ಹುಬ್ಬಳ್ಳಿ-ಧಾರವಾಡ ಸುದ್ದಿ
ಸರ್ವಾಂಗೀಣ ಅಭಿವೃದ್ಧಿಯ ಕನಸುಗಾರ; ಬಸವರಾಜ ಬೊಮ್ಮಾಯಿ ಹಿರಿಯರಿಗೆ ಕಿರಿಯ ,ಕಿರಿಯರಿಗೆ ಹಿರಿಯ

ಸರ್ವಾಂಗೀಣ ಅಭಿವೃದ್ಧಿಯ ಕನಸುಗಾರ; ಬಸವರಾಜ ಬೊಮ್ಮಾಯಿ ಹಿರಿಯರಿಗೆ ಕಿರಿಯ ,ಕಿರಿಯರಿಗೆ ಹಿರಿಯ

(ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹುಟ್ಟು ಹಬ್ಬದ ನಿಮಿತ್ಯ ವಿಶೇಷ ಲೇಖನ)

ನೈತಿಕ ಮೌಲ್ಯಗಳು, ಬಡವರಪರ ಕಳಕಳಿ, ಕರ್ತವ್ಯಪರತೆ ಇವೆಲ್ಲವುಗಳ ಒಟ್ಟುಗೂಡಿದ ಮೂರ್ತರೂಪ ಬಸವರಾಜ ಬೊಮ್ಮಾಯಿ.ಅವರು ಇಂದು ನಾಡಿನ ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಯಲ್ಲಿದ್ದರೂ ಸರಳತೆ, ಸ್ಪಂದನಶೀಲತೆಗೆ ಹೆಸರಾದವರು.ಕಷ್ಟದಲ್ಲಿರುವವರಿಗೆ ಮಿಡಿಯುವ ಗುಣ, ಅಭಿವೃದ್ಧಿ ಪರ ಚಿಂತನೆ ಮತ್ತು ಕಾರ್ಯಗಳು ಅವರ ವ್ಯಕ್ತಿತ್ವವೇ ಆಗಿವೆ. ಇಂತಹ ಉದಾತ್ತತೆ ಅವರಿಗೆ ತಂದೆ-ತಾಯಿಯವರಿಂದ ರಕ್ತಗತವಾಗಿಯೇ ಬಂದ ಬಳುವಳಿಯಾಗಿದೆ.
ಮುಖ್ಯಮಂತ್ರಿಯವರ ಹುಟ್ಟು ಹಬ್ಬದ ದಿನದಂದು, ಅವರು ತಮ್ಮ ತಾಯಿಗೆ ಸಲ್ಲಿಸಿದ ಸೇವೆಯ ಮೇಲೆ ಒಂದು ನೋಟ ಬೀರುವ ಯತ್ನ ಮಾಡೋಣ.


ಸೋಮಪ್ಪ ರಾಯಪ್ಪ ಬೊಮ್ಮಾಯಿ ಹಾಗೂ ಗಂಗಮ್ಮ ಬೊಮ್ಮಾಯಿ ಅವಿಭಜಿತ ಧಾರವಾಡ ಜಿಲ್ಲೆಯ ಕುಂದಗೋಳ, ಸವಣೂರು, ಶಿಗ್ಗಾಂವ ಪ್ರದೇಶಗಳ ಅಪ್ಪಟ ಗ್ರಾಮೀಣ ಶ್ರೇಷ್ಠ ಮೌಲ್ಯಗಳನ್ನು ಹೊಂದಿದ್ದ ಕುಟುಂಬದ ಹಿನ್ನೆಲೆಯವರು. ತಂದೆ ಎಸ್.ಆರ್.ಬೊಮ್ಮಾಯಿ ವಕೀಲರಾಗಿ, ಕಾನೂನು ತಜ್ಞರಾಗಿ ಎಂ.ಎನ್.ರಾಯ್ ಅವರ ವೈಚಾರಿಕ, ಕ್ರಾಂತಿಕಾರಕ ಚಿಂತನೆಗಳನ್ನು ಮೈಗೂಡಿಸಿಕೊಂಡು ನಾಡಿನ,ದೇಶದ ಮುತ್ಸದ್ಧಿ ನೇತಾರರಾಗಿ ಬೆಳೆದರೆ, ತಾಯಿ ಗಂಗಮ್ಮನವರು ಸರಳತೆ, ಸಜ್ಜನಿಕೆ, ಬಡವರ ನೋವಿಗೆ ಸ್ಪಂದಿಸುವ ಮನೋಭಾವದೊಂದಿಗೆ ತೆರೆಮರೆಯಲ್ಲಿ ಸಲ್ಲಿಸುತ್ತಿದ್ದ ಸೇವೆ ಸಹಜವಾಗಿಯೇ ಅವರ ಮಕ್ಕಳ ಮೇಲೆಯೂ ಪ್ರಭಾವ ಬೀರಿತು.

ಕಮಡೊಳ್ಳಿ, ಸಂಶಿ, ಗುಡಗೇರಿ, ದುಂಡಶಿ ಮೊದಲಾದ ಗ್ರಾಮಗಳಿಂದ ಬರುತ್ತಿದ್ದ ಬಂಧು ಭಾಂಧವರ ತುಂಬು ಕುಟುಂಬದ ಮಧ್ಯೆಯೇ ಇಬ್ಬರು ಅಕ್ಕಂದಿರು ಹಾಗೂ ಓರ್ವ ತಮ್ಮನೊಂದಿಗೆ ಬೆಳೆದ ಬಸವರಾಜ ಬೊಮ್ಮಾಯಿ ಅವರು ತಮ್ಮ ತಂದೆ-ತಾಯಿಯಲ್ಲಿನ ಮೌಲ್ಯಗಳನ್ನು ಮೈಗೂಡಿಸಿಕೊಂಡರು.
ಹೆತ್ತವರ ಸೇವೆ ಮಾಡಿದವ ಎತ್ತರಕ್ಕೆ ಏರುತ್ತಾನೆ ಎಂಬ ಮಾತಿನಂತೆ ಎಸ್.ಆರ್.ಬೊಮ್ಮಾಯಿ ಹಾಗೂ ಗಂಗಮ್ಮ ದಂಪತಿಗಳ ನಾಲ್ವರೂ ಮಕ್ಕಳು. ಅದೇ ಹಾದಿಯಲ್ಲಿ ಸಾಗಿದರು. ತಂದೆಯವರು ಮಂತ್ರಿಯಾಗಿ, ಮುಖ್ಯಮಂತ್ರಿ ಯಾಗಿ, ಕೇಂದ್ರ ಸಚಿವರಾಗಿ ಬೆಂಗಳೂರು ,ದೆಹಲಿ ಸೇರಿ ಅನೇಕ ಕಡೆ ಓಡಾಡುತ್ತಿದ್ದಾಗ,ಕಿರಿಯ ಮಗ ಮಲ್ಲಿಕಾರ್ಜುನ (ಮಹೇಶ) ಬೊಮ್ಮಾಯಿ ತಂದೆಯ ಸೇವೆ,ಆರೋಗ್ಯ ನೋಡಿಕೊಂಡರೆ, ಹುಬ್ಬಳ್ಳಿಯ ಅಶೋಕ ನಗರದ ನಿವಾಸದಲ್ಲಿಯೇ ಬಹುತೇಕ ವಾಸವಾಗಿರುತ್ತಿದ್ದ ತಾಯಿ ಗಂಗಮ್ಮ ಬೊಮ್ಮಾಯಿಯವರ ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಂಡವರು ಹಿರಿಯ ಮಗ ಬಸವರಾಜ ಬೊಮ್ಮಾಯಿ.


ಶಿಗ್ಗಾಂವ-ಸವಣೂರು ಕ್ಷೇತ್ರದ ಮಾಜಿ ಶಾಸಕ ಮಲ್ಲಪ್ಪ ಹುರಳಿಕುಪ್ಪಿ ಅವರ ಮಗಳು ಹಾಗೂ ಮಂತ್ರಿ ಎಸ್.ಆರ್.ಬೊಮ್ಮಾಯಿಯವರ ಧರ್ಮಪತ್ನಿ ಯಾಗಿದ್ದ ಗಂಗಮ್ಮನವರು, ತವರು ಮನೆ ಹಾಗೂ ಗಂಡನ ಮನೆ ಎರಡೂ ಕಡೆಗಳಲ್ಲಿ ಸರಳ,ಉನ್ನತ ಮೌಲ್ಯಗಳನ್ನೇ ಬದುಕಿನುದ್ದಕ್ಕೂ ಆಚರಿಸಿಕೊಂಡು ಬಂದವರು. ಪತಿ ಎಸ್.ಆರ್.ಬೊಮ್ಮಾಯಿಯವರು ನಾಡಿನ ಕಂದಾಯ ಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ಅವರು ಶ್ರೀ ಸಾಮಾನ್ಯಳಂತೆ ಹುಬ್ಬಳ್ಳಿ ಅಶೋಕ ನಗರದ ನಿವಾಸದಿಂದ ಮಾರುಕಟ್ಟೆಗೆ ಸಿಟಿ ಬಸ್‌ನಲ್ಲಿಯೇ ತೆರಳಿ ಸಂತೆ,ವೈಯಕ್ತಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದುದನ್ನು ಕಂಡವರು ಈಗಲೂ ಇದ್ದಾರೆ.ಗಂಗಮ್ಮನವರ ಸರಳತೆಯನ್ನು ಮೆಲುಕು ಹಾಕುತ್ತಾರೆ.ಸಾಕ್ಷಾತ್ ಅನ್ನಪೂರ್ಣೆಯ ರೂಪವೇ ಆಗಿದ್ದ ಗಂಗಮ್ಮ ಮನೆಗೆ ಬಂದ ಅತಿಥಿಗಳಿಗೆ ತೃಪ್ತಿದಾಯಕವಾಗಿ ಉಣಬಡಿಸುತ್ತಿದ್ದ ಪರಿ,ಮನೆತನದ ಹಿರಿಮೆಯನ್ನು ಹೆಚ್ಚಿಸುತ್ತಲೇ ಸಾಗಿತು.ವಿರೇಂದ್ರ ಪಾಟೀಲರು ಮುಖ್ಯಮಂತ್ರಿ ಯಾಗಿದ್ದ ಹುಬ್ಬಳ್ಳಿಗೆ ಭೇಟಿ ನೀಡಿದ ವೇಳೆ ಗಂಗಮ್ಮ ಬೊಮ್ಮಾಯಿಯವರ ಹೇಳಿ ರೊಟ್ಟಿ ಮಾಡಿಸಿಕೊಂಡು ಊಟ ಮಾಡಿದ್ದರಂತೆ,ಮೊರಾರ್ಜಿ ದೇಸಾಯಿ,ಚರಣ್‌ಸಿಂಗ್,ವಿ.ಪಿ.ಸಿಂಗ್,ದೇವಿಲಾಲ್,ಆರ್.ಗುಂಡೂರಾಯರು,ರಾಮಕೃಷ್ಣ ಹೆಗಡೆ,ಹೆಚ್.ಡಿ.ದೇವೆಗೌಡ ಮೊದಲಾದ ಹಿರಿಯ ನಾಯಕರು ಹುಬ್ಬಳ್ಳಿಗೆ ಬಂದಾಗ ಬೊಮ್ಮಾಯಿಯವರ ಮನೆಯ ಆತಿಥ್ಯ ಸ್ವೀಕರಿಸದೇ ಹೋಗುತ್ತಿರಲಿಲ್ಲ.


ಹುಟ್ಟಿನಿಂದಲೇ ಸಹಾಯಗುಣ,ಜಾತ್ಯಾತೀತ ಮನೋಭಾವ ಬೆಳೆಸಿಕೊಂಡಿದ್ದ ಗಂಗಮ್ಮ ಬೊಮ್ಮಾಯಿಯವರು ಮನೆಯ ಮಕ್ಕಳು, ಬಂಧುಗಳು, ಒಡನಾಡಿಗಳು, ಆಳು-ಕಾಳುಗಳನ್ನೂ ಕೂಡ ಭಿನ್ನಬೇಧಗಳಿಲ್ಲದೇ ಕಂಡು,ಬೆಳೆಸಿದವರು.ಒಂದು ಬಾರಿ ಬ್ರಾಹ್ಮಣ ಹುಡುಗನೊಬ್ಬ ತನ್ನ ತಂದೆಯನ್ನು ಅಕಾಲಿಕವಾಗಿ ಕಳೆದುಕೊಂಡು ಹುಬ್ಬಳ್ಳಿಯ ಸಿಟಿ ಹೈಸ್ಕೂಲಿನ ಶುಲ್ಕ ಕಟ್ಟಲೂ ಪರದಾಡುತ್ತಿದ್ದ ವಿಷಯ ತಿಳಿದು ಕೂಡಲೇ ತಮ್ಮ ಮಗ ಬಸವರಾಜನ ಆತ್ಮೀಯ ಸ್ನೇಹಿತ ಮಂಜುನಾಥ ಉಡುಪಿಯವರ ಕೈಗೆ ದುಡ್ಡು ಕೊಟ್ಟು ಶುಲ್ಕ ಪಾವತಿಸಲು, ಮುಂದಿನ ಶೈಕ್ಷಣಿಕ ನೆರವು ನೀಡಲು ಸೂಚಿಸಿದರು.ಈ ನೆರವು ಪಡೆದು ಓದಿದ ಯುವಕ ಮುಂದೆ ಒಂದು ಬಾರಿ ಆಕಸ್ಮಿಕವಾಗಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಮಂಜುನಾಥ ಉಡುಪಿಯವರನ್ನು ಕಂಡ, ತಾನು ಈಗ ಅಮೇರಿಕ ದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಲಕ್ಷಾಂತರ ರೂ.ಸಂಪಾದಿಸುತ್ತಿರುವು ದನ್ನು, ಗಂಗಮ್ಮನವರ ಪ್ರೋತ್ಸಾಹವನ್ನು ಹೆಮ್ಮೆಯಿಂದ ಸ್ಮರಿಸಿದ. ಇದು ಆ ತಾಯಿಯಲ್ಲಿ ಸ್ಥಾಯಿಯಾಗಿದ್ದ ಕರುಣೆ,ಪೋಷಣೆಯ ಗುಣಕ್ಕೆ ಸಾಕ್ಷಿಯಾಗಿದೆ.
ಅಂತಹ ತಾಯಿ ಗಂಗಮ್ಮವರು 2002 ರಲ್ಲಿ ಕ್ಯಾನ್ಸರ್‌ನಿಂದ ತೀವ್ರ ಅನಾರೋಗ್ಯಕ್ಕೀಡಾದರು. ಆಗ ಮಗ ಬಸವರಾಜ ಬೊಮ್ಮಾಯಿಯವರು ವಿಧಾನಪರಿಷತ್ ಸದಸ್ಯರಾಗಿದ್ದರು, ಪತಿ ಎಸ್.ಆರ್.ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ,ಕೇಂದ್ರದ ಮಾಜಿ ಸಚಿವರಾಗಿದ್ದರು. ನರ್ಸಿಂಗ್ ಸೇವೆಗಳಿಗೆ ಇತರರನ್ನು ನೇಮಕ ಮಾಡಿ, ಮೇಲುಸ್ತುವಾರಿ ಮಾಡಿಕೊಂಡು ಇದ್ದು ಬಿಡಬಹುದಾಗಿದ್ದ ಬಸವರಾಜ ಬೊಮ್ಮಾಯಿ ಹಾಗೆ ಮಾಡದೇ,ಸ್ವತಃ ತನ್ನ ಒಡಹುಟ್ಟಿದವರೊಂದಿಗೆ ತಿಂಗಳುಗಟ್ಟಲೇ ತಾಯಿಯ ಸೇವೆಯನ್ನು ಒಂದಿನಿತೂ ವ್ಯತ್ಯಯವಾಗದಂತೆ ಸಲ್ಲಿಸಿದರು. ಅವರ ನಿಷ್ಠಾವಂತ ,ನಿಸ್ಪೃಹ ಸೇವೆ ಆತ್ಮೀಯ ವಲಯದಲ್ಲಿ ಜನಜನಿತವಾಗಿದೆಯಷ್ಟೇ ಅಲ್ಲ,ಅನೇಕರಿಗೆ ಪ್ರೇರಣೆಯೂ ಆಗಿದೆ.
ಬೆಂಗಳೂರಿನ ಅಗಡಿ ನರ್ಸಿಂಗ್ ಹೋಂ ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ತಮ್ಮ ತಾಯಿ ಗಂಗಮ್ಮ ಅವರ ಸೇವೆಗೆ ಆಗ ವಿಧಾನ ಪರಿಷತ್ ಸದಸ್ಯರಾಗಿದ್ದ ಬಸವರಾಜ ಬೊಮ್ಮಾಯಿಯವರು ತಿಂಗಳುಗಟ್ಟಲೇ ಟೊಂಕ ಕಟ್ಟಿ ನಿಂತಿದ್ದರು. ಹಾಸಿಗೆ ಹಿಡಿದಿದ್ದ ಅವ್ವನ ಎಲ್ಲಾ ಬೇಕು ಬೇಡಗಳಿಗೂ ಕೈ ಆಸರೆಯಾದರು.ಹಾಸಿಗೆಯ ಬೆಡ್ ಶೀಟನ್ನೂ ಕೂಡ ಸ್ವತಃ ತಾವೇ ಬದಲಿಸುತ್ತಿದ್ದರು, ಆಸ್ಪತ್ರೆಯ ಸಿಬ್ಬಂದಿ,ಸ್ನೇಹಿತರ ಕಡೆಯಿಂದಲೂ ಮಾಡಿಸುತ್ತಿರಲಿಲ್ಲ.ಆ ಮೂಲಕ ತಾಯಿಯ ಮನೋ ಬಲ ಹೆಚ್ಚಿಸಲು ಮಾಡಿದ ಅವರ ಪ್ರಯತ್ನ ಕಂಡವರು, ತಮ್ಮ ಬದುಕಿನಲ್ಲಿಯೂ ಅವುಗಳನ್ನು ಪಾಲಿಸಲು ಸ್ಫೂರ್ತಿ ಪಡೆದುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

2002 ರ ಸೆಪ್ಟೆಂಬರ್ ೧೦ರಂದು ಬೆಂಗಳೂರಿನ ಆಸ್ಪತ್ರೆಯಿಂದ ರವೀಂದ್ರನಾಥ ಟಾಗೋರ್ (ಆರ್.ಟಿ.) ನಗರದ ಮನೆಗೆ ತಮ್ಮನ್ನು ಕರೆದೊಯ್ಯಲು ಅನಾರೋಗ್ಯದಲ್ಲಿದ್ದ ಗಂಗಮ್ಮ ಬೊಮ್ಮಾಯಿಯವರು ಆಗ್ರಹಿಸುತ್ತಾರೆ. ಮರುದಿನ ಸೆ.11 ರಂದು ತಾಯಿಯ ಆಸೆ ಈಡೇರಿಸಬೇಕೆಂದು ಮಗ ಬಸವರಾಜ ಬೊಮ್ಮಾಯಿ ಆಯಂಬುಲೆನ್ಸ್ ಒಂದನ್ನು ಸಿದ್ಧಪಡಿಸಿ ಮನೆಗೆ ಕರೆದೊಯಗಯುತ್ತಾರೆ. ತಾಯಿಯನ್ನು ಮರಳಿ ಆಸ್ಪತ್ರೆಗೆ ತರಲು ತುರ್ತು ಚಿಕಿತ್ಸಾ ವಾಹನವನ್ನು ಅಲ್ಲಿಯೇ ಉಳಿಸಿಕೊಂಡಿರುತ್ತಾರೆ. ಮನೆ ತಲುಪಿದ ಬಳಿಕ ಪತಿ ಎಸ್.ಆರ್.ಬೊಮ್ಮಾಯಿ ಹಾಗೂ ಎಲ್ಲ ಮಕ್ಕಳು, ಬಂಧು ಬಳಗದವರಿಂದ ನೀರು ಬಾಯಿಗೆ ಹಾಕಿಸಿಕೊಂಡು ಪತಿಯ ಕೈಯಲ್ಲಿಯೇ ಪ್ರಾಣಬಿಡುತ್ತಾರೆ.
ಅಪಾರ ಪ್ರೀತಿ, ಕರುಣೆ,ಸಹಾಯಹಸ್ತದ ಗಂಗೋತ್ರಿಯೇ ಆಗಿದ್ದ ಗಂಗಮ್ಮನವರ ಅಖಂಡ ಮಾತೃಸೇವೆಗೈದ ಬಸವರಾಜ ಬೊಮ್ಮಾಯಿಯ ವರು ಮುಂದೆ ಅವರ ತಂದೆ ಎಸ್.ಆರ್.ಬೊಮ್ಮಾಯಿಯವರಿಗೂ ದೆಹಲಿಯ ಆಸ್ಪತ್ರೆಯಲ್ಲಿ ಅದೇ ಮಾದರಿಯ ಸೇವೆ ಸಲ್ಲಿಸಿದರು. ತಂದೆ ತಾಯಿಯ ಋಣ ತೀರಿಸಲು ಯಾರಿಗೂ ಸಾಧ್ಯವಿಲ್ಲ, ಕೊನೆಯ ಪಕ್ಷ ಅವರಿಗೆ ತೃಪ್ತಿಕರವಾಗುವಂತೆ ಸೇವೆ ಮಾಡಬಹುದು .ಹೆತ್ತವರಿಗೆ ಮಗನಾಗಿ ಅಂತಹ ಕೈಂಕರ್ಯ ಸಲ್ಲಿಸಿದ ಬಸವರಾಜ ಬೊಮ್ಮಾಯಿ ಇಂದು ನಾಡಿನ ಮುಖ್ಯಮಂತ್ರಿಯಾಗಿ,ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹಿರಿಯರಿಗೆ ಕಿರಿಯನಾಗಿ,ಕಿರಿಯರಿಗೆ ಹಿರಿಯನಾಗಿ ನಾಡಿನ ಸೇವೆ ಸಲ್ಲಿಸುತ್ತಿದ್ದಾರೆ.

ಜಗದೀಶ ಕುಲಕರ್ಣಿ, ಹಿರಿಯ ಪತ್ರಕರ್ತರು

administrator

Related Articles

Leave a Reply

Your email address will not be published. Required fields are marked *