ಧಾರವಾಡಕ್ಕೆ ಮೇಯರ್ ಪಟ್ಟ – ಪಕ್ಷದ ವೇದಿಕೆಯಲ್ಲಿ ಚರ್ಚೆ
ಧಾರವಾಡ : ತಾವು ಯಾವುದೇ ಕಾರಣಕ್ಕೂ ಭಾರತೀಯ ಜನತಾ ಪಕ್ಷ ಬಿಡುವುದಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಏಳ್ಗೆ ಮತ್ತು ಕ್ಷೇತ್ರದ ಅಭಿವೃದ್ಧಿ ಸಹಿಸದ ಕೆಲವರು ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಗಾಳಿ ಸುದ್ದಿಗಳಲ್ಲಿ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಷ್ಟ್ರೀಯವದ ಮತ್ತು ಹಿಂದುತ್ವದ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿರುವ ನನಗೆ ಬಿಜೆಪಿವರಿಷ್ಠರು ಟಿಕೆಟ್ ನೀಡಿ ಎರಡು ಬಾರಿ ಶಾಸಕನಾಗಲು ಅವಕಾಶ ಕಲ್ಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುತ್ತಿದೆ. ಇದೇ ವೇಳೆ ಕ್ಷೇತ್ರದಲ್ಲಿ ನಾನೂ ಕೂಡ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಕೊಂಡಿದ್ದೇನೆ.
ವಾಸ್ತವ ಹೀಗಿದ್ದರೂ ನಾನು ಬಿಜೆಪಿ ತೊರೆಯುತ್ತ್ತೆನೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ. ಆದರೆ, ತಾವು ಪಕ್ಷ ಬಿಡುವ ವಿಚಾರ ಕೂಡ ಮಾಡಿಲ್ಲ. ಆದ್ದರಿಂದ ಪಕ್ಷ ಬಿಡುವ ಸುದ್ದಿಯನ್ನು ಕ್ಷೇತ್ರದ ಜನರು ಮತ್ತು ಪಕ್ಷದ ಕಾರ್ಯಕರ್ತರು ನಂಬಬಾರದು ಎಂದು ಮನವಿ ಮಾಡಿದರು.
ಹು-ಧಾ ಮಹಾನಗರ ಪಾಲಿಕೆಯ ಮೇಯರ ಸ್ಥಾನ ಧಾರವಾಡಕ್ಕೆ ಕಳೆದ ಎರಡು ಅವಧಿಯಲ್ಲಿ ಮೂರು ಜನರಿಗೆ ಮಾತ್ರ ಸಿಕ್ಕಿದೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸುವುದಾಗಿ ಪ್ರಶ್ನೆಯೊಂದಕ್ಕೆ ಶಾಸಕರು ತಿಳಿಸಿದರು.
ಮಹಾನಗರ ಜಿಲ್ಲಾ ಅಧ್ಯಕ್ಷ ಸಂಜಯ ಕಪಟಕರ, ಪಾಲಿಕೆ ಸದಸ್ಯರಾದ ಜ್ಯೋತಿ ಪಾಟೀಲ, ಮಂಜುನಾಥ ಬಟ್ಟೆಣ್ಣವರ, ಮುಖಂಡರಾದ ಮೋಹನ ರಾಮದುರ್ಗ, ರಾಜೇಶ ಕೋಟೆಣ್ಣವರ, ದೇವರಾಜ ಶಹಪುರ ಇನ್ನಿತರರು ಈ ಸಂದರ್ಭದಲ್ಲಿದ್ದರು.