ತೆರವಿಗೆ ವಿನ್ಯಾಸ ಮಾಲಕರಿಂದ ಅಡ್ಡಿ – ವಾಗ್ವಾದ
ಸೊಪ್ಪು ಹಾಕದ ಅಧ್ಯಕ್ಷ ಕಲಬುರ್ಗಿ
ಧಾರವಾಡ: ನಗರದ ಹೊರವಲಯದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಅನಧೀಕೃತ ಲೇಔಟ್‌ಗಳ ತೆರವು ಕಾರ್ಯಾಚರಣೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇಂದು ಆರಂಭಗೊಂಡಿದೆ.
ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರ ನೇತೃತ್ವದಲ್ಲಿ ಇಲ್ಲಿನ ನವಲಗುಂದ ರಸ್ತೆಯಲ್ಲಿನ ಸುಮಾರು 36 ಅಕ್ರಮ ಲೇಔಟ್‌ಗಳ ತೆರವು ಕಾರ್ಯವನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಆರಂಭಿಸಲಾಗಿದ್ದು, ನಾಳೆಯೂ ಮುಂದುವರಿಯಲಿದೆ.
ಹುಡಾ ಅಧಿಕಾರಿಗಳು ಜೆಸಿಬಿಯೊಂದಿಗೆ ಆಗಮಿಸುತ್ತಿದ್ದಂತೆಯೇ ಕೆಲವು ಲೇಔಟ್ ಮಾಲೀಕರು ಸೇರಿದಂತೆ ಕೆಲ ಜನರು ತೆರವಿಗೆ ವಿರೋಧಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಆದರೆ ಅಧಿಕಾರಿಗಳು ಮಾತ್ರ ಯಾವುದೇ ಕಾರಣಕ್ಕೆ ಅಕ್ರಮ ತೆರವು ನಿಲ್ಲುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಪಾಲಿಕೆ ಸದಸ್ಯ ಶಂಭುಗೌಡ ಸಾಲಮನಿ ಹಾಗೂ ಹೋರಾಟಗಾರ ಬಸವರಾಜ ಜಾಧವ ಸೇರಿದಂತೆ ಇನ್ನೂ ಕೆಲವರು ಜೆಸಿಬಿಗೆ ಅಡ್ಡಲಾಗಿ ನಿಂತು ತೆರವು ನಿಲ್ಲಿಸುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು, ಅಕ್ರಮವನ್ನು ಸಕ್ರಮ ಮಾಡಿಕೊಳ್ಳಲು ಅವಕಾಶ ಇದ್ದರೂ ಮಾಲೀಕರು ಮಾತ್ರ ಕಿವಿಗೊಡುತ್ತಿಲ್ಲ. ಹೀಗಾಗಿ ತೆರವಿಗೆ ಮುಂದಾಗಿದೆಎಂದು ಸಮಜಾಯಿಷಿ ನೀಡಿದರು.
ಹುಡಾ ಸದಸ್ಯರಾದ ಸುನೀಲ ಮೋರೆ, ಚಂದ್ರಶೇಖರ ಗೋಕಾಕ, ಹುಡಾ ಆಯುಕ್ತ ನಿಂಗಪ್ಪ ಕುಮ್ಮಣ್ಣವರ, ನಗರ ಯೋಜಕ ವಿವೇಕ ಕಾರೇಕಾರ, ಮುಕುಂದ ಜೋಶಿ, ಬಸವರಾಜ ದೇವಗಿರಿ ಇನ್ನಿತರ ಅಧಿಕಾರಿಗಳು ಕಾರ್ಯಾಚರಣೆ ವೇಳೆ ಇದ್ದರು.