ಹುಬ್ಬಳ್ಳಿ-ಧಾರವಾಡ ಸುದ್ದಿ
ಹಿರಿಯ ಪತ್ರಕರ್ತ ಮುತಾಲಿಕ ದೇಸಾಯಿ ಇನ್ನಿಲ್ಲ

ಹಿರಿಯ ಪತ್ರಕರ್ತ ಮುತಾಲಿಕ ದೇಸಾಯಿ ಇನ್ನಿಲ್ಲ

ಹುಬ್ಬಳ್ಳಿ: ಪ್ರತಿಷ್ಟಿತ ಟಿಎಸ್‌ಆರ್ ಪ್ರಶಸ್ತಿಗೆ ಆಯ್ಕೆಯಾಗಿದ್ದ ಹಿರಿಯ ಪತ್ರಕರ್ತ ಧ್ರುವರಾಜ ವೆಂಕಟರಾವ ಮುತಾಲಿಕ ದೇಸಾಯಿ (94) ಇವರು ಶನಿವಾರ ರಾತ್ರಿ ನಿಧನರಾದರು.
ಕಳೆದ 8-10ವರ್ಷಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ 8-10 ದಿನಗಳಿಂದ ತೀವ್ರ ಅನಾರೋಗ್ಯಕ್ಕೊಳಗಾಗಿದ್ದರು.ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಇಂದು ಬೆಳಿಗ್ಗೆ 10ರ ಸುಮಾರಿಗೆ ಅವರ ಅಂತ್ಯ ಸಂಸ್ಕಾರ ನೆರವೇರಿತು.
ಸುಮಾರು 6 ದಶಕಗಳ ಕಾಲ ಸಕ್ರೀಯ ಪತ್ರಿಕೋದ್ಯಮದಲ್ಲಿದ್ದ ಅವರಿಗೆ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಆರ್.ಎಚ್.ಕುಲಕರ್ಣಿ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ಅರಸಿ ಬಂದಿದ್ದಲ್ಲದೇ ಗಣನೀಯ ಸೇವೆ ಸಲ್ಲಿಸಿದವರಿಗಾಗಿ ನೀಡುವ ಟಿಎಸ್ ಆರ್ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಮೂರು ವರ್ಷಗಳ ಹಿಂದೆ ಘೋಷಿಸಿತ್ತಾದರೂ ಇದುವರೆಗೆ ಪ್ರದಾನ ಮಾಡಿರಲಿಲ್ಲ. ಧಾರವಾಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಅವರನ್ನು ಸಂಘದ ವತಿಯಿಂದ 2018ರಲ್ಲಿ ಜೀವಮಾನ ಸಾಧನೆ ನೀಡಿ ಗೌರವಿಸಲಾಗಿತ್ತು. 1954ರಲ್ಲಿ ಅಂದಿನ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದ ಮೋಹರೆ ಹನುಮಂತರಾಯರ ಅಣತಿ ಮೇರೆಗೆ ಪತ್ರಿಕೆ ವರದಿಗಾರರಾಗಿ ಸಂಯುಕ್ತ ಕರ್ನಾಟಕ ಸೇರಿ ವಿವಿಧ ಹುದ್ದೆಗಳನ್ನು ನಿಭಾಯಿಸಿ ಸ್ಥಾನಿಕ ಸಂಪಾದಕರಾಗಿ ನಿವೃತ್ತರಾದರು. ತದನಂತರ ಉದಯವಾಣಿ, ವಿಶಾಲ ಕರ್ನಾಟಕ, ಗೋವಾದ ದಿ. ನವಹಿಂದ ಟೈಮ್ಸ್, ಕೊಲ್ಹಾಪುರದ ಪುಢಾರಿ, ಬೆಳಗಾವಿಯ ತರುಣ ಭಾರತ ಹೀಗೆ ಕನ್ನಡ, ಮರಾಠಿ, ಆಂಗ್ಲ ಪತ್ರಿಕೆಗಳನ್ನು ವರದಿಗಾರರಾಗಿಯೂ ಕೆಲಸ ಮಾಡಿದ್ದಾರೆ. ವಕೀಲಿ ವೃತ್ತಿಯನ್ನು ಬಿಟ್ಟು ಲೋಕಸೇವೆ ಮತ್ತು ಕನ್ನಡದ ಕೆಲಸಕ್ಕೆಂದೇ ಪತ್ರಿಕಾ ರಂಗ ಸೇರಿದ ಇವರು ಸೇವಾದಳದ ಕಾರ್ಯಕರ್ತ, ಹವ್ಯಾಸಿ ನಟರಾಗಿ, ಭಜನೆ ದಾಸರ ಕೀರ್ತನೆಗಳಲ್ಲೂ ತಮ್ಮ ಛಾಪು ಮೂಡಿಸಿದ್ದರು.

ಸಂತಾಪ: ಡಿ.ವಿ.ಮುತಾಲಿಕ ದೇಸಾಯಿಯವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮುತಾಲಿಕ ಅವರದ್ದು ಸಂಘ ಜೀವತ್ವ, ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಯುವ ಪತ್ರಕರ್ತರಿಗೆ ಮಾದರಿ ಆಗಿದ್ದರೆಂದು ಸಂತಾಪದಲ್ಲಿ ತಿಳಿಸಿದ್ದಾರೆ.
ದೇಸಾಯಿ ಅವರ ನಿಧನಕ್ಕೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪತ್ರಿಕಾರಂಗದ ‘ಧ್ರುವ’ತಾರೆ ಮುತಾಲಿಕದೇಸಾಯಿ

ಹುಬ್ಬಳ್ಳಿ : ಕೈತುಂಬಾ ಗಳಿಸಬಹುದಾದಂತ ವಕೀಲಿ ವೃತ್ತಿಯನ್ನು ಬಿಟ್ಟು ಲೋಕಸೇವೆ ಮತ್ತು ಕನ್ನಡದ ಕೆಲಸಕ್ಕೆಂದೇ ಪತ್ರಿಕಾ ರಂಗ ಸೇರಿ ಜೀವಮಾನದುದ್ದಕ್ಕೂ ಬರಹವನ್ನೇ ನೆಚ್ಚಿಕೊಂಡು ಬಂದ ಹಿರಿಯ ಪತ್ರಕರ್ತ ಧ್ರುವರಾಜ ವೆಂಕಟರಾವ್ ಮುತಾಲಿಕ ದೇಸಾಯಿ ಹುಬ್ಬಳ್ಳಿಯನ್ನೇ ಕರ್ಮಭೂಮಿಯಾಗಿಸಿಕೊಂಡವರು.
ಮೂಲತಃ ಬೆಳಗಾವಿ ಜಿಲ್ಲೆಯ ಕೌಜಲಗಿಯವರಾದ ಇವರು ಮಾಸ್ತರ, ನಾಟಕಕಾರ, ವಕೀಲ, ಸಾಮಾಜಿಕ ಕಾರ್ಯಕರ್ತ, ಸೇವಾದಳದ ಕಾರ್ಯಕರ್ತ ಅಲ್ಲದೇ ಪತ್ರಕರ್ತರಾಗಿ ಬಹುಮುಖಿಯಾಗಿ ಸಮಾಜದೆದುರು ತಮ್ಮನ್ನು ತೆರೆದುಕೊಂಡವರು ಮುತಾಲಿಕ ದೇಸಾಯಿ ಅವರು. ವರದಿಗಾರನಾಗಿಯೇ ಇದ್ದು ಈ ನಡುವೆ ಬೆಳಗಾವಿಯ ಶಾಲೆಯೊಂದರಲ್ಲಿ ಪಾಠ ಮಾಡಿದರು. ನೆಚ್ಚಿನ ವಿದ್ಯಾರ್ಥಿ ಗಳು ಇವರಿಗೆ ನೀಡಿದ ಬಿರುದು ‘ಗಾಳಿ ಮಾಸ್ತರ’ ಕಾರಣವೆಂದರೆ ಭೂಗೋಲದ ಆವರ್ತ, ಪತ್ಯಾವರ್ತ ಗಾಳಿಗಳ ಬಗ್ಗೆ ಮಾರ್ಮಿಕವಾಗಿ ಪಾಠ ಮಾಡಿದ್ದರಿಂದ ವಿದ್ಯಾರ್ಥಿಗಳಿಂದ ಇಂಥದೊಂದು ಅನ್ವರ್ಥ ಅವರಿಗೆ ದೊರಕಿತ್ತು.

ತಂದೆ ವೆಂಕಟರಾವ್ ಅವರು ವಕೀಲರು. ತಮ್ಮಂತೆ ಮಗನೂ ವಕೀಲನಾಗಬೇಕೆಂದು ಬಯಸಿದವರು. ಗಡಿ ಬೆಳಗಾವಿಯಲ್ಲಿ ವಕೀಲಿ ವೃತ್ತಿಯಲ್ಲಿ ಐದು ವರ್ಷ ಕೆಲಸ ಮಾಡಿದವರು. ನಾಡು ಏಕೀಕರಣದ ಕಾವು ತಾರಕಕ್ಕೇರಿದ್ದ ಸಂದರ್ಭ. ಆ ಹೊತ್ತಿನಲ್ಲಿಯೇ 1954 ರಲ್ಲಿ ಕನ್ನಡ ನಾಡಿನ ಕಳಕಳಿಯನ್ನಿಟ್ಟುಕೊಂಡಿದ್ದ ಇವರು ಅಂದಿನ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದ ಮೋಹರೆ ಹನುಮಂತರಾಯರ ಅಣತಿ ಮೇರೆಗೆ ಪತ್ರಿಕೆ ವರದಿಗಾರರಾಗಿ ಸಂ.ಕ ಕುಟುಂಬವನ್ನು ಸೇರಿದರು. ಇವರ ವರದಿಗಾರಿಕೆಯ ವೈಖರಿಯನ್ನು ಕಂಡಿದ್ದ ಮೊಹರೆ ಅವರು ಮುಂದಿನ ಎರಡೇ ವರ್ಷದಲ್ಲಿ ಹುಬ್ಬಳ್ಳಿಗೆ ಕರೆಸಿಕೊಂಡು ಸಂಪಾದಕಿ ಮಂಡಳಿಯಲ್ಲಿ ಉಪಸಂಪಾದಕ ಹುದ್ದೆ ನೀಡಿದರು. ಧ್ರುವರಾಜ ಅವರು ತಮ್ಮ ವಕೀಲಿ ವೃತ್ತಿಯ ಅನುಭವ ಮತ್ತು ಆಳ ಜೊತೆಗೆ ಸಮಾಜಮುಖಿಯಾದ ಚಿಂತನೆಗಳನ್ನು ಬರೆಹ ರೂಪದಲ್ಲಿ ಪರಣಾಮಕಾರಿಯಾದ ಅಗ್ರಲೇಖ, ಅಲ್ಲದೇ ವಿವಿಧ ವಿಷಯಗಳ ಕುರಿತಂತೆ ಬೆಳಕು ಚಲ್ಲುವ ವರದಿ ಲೇಖನಗಳನ್ನು ಬರೆಯುವ ಮೂಲಕ ಸಂಯುಕ್ತ ಕರ್ನಾಟಕದಲ್ಲೇ ಸ್ಥಾನಿಕ ಸಂಪಾದಕರಾಗಿ ಸೇವೆ ಸಲ್ಲಿಸಿದರು.

ಇಷ್ಟೇ ಅಲ್ಲದೇ ನಿಂತು ಹೋಗಿದ್ದ ಕರ್ಮವೀರ ಪತ್ರಿಕೆಯನ್ನು ಮತ್ತೆ ಪುನರಾರಂಭಿಸಲು ಕಾರಣಿಕರ್ತರು. ಅಷ್ಟೇ ಅಲ್ಲದೇ ಕರ್ಮವೀರ ಪತ್ರಿಕೆ ಕರ್ಣಧಾರತ್ವವನ್ನು ವಹಿಸಿಕೊಂಡು ಮುಂದೆವರಿಸಿದರು. ತಾವು ಬರೆದ ಲೇಖನಗಳನ್ನು ಒಟ್ಟುಗೂಡಿಸಿ ವಆತಾ ಸಂಸ್ಥೆಗಳು ಎಂಬ ಹೊತ್ತಿಗೆಯನ್ನು 1968 ರಲ್ಲಿ ಪ್ರಕಟಿಸಿದರು.

ಸಂಯುಕ್ತ ಕರ್ನಾಟಕ ದಿಂದ ನಿವೃತ್ತಿಗೊಂಡ ನಂತರದಲ್ಲಿ ಉದಯವಾಣಿ, ಎಚ್.ಕೆ.ಪಾಟೀಲರ ಸಾರಧ್ಯದಲ್ಲಿದ್ದ ವಿಶಾಲ ಕರ್ನಾಟಕ, ಗೋವಾದ ದಿ. ನವಹಿಂದ ಟೈಮ್ಸ್ ಕೊಲ್ಹಾಪುರದ ಪುಢಾರಿ ಬೆಳಗಾವಿಯ ತರುಣ ಭಾರತ ಹೀಗೆ ಕನ್ನಡ, ಮರಾಠಿ, ಆಂಗ್ಲ ಪತ್ರಿಕೆಗಳನ್ನು ವರದಿಗಾರರಾಗಿಯೂ ಕೆಲಸ ಮಾಡಿದ್ದಾರೆ.
ಧಾರವಾಡ ಆಕಾಶವಾಣಿಯಲ್ಲಿ ಮುತಾಲಿಕದೇಸಾಯಿ ಅವರು ‘ಮನೆ ಮನೆಯಲ್ಲಿ’ ಮಾಲಿಕೆಯನ್ನು ಬರೆದರು. ಅದನ್ನು ಆಕಾಶವಾಣಿ ಬಿತ್ತರಗೊಳಿಸುತ್ತ ಬಂದಿತು. ಕಲಬುರಗಿ ಆಕಾಶವಾಣಿಯಲ್ಲಿ1978-79ರಲ್ಲಿ ಬರೆದ ರೂಪಕ, ಲಘು ಹಾಸ್ಯ ಪ್ರಬಂಧಗಳೂ ಕೂಡ ಪ್ರಸಾರವಾಗಿವೆ. ಇಂದಿಗೂ ಇವರ ಹಾಸ್ಯ ಪ್ರವೃತ್ತಿ ಮೆಚ್ಚುವಂತದ್ದು. ಇಳಿವಯದಲ್ಲಿ ಕಣ್ಣು ಕಾಣದು, ಕಿವಿ ಕೇಳದು ಆದರೂ ಹಾಸ್ಯ ಪ್ರವೃತ್ತಿ ಮಾತ್ರ ಇನ್ನು ಹಚ್ಚಹಸಿರು.


‘ದಿಲ್ಲಿ ದೊರೆಗೆ ದೂರು ನೀಡಿ ದಕ್ಕಿಸಿಕೊಂಡ..’ ಎಂಬ ವರದಿ ಗಮನ ಸೆಳೆಯಿತು. ಬೆಂಗಳೂರು ಪ್ರೆಸ್ ಕ್ಲಬ್ನಿಂದ ನೀಡುವ ಉತ್ತಮ ಗ್ರಾಮಾಂತರ ವರದಿ ಎಂದು ಪ್ರಶಸ್ತಿಗೆ ಭಾಜನವಾಯಿತು.
2000 ಇಸ್ವಿಯಲ್ಲಿ ಹು-ಧಾ ಮಹಾನಗರಪಾಲಿಕೆ ಕೊಡುವ ಧೀಮಂತ ಪ್ರಶಸ್ತಿ, ಬೆಳಗಾವಿಯ ಕಸಾಪ ನೀಡುವ ಸಿರಿಗನ್ನಡ ಪ್ರಶಸ್ತಿ(2003), ಕೊಡಗಿನ ಲೇಖಕರ ಸಂಘ, ಧಾರವಾಡದ ಲಯನ್ಸ್ ಹಾಗೂ ರೋಟರಿ ಕ್ಲಬ್ನಿಂದಲೂ ಗೌರವ ಇವರಿಗೆ ಸಂದಿವೆ. ಇವರ ಪತ್ರಿಕಾ ಸೇವೆ ಗುರುತಿಸಿ ಪತ್ರಕರ್ತರಾಗಿದ್ದ ಆರ್. ಎಚ್. ಕುಲಕರ್ಣಿ ಅವರ ಸ್ಮಾರಕ ಪ್ರಶಸ್ತಿ(2007) ಹೀಗೆ ಅನೇಕ ಮಾನಸನ್ಮಾನಗಳು ಲಭಿಸಿವೆ.
ಬಹುಮುಖಿ ಪ್ರತಿಭೆ : ಧ್ರುವರಾಜ ಮುತಾಲಿಕದೇಸಾಯಿ ಅವರು 1943 ರಿಂದ ರಾಷ್ಟ್ರ ಸೇವಾದಳದ ಕಾರ್ಯಕರ್ತರಾಗಿ 15 ವರ್ಷ ಸೇವೆ ಸಲ್ಲಿಸಿದರು. ಜೂಜು, ಹರಿಜನಿವಾರ ಮೊದಲಾದ ನಾಟಕಗಳಲ್ಲಿ ನಟಿಸಿದ್ದಾರೆ.ಬೆಳಗಾವಿ, ಧಾರವಾಡಗಳಲ್ಲಿಯೂ ಹವ್ಯಾಸಿ ನಾಟಕಗಳಲ್ಲಿ ಪಾತ್ರವಾಗಿದ್ದಾರೆ. ಇದಲ್ಲದೇ 22 ವರ್ಷ ಪುರಂದರ-ಕನಕದಾಸ ಉತ್ಸವವನ್ನು ನಡೆಸಿಕೊಂಡು ಬಂದವರಿವರು. ಭಜನೆ ಮತ್ತೊಂದು ಆಕರ್ಷಣೆ, ಅಲ್ಲದೇ ಭಜನೆ, ದಾಸರ ಕೀರ್ತನೆ ಇವರನ್ನು ಸೆಳೆದ ಕ್ಷೇತ್ರಗಳು.
2018ರಲ್ಲಿ ಧಾರವಾಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ. ಧಾರವಾಡ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಸಕ್ರೀಯರಾಗಿದ್ದ ಅವರು ವಿವಿಧ ಹುದ್ಧೆಗಳಲ್ಲಿ ಅಲ್ಲದೇ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದಾರಲ್ಲದೇ ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದರು.ಹಿರಿಯರೊಂದಿಗೆ ಹಿರಿಯರಾಗಿ ಕಿರಿಯರೊಂದಿಗೆ ಕಿರಿಯರಂತೆ ಇರುತ್ತಿದ್ದ ಅವರು ಹಲವು ರಾಜಕಾರಣಿಗಳ, ಮುಖಂಡರ ಬದುಕಿನ ಬಗೆಗೆ ರಸವತ್ತಾಗಿ ಹೇಳುತ್ತಿದ್ದರು.
ಅವರಿಗೆ ರಾಜ್ಯ ಸರ್ಕಾರ ಮೂರು ವರ್ಷದ ಹಿಂದೆ ಟಿಎಸ್‌ಆರ್ ಪ್ರಶಸ್ತಿಗೆ ಆಯ್ಕೆ ಮಾಡಿ ಘೋಷಣೆ ಮಾಡಿದ್ದರೂ ಕೋವಿಡ್ ಸಹಿತ ಇತರೇ ಕಾರಣಗಳಿಂದ ಕೊನೆಗೂ ಅವರಿಗೆ ಅದನ್ನು ಸ್ವೀಕರಿಸುವ ಭಾಗ್ಯ ದೊರೆಯಲೇ ಇಲ್ಲ. ಬರುವ ಮಾರ್ಚ 28ಕ್ಕೆ 95ಕ್ಕೆ ಕಾಲಿಡಲಿದ್ದ ಅವರು ಕಳೆದ ಕೆಲದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಶನಿವಾರ ರಾತ್ರಿ ಉಸಿರು ನಿಲ್ಲಿಸುವುದರೊಂದಿಗೆ ಪತ್ರಿಕಾರಂಗದ ಹಿರಿಯ ಕೊಂಡಿಯೊಂದು ಕಳಚಿದಂತಾಯಿತು.

 

 

administrator

Related Articles

Leave a Reply

Your email address will not be published. Required fields are marked *