15 ದಿನದಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ 2ನೇ ಸುತ್ತಿನ ಹೋರಾಟ
ಅಂದಾದುಂದಿ ದರ್ಬಾರ – ಕುಲಸಚಿವರ ಸ್ಥಾನಕ್ಕೆ ಅನರ್ಹರ ನೇಮಕ
ಹುಬ್ಬಳ್ಳಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಬಿ.ಚೆಟ್ಟಿ ಅವರು ವಿವಿಯ ಕಾಯ್ದೆ ಮತ್ತು ಶಾಸನವನ್ನು ಪಾಲಿಸದೇ ಮನಸೋ ಇಚ್ಚೆ ನಡೆಸುಕೊಳ್ಳುತ್ತಿದ್ದು, ಅವರನ್ನು ಸರ್ಕಾರ ಕೂಡಲೇ ಅಧಿಕಾರದಿಂದ ವಜಾ ಮಾಡಬೇಕೆಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಶಿಕ್ಷಕರ ಕಲ್ಯಾಣ ಸಂಘದ ಕಾರ್ಯದರ್ಶಿ ಮಹಾಂತೇಶ ನಾಯಕ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಒಂದಾಗಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಬರುತ್ತಿದೆ. ಆದರೆ ವಿವಿಗೆ ಡಾ.ಎಂ.ಬಿ.ಚೆಟ್ಟಿ ಅವರು ಕುಲಪತಿಗಳಾಗಿ ನೇಮಕವಾದ ನಂತರ ವಿಶ್ವವಿದ್ಯಾಲಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ದೇಶಮಟ್ಟದಲ್ಲಿ 2019-20ನೇ ಸಾಲಿನಲ್ಲಿ ೯ ಸ್ಥಾನದಲ್ಲಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯ 2020-21ರಲ್ಲಿ 17 ಕ್ಕೆ ಇಳಿದಿದೆ. ಅಲ್ಲದೇ ವಿವಿಯಲ್ಲಿ ಸಿಬ್ಬಂದಿಗಳ ಬಡ್ತಿ, ಶಿಕ್ಷಕರ ಬೇಡಿಕೆ ಇಡೇರಿಸಲು ಕನಿಷ್ಠ ಪ್ರಯತ್ನ ಕೂಡಾ ಆಗಿಲ್ಲ ಎಂದು ಆರೋಪಿಸಿದರು.
ಅಲ್ಲದೇ ಕುಲಪತಿ ಡಾ.ಎಂ.ಬಿ.ಚೆಟ್ಟಿ ಅವರು 2014 ರಲ್ಲಿ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ಕಳಂಕಿತ ರಾದ ಇವರನ್ನು ಸಂವಿಧಾನಿಕ ಹುದ್ದೆಯಲ್ಲಿ ಮುಂದುವರೆಸಲು ಭಾರತದ ಕಾನೂನಿನಲ್ಲಿ ಅವಕಾಶವಿಲ್ಲ. ಕೂಡಲೇ ಇವರನ್ನು ಕುಲಪತಿ ಸ್ಥಾನದಿಂದ ಕೆಳಗಿಳಿಸಬೇಕೆಂದು ಒತ್ತಾಯಿಸಿದರು.
ಕುಲಪತಿ ಡಾ.ಎಂ.ಬಿ.ಚೆಟ್ಟಿ ಅವರು ಕುಲಸಚಿವರ ಸ್ಥಾನಕ್ಕೆ ಅನರ್ಹ ವ್ಯಕ್ತಿ ಗಳನ್ನು ನೇಮಕ ಮಾಡಿದ್ದಾರೆ. ಶಿಕ್ಷಣ ನಿರ್ದೇಶಕರ ಹುದ್ದೆಯನ್ನು ಹೆಚ್ಚುವರಿ ಹುದ್ದೆಯಾಗಿ ತಮ್ಮ ಬಳಿಯೇ ಇಟ್ಟುಕೊಳ್ಳುವ ಮೂಲಕ ಕುಲಪತಿ ಚೆಟ್ಟಿ ಅವರು ಕೃವಿವಿಯ ಕಾಯ್ದೆ ಮತ್ತು ಶಾಸನವನ್ನು ಗಾಳಿಗೆ ತೂರಿ ಮನಸೋ ಯಿಚ್ಚೆ ನಡೆದುಕೊಂಡಿದ್ದಾರೆ. ಕುಲಪತಿಗಳ ಅವ್ಯವಹಾರ ಹಾಗೂ ಅಂದಾ ದರ್ಬಾರ್ ವಿರುದ್ದವಾಗಿ ಈಗಾಗಲೇ ಪ್ರತಿಭಟನೆ, ಮುಷ್ಕರಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಹಾಗಾಗಿ ಮುಂದಿನ 15 ದಿನಗಳ ಒಳಗಾಗಿ ರಾಜ್ಯಪಾಲರು ಕೃವಿವಿಯ ಕುಲಪತಿಗಳ ವಿರುದ್ಧ ಕ್ರಮ ಜರುಗಿಸ ಬೇಕು. ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ದತೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಶಿಕ್ಷಕರ ಕಲ್ಯಾಣ ಸಂಘದ ಅಧ್ಯಕ್ಷ ಸುನಿಲ ಕರಿಕಟ್ಟಿ, ಉಪಾಧ್ಯಕ್ಷ ರವಿ ಪಾಟೀಲ್, ಪದಾಧಿಕಾರಿಗಳಾದ ಪ್ರೋ.ಮಂಜುಳಾ ಇದ್ದರು.