ಹುಬ್ಬಳ್ಳಿ-ಧಾರವಾಡ ಸುದ್ದಿ
ಅಪರೂಪದ ಗಾಯಕ ರಾಮಕುಮಾರ ಶಿಂದೆ

ಅಪರೂಪದ ಗಾಯಕ ರಾಮಕುಮಾರ ಶಿಂದೆ

(ಭಾಷಾ ಸಂಗೀತ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ರಾಮಕುಮಾರ ಶಿಂದೆ ಕನ್ನಡ -ಹಿಂದಿ ಭಾಷಾ ಬಾಂದವ್ಯವನ್ನು ಭದ್ರಗೊಳಿಸುವ ಜತೆಗೆ ಕನ್ನಡ ಸಂಸ್ಕೃತಿಯ ಕಂಪನ್ನು, ದಾಸ ಸಾಹಿತ್ಯದ ಸೊಬಗನ್ನು ದೇಶದ ಉದ್ದಗಲಗಳಲ್ಲಿ ಪಸರಿಸುತ್ತಿದ್ದಾರೆ.ಇಂದು ಅವರ ಜನ್ಮದಿನ. ತನ್ನಿಮಿತ್ತ ಅವರ ಬದುಕಿನ ಮೇಲೆ ಬೆಳಕು ಚೆಲ್ಲುವ ಈ ಕಿರು ಲೇಖನ.)

ಭಾಷಾ ಬಾಂಧವ್ಯಕ್ಕೆ ಮುನ್ನುಡಿ ಬರೆಯುತ್ತಿರುವ ’ಮುಖೇಶ

ಹುಬ್ಬಳ್ಳಿ : ’ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ? ದಯವಿಲ್ಲದ ಧರ್ಮ ಯಾವುದಯ್ಯಾ..’ ಮುಂತಾದ
ಬದುಕಿಗೆ ದಾರಿದೀಪವಾಗುವ ಬಸವೇಶ್ವರರ ಇಂಥ ವಚನಗಳು ಕನ್ನಡಿಗರಿಗೆ ಕಂಠಪಾಠ. ಆದರೆ ॒ಹಿಂದಿ ಭಾಷಿಕರಿಗೆ ಅದು ಮುಟ್ಟುವಂತೆ ಮಾಡಿದ ಅಪರೂಪದ ಸಂಗೀತೋಪಾಸಕ ಹುಬ್ಬಳ್ಳಿಯ ರಾಮಕುಮಾರ ಶಿಂದೆ .
’ಚೋರ ನ ಕರ್. ಹಿಂಸಾ ನಕರ್, ಝೂಠ್ ಕಭೀ ನ ಬೋಲಾ ಕರ್ ’ ಬಿನಾ ದಯಾ ಧರ್ಮಸೆ ಕ್ಯಾ ಹೋಯ್, ಹೊನಾ ಚಾಹಿಯೇ ಸಕಲ ಪ್ರಾಣಿಯೋಂ ಪರ್ ಸದಯ್’॒
ಹೀಗೆ ಹಿಂದಿ ರೂಪಾಂತರಗಳನ್ನು ಸುಶ್ರವ್ಯವಾಗಿ ಹಾಡಿ, ಹಿಂದಿ ಭಾಷಿಕರಿಗೆ ಬಸವೇಶ್ವರ ವಚನಾಮೃತವನ್ನು ಉಣಬಡಿಸಿದವರು ಇವರು.ಸಂಗೀತ ಕಾರ್ಯಕ್ರಮಗಳ ಮೂಲಕ ಧ್ವನಿಸುರುಳಿಯ ಮೂಲಕ, ಬಸವ ತತ್ವ ಸಿದ್ಧಾಂತ, ಸದಾಶಯಗಳನ್ನು ದೇಶದೆಲ್ಲೆಡೆ ಪಸರಿಸುವ ಪಣ ತೊಟ್ಟ ಇವರು, ಬಸವಣ್ಣನವರ ವಚನಗಳನ್ನು ಕನ್ನಡ ಮತ್ತು ಹಿಂದಿ – ಎರಡೂ ಭಾಷೆಗಳಲ್ಲಿ ಹಾಡುವ ಏಕೈಕ ಕನ್ನಡಿಗ ಎಂಬ ಹಿರಿಮೆ ಇವರದ್ದಾಗಿದೆ.
ಡೊಂಕು ಬಾಲದ ನಾಯಕರೇ.? ನೀವೇನೂಟವ ಮಾಡಿದಿರಿ?॒ ಎಂಬ ಸಾಲುಗಳು ಬಾಲ್ಯದಲ್ಲೇ ನಮಗೆಲ್ಲ ಗೊತ್ತು. ಟೀಢೆ ದುಮಕೆ ನಾಯಕೋ ತುಮ್ ನೆ ಕ್ಯಾ ಕ್ಯಾ ಖಾನಪಾನ ಕಿಯಾ?॒ ಈ ಹಿಂದಿ ರೂಪಾಂತರವನ್ನು ಇವರದ್ದೇ ಕಂಠದಲ್ಲಿ ಬಸವೇಶ್ವರ ವಚನಾಮೃತ ಎಂಬ ಹಿಂದಿ ಕ್ಯಾಸೆಟ್‌ನಲ್ಲಿ ಕೇಳುವಾಗ ಅಕ್ಷರಶಃ ಮೈ ತುಂಬ ರೋಮಾಂಚನವಾಗುವುದು.


ಆರೂಢಾಮೃತ (ಭಕ್ತಿಗೀತೆ), ವಾವ್ಹಾರೆ ಹಳ್ಳಿ ಹುಡುಗಿ (ಜಾನಪದ ಗೀತೆ) ದುರ್ಗವ್ವಣ ಮಗ (ನಾಟ್ಯಗೀತೆ) ರಾಗ ಸಂಗಮ (ಸುಗಮ ಸಂಗೀತ) ’ ನಿಗಮ ನಿಮ್ಮದು (ಜಾನಪದ ಗೀತೆ) ಬಸವೇಶ್ವರ ವಚಾನಮೃತ (ಭಕ್ತಿಗೀತೆ) .. ಮುಂತಾದ ಧ್ವನಿ ಸುರುಳಿಗಳ ಮೂಲಕ, ಕಂಠ ಮಾಧುರ್ಯ ದಿಂದ ಜನಮನ ಗೆದ್ದಿರುವ ರಾಮಕುಮಾರ ಶಿಂದೆ ಅದ್ಭುತ ಶಿಸ್ತಿನ ಅಪರೂಪದ ಗಾಯಕ
ಹುಬ್ಬಳ್ಳಿಯ ಹೆಗ್ಗೇರಿ ಬಡಾವಣೆಯ ’ಶಾಹು ಕೃಪಾ’ ದಲ್ಲಿ ಶಾರದೆಯ ಉಪಾಸನೇಯಲ್ಲಿ ತೊಡಗಿರುವ ರಾಮಕುಮಾರ, ತನ್ನ ಒಂಬತ್ತನೆಯ ವಯಸ್ಸಿನಲ್ಲೇ ಅಭಂಗಗಳ ಜತೆಗೆ – ಸೈಗಲ್, ಮುಖೇಶರ ಹಾಡುಗಳನ್ನು ತುಂಬಿದ ಸಭೆಗಳಲ್ಲಿ ಹಾಡಿ, ರಂಜಿಸಿದ ಫೋರ. ಹುಕ್ಕೇರಿ ಬಾಳಪ್ಪ, ಕಾಳಿಂಗರಾವ್, ಭೀಮಸೇನ ಜೋಶಿ, ಜಗತ್‌ಸಿಂಗ್,.. ಮುಂತಾದ್ವರ ಪ್ರಭಾವಕ್ಕೊಳಗಾಗಿ; ಭಕ್ತಿ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆಗಳನ್ನು ಕರಗತ ಮಾಡಿಕೊಂಡ ಚತುರ
ಹಾಡುವಾಗ ಹಾರ್ಮೋನಿಯಮ್ ಬಾರಿಸುತ್ತಾರೆ. ಕ್ಯಾಶಿಯೋ ನುಡಿಸುತ್ತಾರೆ. ಕಾಂಪೋಸ್ ಮಾಡಿ ಸಾಥಿಗಳಿಗೆ ಕೊಡುತ್ತಾರೆ. ತಪ್ಪಡಿ (ದಿಮ್ಮಡಿ) ಬಾರಿಸುತ್ತಾರೆ. ತಾಳ, ಗೆಜ್ಜೆ, ಚಿಪ್ಪಳಿ, ತಬಲಾ, ಮೃದಂಗ, ವಯೋಲಿನ್.. ವಿವಿಧ ಸಂಗೀತ ಪರಿಕರಗಳನು ಬೇಕಾದಾಗೆಲ್ಲ ಬಳಸುತ್ತಾರೆ. ಸಂಗೀತ ಕಾರ್ಯಕ್ರಮ ನೀಡುವಾಗ ತಂಡದಲ್ಲಿ ಐದು-ಆರು ಮಂದಿ ಜತೆಗಿರುತ್ತಾರೆ.


ಮುಂಬಯಿ ಕಲಾವಿದರು ಕರ್ನಾಟಕದಲ್ಲಿ ಕಾರ್ಯಕ್ರಮ ನೀಡುವಾಗೆಲ್ಲ ಇವರಿಗೆ ಹಾಡಲು ಆಹ್ವಾನ ನೀಡುತ್ತಿದ್ದರು. ಬಬಲಾ, ಮಹೇಶ್ ಕುಮಾರ್, ಕಿಶೋರ್‌ಕುಮಾರ, ಸುಲಕ್ಷಣಾ ಪಂಡಿತ್ ಮುಂತಾದವರೊಂದಿಗೆ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಆರ್ಕೆಸ್ಟ್ರಾದಲ್ಲಿ ಮುಖೇಶ್ ಧಾಟಿಯಲ್ಲೇ ಹಾಡಿ ಜನಪ್ರಿಯತೆ ಗಳಿಸಿದ್ದಾರೆ. ’ಮತ್ತೊಬ್ಬ ಮುಖೇಶ್ ’ ಎಂಬುದು ಇವರಿಗೆ ಅಭಿಮಾನಿಗಳು ಕೊಟ್ಟ ಅಭಿದಾನ.
’ಕರ್ನಾಟಕ ವಿದ್ಯುತ್ ಪ್ರಸರಣ ನಿಮಗದ ನೌಕರಿಯಿಂದ ನಿವೃತ್ತಿ ಪಡೆದು ದಾಸ ಸಾಹಿತ್ಯವನ್ನೂ ಅಭ್ಯಸಿಸಿರುವರಲ್ಲದೇ ’ಬಸವೇಶ್ವರ ವಚನಾಮೃತ’ ಎಂಬ ಹಿಂದಿ ಧ್ವನಿಸುರುಳಿ ವ್ಯಾಪಕ ಜನಪ್ರೀಯತೆ ಪಡೆದಿದೆ.
ಹುಬ್ಬಳ್ಳಿ-ಧಾರವಾಡದ ರಂಗಾಸಕ್ತರ ಜತೆಗೊಡಿ ನಾಟಕಗಳಿಗೆ ರಾಗ ಸಂಯೋಜನೆ ಮಾಡಿದ್ದು, ದೆಹಲಿಯ ಕರ್ನಾಟಕ ಸಂಘ ಗೌರವ ನೀಡಿದೆ. ಅಲ್ಲದೇ ಹುಬ್ಬಳ್ಳಿಯ ಶ್ರೀ ಮೂರುಸಾವಿರಮಠ ಶ್ರೀ ಬಸವ ಪ್ರಶಸ್ತಿ ನೀಡಿದೆ. ಹು.ಧಾ. ಮಹಾನಗರ ಪಾಲಿಕೆ ನೀಡಿ ’ಧೀಮಂತ ನಾಗರಿಕ ಎಂದು ಗೌರವಿಸಿದೆ.
ಇಡಿಯಾಗಿ ಸಂಗೀತ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ರಾಮಕುಮಾರ ಶಿಂದೆ, ಕನ್ನಡ-ಹಿಂದಿ ಭಾಷಾ ಬಾಂಧವ್ಯವನ್ನು ಬದ್ರಗೊಳಿಸುವ ಜತೆಗೆ ಕನ್ನಡ ಸಂಸ್ಕೃತಿಯ ಕಂಪನ್ನು ದಾಸ ಸಾಹಿತ್ಯದ ಸೊಬಗನ್ನು ದೇಶದ ಉದ್ದಗಲಗಳಲ್ಲಿ ಪಸರಿಸುತ್ತಿದ್ದು ಪ್ರಚಾರದಿಂದ ಸದಾ ದೂರವೇ ಉಳಿದಿರುವ ಕನಕದಾಸ, ಶಿಶುನಾಳ ಶರೀಫರ, ಭಕ್ತಿಗೀತೆಗಳ ಸ್ವಾದವನ್ನು ಉತ್ತರದವರಿಗೆ ಉಣಪಡಿಸಿರುವಇಂತಹ ಎಲೆ ಮರೆಯ ಕಾಯಿಗಳಿಗೆ ಇವರಿಗೆ ರಾಜ್ಯೋತ್ಸವ,ಪದ್ಮಶ್ರೀಯಂತಹ ಪ್ರಶಸ್ತಿಗಳು ಅರಸಿ ಬರಲಿ ಎಂಬುದು ಹಾರೈಕೆ.

administrator

Related Articles

Leave a Reply

Your email address will not be published. Required fields are marked *