ಹುಬ್ಬಳ್ಳಿ-ಧಾರವಾಡ ಸುದ್ದಿ
ಹೆತ್ತವರ ಮಡಿಲು ಸೇರಿದ ಶಿವಾನಿ

ಹೆತ್ತವರ ಮಡಿಲು ಸೇರಿದ ಶಿವಾನಿ

ಶಾಸಕ ಮಾನೆ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ

ಹಾನಗಲ್: ಯುದ್ಧಪೀಡಿತ ಉಕ್ರೇನ್ ದೇಶದಲ್ಲಿ ಸಿಲುಕಿದ್ದ ಹಾನಗಲ್ಲಿನ ಕುವರಿ ಶಿವಾನಿ ಮಡಿವಾಳರ ಗುರುವಾರ ರಾತ್ರಿ ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಿದ್ದು, ಕಾಂಗ್ರೆಸ್ ಕಾರ್ಯಕರ್ತರು ಶಿವಾನಿ ಹಣೆಗೆ ತಿಲಕವಿಟ್ಟು, ಆರತಿ ಬೆಳಗಿ, ಸಿಹಿ ತಿನ್ನಿಸಿ ಸಂಭ್ರಮದಿಂದ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವಾನಿ, ಬದುಕಿ ಬರುವ ಆಸೆಯನ್ನೂ ಕೈ ಬಿಟ್ಟಿದ್ದೆ. ಸಹಪಾಠಿಯಾಗಿದ್ದ ರಾಣೇಬೆನ್ನೂರು ತಾಲೂಕಿನ ಚಳಗೇರಿಯ ನವೀನ್ ಗ್ಯಾನಗೌಡರ ಶೆಲ್ ದಾಳಿಗೆ ಮೃತಪಟ್ಟಿರುವ ಸುದ್ದಿ ತಿಳಿದು ನಾವೆಲ್ಲರೂ ಆಘಾತಗೊಂಡಿದ್ದೆವು. ಹೇಗೋ ಹರಸಾಹಸ ಮಾಡಿ ಪೋಲೆಂಡ್ ತಲುಪಿದಾಗ ಜೀವ ಉಳಿದಂತೆ ಭಾಸವಾಯಿತು. 16-17 ಗಂಟೆಗಳ ಕಾಲ ರೈಲಿನಲ್ಲಿ ಒಂದೇ ಕಾಲಿನ ಮೇಲೆ ನಿಂತು ಪ್ರಯಾಣಿಸಿ ಪೋಲೆಂಡ್ ತಲುಪಿದೆವು. ಪೋಲೆಂಡ್‌ನಿಂದ ದಿಲ್ಲಿಗೆ ಬಂದಿಳಿದ ನಾನು ಮತ್ತು ಸ್ನೇಹಿತೆ ಶಿಗ್ಗಾಂವಿ ತಾಲೂಕಿನ ರಂಜಿತಾ ಕಲಕಟ್ಟಿ ಎಂಬಾಕೆಗೆ ಬೆಂಗಳೂರು, ಪುನಃ ಅಲ್ಲಿಂದ ಹುಬ್ಬಳ್ಳಿವರೆಗೆ ವಿಮಾನದಲ್ಲಿ ಪ್ರಯಾಣಿಸಲು ಶಾಸಕ ಶ್ರೀನಿವಾಸ್ ಮಾನೆ ಅವರು ಟಿಕೆಟ್ ಬುಕ್ ಮಾಡಿಸಿ ದ್ದರು. ನಿತ್ಯವೂ ಕರೆ ಮಾಡಿ ಧೈರ್ಯ ಹೇಳುತ್ತಿದ್ದ ಅವರು ಹುಬ್ಬಳ್ಳಿಯಿಂದ ಹಾನಗಲ್ಲಿನ ನಮ್ಮ ಮನೆಯವರೆಗೂ ಅವರ ವಾಹನ ಕಳಿಸಿ ಮನೆಗೆ ತಲುಪಸಿದ್ದಾರೆ. ಅವರು ಮಾಡಿರುವ ಸಹಾಯಕ್ಕೆ ಚಿರಋಣಿಯಾಗಿದ್ದಾನೆ ಎಂದು ಆನಂದಭಾಷ್ಪ ಸುರಿಸಿದ್ದು, ಅಲ್ಲಿದ್ದವರ ಕಣ್ಣಾಲೆಗಳನ್ನೂ ತೇವಗೊಳಿಸಿತು.
ಹಾನಗಲ್ ಪುರಸಭೆ ಮಾಜಿ ಅಧ್ಯಕ್ಷ ಖುರ್ಷಿದ್‌ಅಹ್ಮದ್ ಹುಲ್ಲತ್ತಿ, ಸದಸ್ಯ ರಾದ ಮಹೇಶ ಪವಾಡಿ, ಶೋಭಾ ಹೊಂಬಳಿ, ಸುನಿತಾ ಭದ್ರಾವತಿ, ರವಿ ದೇಶಪಾಂಡೆ, ದಾನಪ್ಪ ಗಂಟೇರ, ರಾಮೂ ಯಳ್ಳೂರ, ರಾಜೇಶ್ ಗುಡಿ, ಗನಿ ಪಾಳಾ, ಮಹದೇವಣ್ಣ ಬಂಡಿವಡ್ಡರ, ಶ್ರೀನಿವಾಸ್ ಭದ್ರಾವತಿ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿದ್ದರು.

administrator

Related Articles

Leave a Reply

Your email address will not be published. Required fields are marked *