬಿಜೆಪಿ ತಂತ್ರ ಸಖ್ಯ ಮತ್ತಷ್ಟು ಗಟ್ಟಿಗೊಳಿಸಿದ ಮತಾಂತರ ’ಬಂಧ’

 

ವಿಶೇಷ ವರದಿ
ಹುಬ್ಬಳ್ಳಿ: ಕಮಲ ಪಾಳೆಯಕ್ಕೆ ಅವಿಭಾಜ್ಯ ಧಾರವಾಡ ಜಿಲ್ಲೆ ಮತ್ತು ಕಾರವಾರ ಒಳಗೊಂಡ ಪಶ್ಚಿಮ ಶಿಕ್ಷಕರ ಕ್ಷೇತ್ರ ಕಬ್ಬಿಣದ ಕಡಲೆಯಾಗಿಯೇ ಇದ್ದು ಈ ಬಾರಿ ವಶಕ್ಕೆ ಪಡೆಯಲೇ ಬೇಕೆಂದು ಹಠಕ್ಕೆ ಬಿದ್ದಿದ್ದು ಅದು ನನಸಾಗುವ ಎಲ್ಲ ಲಕ್ಷಣಗಳು ಗೋಚರಿಸಲಾರಂಭಿಸಿದೆ.
೨೦೨೨ರ ಮದ್ಯಂತರದಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಈಗಾಗಲೇ ಪೂರ್ವಭಾವಿ ನಡೆಸಿ ಮೂವರ ಹೆಸರನ್ನು ಶಿಫಾರಸು ಮಾಡಲಾಗಿದೆಯಾದರೂ ಅಂತಿಮವಾಗಿ ಹಾಲಿ ಪರಿಷತ್ ಸಭಾಪತಿ,ಸೋಲಿಲ್ಲದ ಸರದಾರ ಬಸವರಾಜ ಹೊರಟ್ಟಿಯವರನ್ನೇ ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.
ಮತಾಂತರ ನಿಷೇಧ ಕಾಯಿದೆಗೆ ವಿಧಾನಸಭೆಯಲ್ಲಿ ಧ್ವನಿಮತದಿಂದ ಅನುಮೋದನೆ ದೊರೆತರೂ ಮೇಲ್ಮನೆಯಲ್ಲಿ ಶುಕ್ರವಾರ ಅಂಗೀಕಾರ ಪಡೆಯಲೇಬೇಕೆಂಬ ಬಿಜೆಪಿ ಯತ್ನಕ್ಕೆ ಹಿನ್ನೆಡೆಯಾಯಿತಾದರೂ ಸಭಾಪತಿ ಬಸವರಾಜ ಹೊರಟ್ಟಿ ನಿಭಾಯಿಸಿದ ರೀತಿ ಮೂಲ ಬಿಜೆಪಿಗರನ್ನೇ ಬೆರಗುಗೊಳಿಸಿದೆಯಲ್ಲದೇ ಪಕ್ಷದ ಜತೆಗಿನ ’ಬಂಧ’ ಮತ್ತಷ್ಟು ಗಟ್ಟಿಯಾಗಿದ್ದು, ಹಾಗಾಗಿ ಅವರಿಗೆ ಪಶ್ಚಿಮ ಕ್ಷೇತ್ರದ ಟಿಕೇಟ್ ನಿಕ್ಕಿ ಎಂಬ ಮಾತು ಕಮಲ ಪಾಳೆಯದ ಮೂಲಗಳಿಂದಲೇ ಪ್ರತಿಧ್ವನಿಸುತ್ತಿದೆ.
ಹಿರಿತನ ಹಾಗೂ ಶಿಕ್ಷಕರ ಧ್ವನಿಯಾಗಿರುವ ಹೊರಟ್ಟಿಯವರು ಜೆ.ಡಿ.ಎಸ್‌ನಲ್ಲಿದ್ದರೂ ಎಂದೂ ಶಿಕ್ಷಕರ ಚುನಾವಣೆಯಲ್ಲಿ ಮಾಧ್ಯಮಿಕ ಶಿಕ್ಷಕರ ಸಂಘದಿಂದಲೇ ಸೆಣಸಾಡುತ್ತ ಬಂದಿದ್ದು ಹೊರಟ್ಟಿಯವರೇ ಬಿಜೆಪಿ ಹುರಿಯಾಳಾದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕಳೆದ ಅನೇಕ ತಿಂಗಳಿಂದ ಪದೆ ಪದೇ ಕೆಲ ಪ್ರಭಾವಿ ಬಿಜೆಪಿ ಮುಖಂಡರ ಬಾಯಿಯಿಂದಲೇ ಬರುತ್ತಲೇ ಇದ್ದುದು, ನಿಜವಾಗುವ ಹಾದಿಯಲ್ಲಿದೆ.
ಕಳೆದ 7 ಅವಧಿಯಿಂದ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಲೇ ಬಂದಿರುವ ಹೊರಟ್ಟಿ ಎದುರು ಸೆಣಸಾಟ ಸುಲಭವಲ್ಲವಾಗಿದ್ದು,ನಾಲ್ಕೂ ಜಿಲ್ಲೆಗಳಲ್ಲಿ ಹೆಚ್ಚಿನ ಶಾಸಕರನ್ನು ಹೊಂದಿದ್ದರೂ ಕೇಸರಿ ಪಡೆಗೆ ಹೊರಟ್ಟಿಯವರ ಬೇರುಗಳ ಆಳ ಇಂದಿಗೂ ಅರ್ಥವಾಗಿಲ್ಲ ಎಂಬುದು ಬಹಿರಂಗ ಸತ್ಯವಾಗಿದೆ.
ಪದವೀಧರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ಮಾಜಿ ಸಿಎಂ ಯಡಿಯೂರಪ್ಪ ಬಣದಲ್ಲಿರುವ ಮೋಹನ ಲಿಂಬಿಕಾಯಿ, ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಶಿಕ್ಷಕ ಸ್ನೇಹಿಯಾಗಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂದೀಪ ಬೂದಿಹಾಳ, ಸಿಂಡಿಕೇಟ್ ಸದಸ್ಯ ಸುಧೀಂದ್ರ ದೇಶಪಾಂಡೆಯವರ ಹೆಸರುಗಳು ಪಶ್ಚಿಮ ಕ್ಷೇತ್ರಕ್ಕೆ ಶಿಫಾರಸು ಆಗಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಹೊರಟ್ಟಿಯವರ ಸೇರ್ಪಡೆಗೆ ಗ್ರೀನ್ ಸಿಗ್ನಲ್ ದೊರೆತಿದ್ದು ಈ ವಿಚಾರದಲ್ಲಿ ಎಲ್ಲ ಪ್ರಕ್ರಿಯೆ ಅಂತಿಮಗೊಳಿಸುವ ಅಧಿಕಾರ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ನೀಡಿದ್ದಾರೆನ್ನಲಾಗುತ್ತಿದೆ. ಹೊರಟ್ಟಿಯವರು ಪಕ್ಷೇತರರಾಗಿ ನಿಂತಲ್ಲಿ ಅವರನ್ನೇ ಬೆಂಬಲಿಸಬೇಕೆಂಬ ವಾದ ಮೊದಲು ಕೆಲವರದ್ದು ಇತ್ತಾದರೂ ತದನಂತರ ರಾಷ್ಟ್ರೀಯ ಪಕ್ಷವಾದ್ದರಿಂದ ಹಾಗೇ ಬೆಂಬಲಿಸಲು ಸಾಧ್ಯವಿಲ್ಲ . ಅವರನ್ನೇ ಪಕ್ಷಕ್ಕೆ ಸೇರಿಸಿಕೊಂಡು ಹುರಿಯಾಳಾಗಿಸಬೇಕೆಂಬ ಚಿಂತನೆ ಮುನ್ನೆಲೆಗೆ ಬಂದಿದೆ ಎನ್ನಲಾಗಿದೆ.
ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಪರಿಣಾಮ ಸಭಾಪತಿಯಾಗಿರುವ ಹೊರಟ್ಟಿಯವರಿಗೆ ಜನವರಿ ನಂತರ ಬಿಜೆಪಿ ಪರಿಷತ್‌ನಲ್ಲೂ ಅತ್ಯಧಿಕ ಸ್ಥಾನಗಳನ್ನು ಹೊಂದಿರುವುದರಿಂದ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಲ್ಲಿ ಹಿರಿತನ ಆಧರಿಸಿ ಮಂತ್ರಿಗಿರಿ ಅಥವಾ ಸಭಾಪತಿ ಸ್ಥಾನದಲ್ಲೇ ಮುಂದುವರಿಸುವ ಭರವಸೆ ಕೇಸರಿ ಪಾಳೆಯದಿಂದ ಬಂದಿದೆ ಎನ್ನಲಾಗಿದೆ.
ಅಭ್ಯರ್ಥಿಗಳ ಆಯ್ಕೆಯಲ್ಲಿ ಆರ್ ಎಸ್ ಎಸ್ ಪ್ರಮುಖರು ಸೇರಿ ತೆಗೆದುಕೊಳ್ಳುವ ನಿರ್ಧಾರ ಅಂತಿಮವಾಗಿದ್ದು, ಹಾಗಾಗಿ ಸಂಘ ನಿಷ್ಠೆ ಪ್ರಮುಖ ಪಾತ್ರ ವಹಿಸಲಿದೆ ಎನ್ನಬಹುದಾದರೂ ಹೊರಟ್ಟಿಯವರ ವಿಚಾರದಲ್ಲಿ ರಿಯಾಯಿತಿ ದೊರೆವ ಲಕ್ಷಣಗಳಿವೆ ಎನ್ನಲಾಗಿದೆ.
ಗುರಿಕಾರ ಸೆಡ್ಡು: ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ತನ್ನದೇ ಹಿಡಿತ ಹೊಂದಿದ್ದ ಶಿಕ್ಷಕ ಮುಖಂಡ ಬಸವರಾಜ ಗುರಿಕಾರ ಕಾಂಗ್ರೆಸ್‌ನಿಂದ ಉಮೇದುವಾರರಾಗುವ ಸಾಧ್ಯತೆಗಳಿದ್ದು ಕಳೆದ ಪಧವೀಧರ ಕ್ಷೇತ್ರದ ಚುನಾವಣೆಯಲ್ಲೂ ಕಣಕ್ಕಿಳಿದು ಗಮನಾರ್ಹ ಮತಗಳನ್ನು ಅವರು ಪಡೆದಿದ್ದಾರೆಂಬುದು ಮಹತ್ವದ ಆಂಶವಾಗಿದೆ.

 

ಕೆಲವರು ಪ್ರಸ್ತಾಪಿಸಿದ್ದು ನಿಜ
ಕೆಲವು ಬಿಜೆಪಿಯಲ್ಲಿನ ಆತ್ಮೀಯರು ನನ್ನ ಬಳಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಆದರೆ ಒಮ್ಮೇಲೆ ಯಾವುದೇ ತೀರ್ಮಾನ ಮಾಡಲು ಸಾಧ್ಯವಿಲ್ಲ. ನಾಲ್ಕು ಜಿಲ್ಲೆಗಳ ಸಂಘಟನೆಗಳು, ಹಿತೈಷಿಗಳೆಲ್ಲರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುವೆ.
ಬಸವರಾಜ ಹೊರಟ್ಟಿ
ಪರಿಷತ್ ಸಭಾಪತಿ

administrator

Related Articles

Leave a Reply

Your email address will not be published. Required fields are marked *