50 ಲಕ್ಷ ಮೌಲ್ಯದ 3 ಇನ್ನೋವಾ ಜಪ್ತಿ
ಕೇಶ್ವಾಪುರ ಪೊಲೀಸರ ಭರ್ಜರಿ ಬೇಟೆ
ಮಂಗಳೂರು ಮೂಲದ ಮೂವರು,ಹುಬ್ಳಳ್ಳಿಯ ಓರ್ವನ ಬಂಧನ
ಹುಬ್ಬಳ್ಳಿ : ವಿವಿಧ ಹಣಕಾಸು ಸಂಸ್ಥೆಗಳು ಜಪ್ತಿ ಮಾಡಿದ ವಾಹನಗಳನ್ನು ಹುಬ್ಬಳ್ಳಿಗೆ ತಂದು ಅವುಗಳನ್ನು ನಕಲಿ ದಾಖಲೆ ಮೂಲಕ ಅಡವಿಟ್ಟು ಅಥವಾ ಮಾರಾಟ ಮಾಡಿ ಮತ್ತೆ ಅವುಗಳನ್ನು ಕಳುವು ಮಾಡುತ್ತಿದ್ದ ಜಾಲವೊಂದನ್ನು ಬೇಧಿಸಿದ ಕೇಶ್ವಾಪುರ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ಸುಮಾರು 50 ಲಕ್ಷ ಮೌಲ್ಯದ ಮೂರು ಇನ್ನೋವಾ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಮೂಲದವರಾದ ಮಹ್ಮದ ಫಯಾಜ್,ಇನಾಯತ್,ಇಮ್ರಾನ್ ಹಾಗೂ ಹುಬ್ಬಳ್ಳಿಯ ಮದ್ಯವರ್ತಿ ರಾಜೇಶ ಪ್ರಭಾಕರ ಹೆಗಡೆ ಎಂಬುವರನ್ನು ಬಂಧಿಸಿದ್ದಾರೆ.
ಮಂಗಳೂರು ಸೇರಿದಂತೆ ವಿವಿಧೆಡೆಯಿಂದ ಹಣಕಾಸು ಸಂಸ್ಥೆಗಳು ಸೀಜ್ ಮಾಡಿದ ವಾಹನಗಳನ್ನು ತಂದು ಗಾಡಿಯನ್ನು ತಂದು ಹುಬ್ಬಳ್ಳಿಯ ಕೆಲವರ ಬಳಿ ಅಡವಿಟ್ಟು ಹಣ ಪಡೆಯುತ್ತಿದ್ದ ಈ ಗ್ಯಾಂಗ್ ಆ ವಾಹನಗಳನ್ನು ಕಳುವು ಮಾಡುತ್ತಿತ್ತಲ್ಲದೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿತ್ತು.
ಹುಬ್ಬಳ್ಳಿಯ ಕೇಶ್ವಾಪುರ ಮತ್ತು ಗೋಕುಲ ಠಾಣೆ ವ್ಯಾಪ್ತಿಯಲ್ಲಿ ಕಾರು ಕಳ್ಳತನವಾದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗ ದರ್ಶನಲ್ಲಿ ತನಿಖೆ ಕೈಗೊಂಡ ಕೇಶ್ವಾಪುರ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ಮಂಗಳೂರಿನ ಮುಲ್ಕಿ ಮೂಲದ ಮೂವರು ಹಾಗೂ ಹುಬ್ಬಳ್ಳಿಯಲ್ಲಿ ಏಜೆಂಟ್ ಆಗಿದ್ದ ರಾಜೇಶನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಈ ತಂಡ ಬೆಂಗಳೂರು, ಮಂಗಳೂರು ಅಲ್ಲದೇ ಕೇರಳ ರಾಜ್ಯದ ಕೆಲವೆಡೆಗಳಿಂದಲೂ ಸೀಜ್ ಮಾಡಿದ ಕಾರು ತಂದು ಅಡವಿಟ್ಟು ತದನಂತರ ಕಳುವು ಮಾಡುತ್ತಿತ್ತು. ಯಾವುದೇ ಸರಿಯಾದ ದಾಖಲೆ ಅಲ್ಲದೇ ಇದ್ದುದರಿಂದ ಕೆಲವರು ದೂರನ್ನೇ ನೀಡುತ್ತಿರಲಿಲ್ಲ.
ಇಂದು ಅಂತಾರಾಜ್ಯ ಜಾಲವಾಗಿದ್ದು ತನಿಖೆಯಿಂದ ಇನ್ನಷ್ಟು ಮಹತ್ವದ ಸಂಗತಿಗಳು ಅಲ್ಲದೇ ಸಾಕಷ್ಟು ದೊಡ್ಡ ಪ್ರಮಾಣದ ವಂಚನೆಯ ಮಾಹಿತಿ ಹೊರ ಬರುವ ಸಾಧ್ಯತೆಗಳಿವೆ.