ಹುಬ್ಬಳ್ಳಿ-ಧಾರವಾಡ ಸುದ್ದಿ
ಕೆಐಎಡಿಬಿಯಿಂದ ಸಾವಿರಾರು ಎಕರೆ ಜಮೀನು ಸ್ವಾಧೀನ ಯತ್ನ : ಕಂಗೆಟ್ಟ ರೈತರು   ಪರಿಹಾರ ನಿಗದಿಪಡಿಸದೇ ಅಂತಿಮ ಹಂತದ ನೋಟಿಸಿಗೆ ಆಕ್ರೋಶ

ಕೆಐಎಡಿಬಿಯಿಂದ ಸಾವಿರಾರು ಎಕರೆ ಜಮೀನು ಸ್ವಾಧೀನ ಯತ್ನ : ಕಂಗೆಟ್ಟ ರೈತರು ಪರಿಹಾರ ನಿಗದಿಪಡಿಸದೇ ಅಂತಿಮ ಹಂತದ ನೋಟಿಸಿಗೆ ಆಕ್ರೋಶ

ಧಾರವಾಡ : ತಾಲೂಕಿನ ವಿವಿಧ ಗ್ರಾಮಗಳ ರೈತರ ಸಾವಿರಾರು ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ( ಕೆಐಎಡಿಬಿ) ಮುಂದಾಗಿದ್ದು ಅನ್ನದಾತರನ್ನು ಕಂಗೆಡಿಸಿದೆ.
ತಾಲೂಕಿನ ರಾಮಾಪೂರ, ವೀರಾಪೂರ, ಹೊಸವಾಳ, ಶಿಂಗನಹಳ್ಳಿ, ಸಿದ್ದಾಪೂರ(ಕಲ್ಲಾಪೂರ), ಕುಮ್ಮನಾಯ್ಕನಕೊಪ್ಪ, ಕೋಟೂರ, ಹೆಗ್ಗೇರಿ, ಗುಳೇದಕೊಪ್ಪ, ಮದಿಕೊಪ್ಪ, ವೆಂಕಟಾಪೂರ, ವರವಿ ನಾಗಲಾವಿ, ಹೊಸವಾಳ ಗ್ರಾಮಗಳ 5129 ಎಕರೆ ಜಮೀನನ್ನು ’ಸುವರ್ಣ ಕರ್ನಾಟಕ ಕೈಗಾರಿಕಾ ಕಾರಿಡಾರ್’ (ಃಒಇಅ) ಗಾಗಿ ಈಗಾಗಲೇ ಅಂತಿಮ ಹಂತದ ನೋಟಿಸುಗಳನ್ನು ರೈತರಿಗೆ ನೀಡಲಾಗಿದೆ.
ಈ ಸಂಬಂಧ ದಿ.2.2.2021 ರಂದು ಕರ್ನಾಟಕ ರಾಜ್ಯ ಪತ್ರ ಕೂಡ ಪ್ರಕಟಿಸಲಾಗಿದೆ. ಈಗ ಸ್ವಾಧೀನಪಡಿಸಿಕೊಂಡ ಜಮೀನುಗಳ ಜೆ.ಎಂ.ಸಿ. ಕಾರ್ಯವನ್ನು ಕಳೆದ ದಿ.3 ರಿಂದ ಕಂದಾಯ ಇಲಾಖೆಯ ಅಧಿಕಾರಿಗಳು ಆರಂಭಿಸಿದ್ದಾರೆ.
ಈಗಾಗಲೇ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ನೋಟಿಸುಗಳನ್ನು ನೀಡಿದೆ ಹೊರತು ಜಮೀನಿಗಳಿಗೆ ಕೊಡುವ ಪರಿಹಾರವನ್ನು ನಿಗದಿಪಡಿಸಿಲ್ಲ. ಪೂರ್ವಜರಿಂದ ಬಂದ ಮತ್ತು ಉತ್ತಮ ಫಸಲು ಬರುತ್ತಿದ್ದ ಜಮೀನುಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿದ್ದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇನ್ನೊಂದೆಡೆ, ಅಭಿವೃದ್ಧಿ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಸರಕಾರ ಇದುವರೆಗೂ ಪರಿಹಾರದ ಮೊತ್ತ ನಿಗದಿಪಡಿಸಿಲ್ಲ. ಇದು ಈ ಹಳ್ಳಿಗಳ ರೈತರನ್ನು ಪೇಚಿಗೆ ಸಿಲುಕಿಸಿದೆ.
1985 ರಲ್ಲಿ ಆರಂಭಿಸಲಾದ ಧಾರವಾಡ ತಾಲೂಕಿನ ಬೇಲೂರು ಕೈಗಾರಿಕಾ ಪ್ರದೇಶವು ಸಾವಿರಾರು ಎಕರೆಗಳಷ್ಟು ಉತ್ತಮ ಜಮೀನನ್ನು ನುಂಗಿದೆ. ಮತ್ತು ಜಿಲ್ಲಾ ಕೇಂದ್ರ ಧಾರವಾಡದ ಸುತ್ತಮುತ್ತ ಸರಕಾರ ಈಗಾಗಲೇ ಸಾವಿರಾರು ಎಕರೆಯಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ಕೈಗಾರಿಕೆಗಳಿಗೆ ನೀಡಿದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಧಾರವಾಡ ಶಹರವು ಬೆಳಗಾವಿ ರಸ್ತೆಗೆ ಹೊಂದಿಕೊಂಡಂತೆ ಶೀಘ್ರವಾಗಿ ವಿಸ್ತರಣೆಯಾಗುತ್ತಿದೆ. ಇದರಿಂದ ರೈತರ ಬದುಕಿಗೆ ಆಸರೆಯಾಗಿದ್ದ ಭೂಮಿ ನಿತ್ಯ ಕೈತಪ್ಪುತ್ತಿದೆ. ಇತ್ತ ಜಮೀನುಗಳನ್ನು ಕಳೆದುಕೊಂಡ ರೈತರಿಗೆ ಸದ್ಯದ ಮಾರುಕಟ್ಟೆಯಲ್ಲಿನ ದರದ ಪ್ರಕಾರ ಪರಿಹಾರ ಸಿಗಲಾರದ ಸ್ಥಿತಿ ನಿರ್ಮಣವಾಗಿದೆ.
ಇತ್ತ ಭೂಮಿ ಕಳೆದುಕೊಂಡ ರೈತರು ಬೇರೆ ಜಮೀನು ಖರೀದಿಸಬೇಕೆಂದರೆ ಆ ಜಮೀನುಗಳ ದರ ಕೂಡ ಗಗನಕ್ಕೇರಿದೆ. ಹೀಗಾಗಿ ಸರಕಾರ ಕೊಡುವ ಪರಿಹಾರ ಮಾತ್ರ ರೈತರ ಬದುಕಿಗೆ ಆಸರೆ ಆಗಲಾರದ ಹಂತ ತಲುಪಿದೆ.
ಇನ್ನೊಂದೆಡೆ ಕೈಗಾರಿಕಾ ಬೆಳವಣಿಗೆಯ ಸಲುವಾಗಿ ಎಂದು ನಂಬಿಸಿ ಸ್ವಾಧೀನಪಡಿಸಿಕೊಂಡ ರೈತರ ಜಮೀನುಗಳನ್ನು ಸರಕಾರ ಅನ್ಯ ಉದ್ದೇಶಕ್ಕೆ ಖಾಸಗಿಯವರಿಗೆ ಕೊಟ್ಟ ನಿದರ್ಶನಗಳಿವೆ. ಸರಕಾರದ ಇಂತಹ ಧೋರಣೆಯಿಂದ ಇತ್ತ ಉದ್ಯಮಿಗಳಿಗೆ ಅನುಕೂಲವಾಗದೇ ಅತ್ತ ವಶಪಡಿಸಿಕೊಂಡ ಜಮೀನು ಕೂಡ ಸದ್ಭಳಕೆ ಆಗುತ್ತಿಲ್ಲ. ಸರಕಾರದ ಈ ನೀತಿಯಿಂದ ಉದ್ಯಮಿದಾರರು ಮತ್ತು ರೈತರು ವಂಚಿತರಾಗುತ್ತಿದ್ದಾರೆ.
ಜಮೀನುಗಳನ್ನು ಸ್ವಾಧಿನಪಡಿಕೊಳ್ಳುವ ಸರಕಾರದ ತೀರ್ಮಾನವನ್ನು ವಿರೋಧಿಸುವ ಶಕ್ತಿ ಕೂಡ ಈಗ ರೈತರಲ್ಲಿ ಇಲ್ಲದಾಗಿದೆ. ಅನ್ನದಾತರ ಹಿತಕಾಯಬೇಕಿದ್ದ ಸಂಘಟನೆಗಳ ಮುಖಂಡರು ಚದುರಿಹೋದ ಪರಿಣಾಮ ಸರಕಾರಕ್ಕೆ ಯಾವುದೇ ಪ್ರತಿರೋಧ ಇಲ್ಲದಾಗಿದೆ.
ಸರಕಾರ ಕೈಗಾರಿಕೆಗಳ ಅಭಿವೃದ್ಧಿ ದೃಷ್ಠಿಯಿಂದ ಜಮೀನುಗಳನ್ನು ಸ್ವಾಧೀನಪಡಿಕೊಳ್ಳುವುದು ಅನಿವಾರ್ಯ ಎನಿಸಿದರೆ, ರೈತರ ಜಮೀನುಗಳಿಗೆ ಪ್ರಸಕ್ತ ಮಾರುಕಟ್ಟೆಯಲ್ಲಿನ ದರವನ್ನು ಪರಿಹಾರದ ರೂಪದಲ್ಲಿ ಕೊಡಬೇಕು. ಮತ್ತು ಈಗ ತಿಳಿಸಿರುವ ಉದ್ದೇಶಕ್ಕೆ ಮಾತ್ರ ಸ್ವಾಧೀನಪಡಿಸಿಕೊಂಡ ಜಮೀನುಗಳನ್ನು ಬಳಸಿಕೊಳ್ಳಬೇಕು. ಇಲ್ಲವಾದರೆ, ಮುಂಬರುವ ದಿನಗಳಲ್ಲಿ ಇನ್ನೂ ಬೆಲೆ ಬಾಳುವ ಜಮೀನು ಖಾಸಗಿಯವರ ಕೈಸೇರದಿರಲಿ ಎಂಬುದು ಬಹುತೇಕರ ಅಭಿಪ್ರಾಯ.


ಸದ್ಭಳಕೆಯಾಗಲಿ
ಸರಕಾರ ಕೈಗಾರಿಕೆಗಳು ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳಿಗೆ ಜಮೀನುಗಳನ್ನು ಸ್ವಾಧಿನಪಡಿಕೊಳ್ಳುವುದು ಅನಿವಾರ್ಯ. ಸರಕಾರದ ಅಭಿವೃದ್ಧಿ ಕೆಲಸಕ್ಕೆ ರೈತರು ಸಹಕರಿಸಬೇಕು. ಇತ್ತ ಸರಕಾರ ಕೂಡ ಪ್ರಸಕ್ತ ಮಾರುಕಟ್ಟೆಗೆ ತಕ್ಕಂತೆ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಮತ್ತು ಜಮೀನು ನೀಡಿದ ರೈತರ ಕುಂಟುಂಬದವರಿಗೆ ಅರ್ಹತೆಗೆ ತಕ್ಕಂತೆ ಕೈಗಾರಿಕೆಗಳಲ್ಲಿ ಉದ್ಯೋಗ ಒದಗಿಸಬೇಕು. ಈ ಎರಡೂ ಆಸೆಗಳು ಈಡೇರಲಿವೆ ಎಂಬ ಆಸೆ ಇದೆ.
ನಾಗರಾಜ ಗಾಣಿಗೇರ
ಬಿಜೆಪಿ ಮುಖಂಡರು


ಭೂಸ್ವಾಧೀನ ಸರಿಯಲ್ಲ
ಧಾರವಾಡ ತಾಲೂಕಿನ ವಿವಿಧ ಹಳ್ಳಿಗಳ ರೈತರ ಸಾವಿರಾರು ಎಕರೆಗಳಷ್ಟು ಭೂಮಿಯನ್ನು ಸರಕಾರ ಇತ್ತೀಚಿನ ವರ್ಷಗಳಲ್ಲಿ ವಶಪಡಿಸಿಕೊಂಡಿದೆ. ಇದೀಗ ಪುನಃ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಪಡೆಯಲು ಹೊರಟಿರುವುದು ಸರಿಯಲ್ಲ. ಇದರಿಂದ ಭೂಮಿ ಕಳೆದುಕೊಂಡ ರೈತರು ಬೀದಿಗೆ ಬೀಳುವುದು ನಿಶ್ಚಿತ. ಆದ್ದರಿಂದ ಸರಕಾರದ ರೈತ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ. ಕೂಡಲೇ ಸರಕಾರ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ರೈತರನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂಬುದು ಬಹುತೇಕ ಹಳ್ಳಿಗರ ವಾದವಾಗಿದೆ.

ನಾಗನಗೌಡ ಪಾಟೀಲ
ಯುವ ರೈತ

administrator

Related Articles

Leave a Reply

Your email address will not be published. Required fields are marked *