ಹುಬ್ಬಳ್ಳಿ: ರಾಜ್ಯದಲ್ಲೇ ಅತ್ಯಂತ ಪ್ರತಿಷ್ಠಿತ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಘಟಕದ ನೂತನ ಸಾರಥಿಯಾಗಿ ಸಂಜಯ ಕಪಟಕರ ನೇಮಕಗೊಂಡಿದ್ದು ರಾಜೀನಾಮೆ ನೀಡಿದ ಹಿಂದಿನ ಜಿಲ್ಲಾ ಅಧ್ಯಕ್ಷ ಶಾಸಕ ಅರವಿಂದ ಬೆಲ್ಲದ ಮತ್ತೊಮ್ಮೆ ಮೇಲುಗೈ ಸಾಧಿಸಿದ್ದಾರೆ.
ತಮ್ಮ ಸ್ಥಾನಕ್ಕೆ ತಮ್ಮ ಶಿಷ್ಯನನ್ನು ತರುವ ಮೂಲಕ ಮಹಾನಗರ ಅಧ್ಯಕ್ಷ ಸ್ಥಾನ ಪಶ್ಚಿಮದಲ್ಲೇ ಉಳಿಯುವಂತೆ ನೋಡಿಕೊಂಡಿದ್ದಾರೆ.
ತಾವು ರಾಜೀನಾಮೆ ನೀಡಲು ಸಿದ್ದ ಆದರೆ ತಾವು ಹೇಳಿದವರಿಗೆ ಮಣೆ ಹಾಕಬೇಕೆಂಬ ಪಟ್ಟಿಗೆ ಹೈಕಮಾಂಡ್ ಮಾಜಿ ಪಾಲಿಕೆ ಸದಸ್ಯ ಸಂಜಯ ಕಪಟಕರ್ಗೆ ಮಣೆ ಹಾಕಿದೆ.
ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯ ವಾಯುವ್ಯ ಸಾರಿಗೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಹಾಲಿ ಮಹಾನಗರ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಮಜ್ಜಗಿ ಮುಂತಾದವರ ಹೆಸರುಗಳು ಲೀಸ್ಟ್ನಲ್ಲಿದ್ದರೂ ಅಂತಿಮವಾಗಿ ಬೆಲ್ಲದ ಪ್ರಸ್ತಾಪಕ್ಕೆ ಕಟೀಲು ಅಂಕಿತ ಹಾಕಿದ್ದಾರೆ.
ಪಾಲಿಕೆ 15 ನೇ ವಾರ್ಡಿನ ಆಕಾಂಕ್ಷಿಯಾಗಿದ್ದ ಕಪಟಕರ ಅವರನ್ನು 23ನೆ ವಾರ್ಡಿಗೆ ಎತ್ತಂಗಡಿ ಮಾಡಿದ್ದರ ಹಿಂದೆಯೂ ’ರಾಜಕೀಯ’ದ ವಾಸನೆಯಿದ್ದು ಪರಾಭವದಲ್ಲೂ ಪಕ್ಷದ ಕೆಲ ಶಕ್ತಿಗಳೇ ಕೆಲಸ ಮಾಡಿದ ಗುಸು ಗುಸುವಿದೆ.ಈಗ ಅವರಿಗೆ ಮಹಾನಗರದ ಪಟ್ಟ ಕಟ್ಟಲಾಗಿದೆ.
ಒಟ್ಟಿನಲ್ಲಿ ಮತ್ತೆ ಮಹಾನಗರ ಬಿಜೆಪಿಯಲ್ಲಿ ಗುಂಪು ರಾಜಕೀಯದ ಮತ್ತೊಂದು ಅಧ್ಯಾಯಕ್ಕೆ ಮುನ್ನುಡಿ ಬರೆದಂತಾಗಿದೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಾವಕಾರ ಹೆಸರು ಹೇಳಿದ್ದರೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಜ್ಜಗಿ ಪರ ಬ್ಯಾಟಿಂಗ್ ಮಾಡಿದ್ದರು.ಮುಂದಿನ ದಿನಗಳಲ್ಲಿ ಯಾವ ರೀತಿ ತಿರುವು ಪಡೆಯುವುದೋ ಕಾದು ನೋಡಬೇಕಾಗಿದೆ.