ಹುಬ್ಬಳ್ಳಿ : ಕೋವಿಡ್ ನಂತರ ’ಪಾಸಿಟಿವ್’ ಕಾರಣಗಳಿಂದಾಗಿಯೇ ಚರ್ಚೆಯಲ್ಲಿದ್ದ ಉತ್ತರ ಕರ್ನಾಟಕದ ಬಡ ರೋಗಿಗಳ ಪಾಲಿನ ಕಾಮಧೇನು ಕಿಮ್ಸ್ ಆಸ್ಪತ್ರೆಯಲ್ಲಿನ ಸಿಎಒ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಕಿತ್ತಾಟ ಆರಂಭವಾಗಿದೆ.
2019ರಿಂದ ಕಿಮ್ಸ್ ಮುಖ್ಯ ಆಡಳಿತಾಧಿಕಾರಿಯಾಗಿರುವ ರಾಜಶ್ರೀ ಜೈನಾಪುರ ಅವರನ್ನು ಕಳೆದ ದಿ. 5ರಂದು ವರ್ಗಾವಣೆ ಮಾಡಿ ಆ ಸ್ಥಾನಕ್ಕೆ ಬಾಗಲಕೋಟೆ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಅಧಿಕಾರಿ ಇಸ್ಮಾಯಿಲ್‌ಸಾಬ ಶಿರಹಟ್ಟಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ 3 ದಿನಗಳಿಂದ ಕಿಮ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಹಟ್ಟಿ ಗೆ ಅಧಿಕಾರ ಹಸ್ತಾಂತರ ಮಾಡದೆ ರಜೆ ಹೋಗಿದ್ದು ಹಲವು ಗುಸುಗುಸುಗಳಿಗೆ ಕಾರಣವಾಗಿದೆ.
ಕೇಂದ್ರ ಸಚಿವರು ಬೇರೊಬ್ಬರಿಗೆ ನಿಯುಕ್ತಿಗೊಳಿಸಲು ಮುಂದಾಗಿದ್ದಾರೆಂಬ ಮಾತು ಕೇಳಿ ಬರುತ್ತಿದ್ದು ಇಂದು ಸಹ ಸಿಎಒ ಕಚೇರಿಯಲ್ಲಿ ಶಿರಹಟ್ಟಿ ಕುಳಿತು ತೆರಳಿದ್ದು ಮಾಧ್ಯಮದವರಿಗೆ ಏನನ್ನೂ ಹೇಳಲು ನಿರಾಕರಿಸಿದ್ದಾರೆ.ಮೊನ್ನೆಯಿಂದಲೂ ದಿನಾಲು ಶಿರಹಟ್ಟಿ ಕಿಮ್ಸ್ ಕಚೇರಿಗೆ ಬಂದು ಹೋಗುತ್ತಿದ್ದಾರೆ.
ಕಿಮ್ಸ್ ಆಡಳಿತ ಭವನದಲ್ಲಿ ಇನ್ನು ರಾಜಶ್ರಿ ಜೈನಾಪುರ ಹೆಸರೇ ನಾಮಫಲಕದಲ್ಲಿದ್ದು ನಿರ್ದೇಶಕರು ಮತ್ತು ಸಂಬಂಧಿಸಿದವರೇ ಉತ್ತರಿಸಬೇಕಾಗಿದೆ.
ಜೈನಾಪುರ ಅವರಿಗೆ ಯಾವುದೇ ಸ್ಥಳ ತೋರಿಸಿಲ್ಲವಾಗಿದ್ದು,ಅವರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವಲ್ಲದೇ ಅವರ ಸರ್ವಾಧಿಕಾರಿ ವರ್ತನೆಗೆ ಇಡೀ ಕಿಮ್ಸ್‌ನ ವೈದ್ಯರಂತೂ ’ಆಪರೇಷನ್’ಗೆ ಕಾಯುತ್ತಲೇ ಇದ್ದರು.ಈ ಹಿಂದೆ 2018ರಲ್ಲಿ ಬೆಳಗಾವಿಯಲ್ಲಿ ಕೆಲಸ ನಿರ್ವಹಿಸಿದ್ದ ಜೈನಾಪುರ ಮೇಲೆ ಎಸಿಬಿ ದಾಳಿ ಸಹ ನಡೆದಿತ್ತು. ಇವರು ಹುಬ್ಬಳ್ಳಿಯ ಬಿಜೆಪಿ ಮುಖಂಡರೊಬ್ಬರ ಪತ್ನಿಯೆಂಬುದು ವಿಶೇಷವಾಗಿದೆ
.ನಾನು ಅಧಿಕಾರ ಹಸ್ತಾಂತರ ಮಾಡಲು ನಿರಾಕರಿಸಿಲ್ಲ.ವರ್ಗಾವಣೆ ಆದೇಶ ಬಂದ ದಿನವೇ ನಿರ್ದೇಶಕರಿಗೆ ಹಸ್ತಾಂತರ ಮಾಡುವುದಾಗಿ ತಿಳಿಸಿದ್ದೇನೆ. ಯಾರಿಗೂ ತಪ್ಪು ಕಲ್ಪನೆ ಬೇಡ.ಇಂದು ಯಾರಿಗೆ ಹೇಳುತ್ತಾರೊ ಅವರಿಗೆ ಹಸ್ತಾಂತರ ಮಾಡುವೆ.
ರಾಜೇಶ್ವರಿ ಜೈನಾಪುರ, ಸಿಎಒ,ಕಿಮ್ಸ್