ಈ ಸಲ ಮಹಿಳಾ ದಿನಾಚರಣೆ ಗೆ ಎಲ್ಲ ಹೆಣ್ಣುಮಕ್ಕಳ ಕುರಿತು ಬರೆಯಬೇಕೆಂದೆನಿಸಿದಾಗ ನನಗೆ ನೆನಪಾಗಿದ್ದು ತಟ್ಟನೆ ಅಡುಗೆ ಮನೆಯೇ. ದಿನ ಬೆಳಗಾದರೆ ನಾವು ಹೆಣ್ಣುಮಕ್ಕಳು ಬಹುತೇಕ ನಮ್ಮ ಕೆಲಸ ಪ್ರಾರಂಭಿಸುವುದು,ಅಡುಗೆ ಮನೆಯಿಂದಲೆ.
ಅದಕ್ಕೆ ಸರ್ವಜ್ಞ
ಅನ್ನದೇವರಿಗಿಂತ/ಇನ್ನು ದೇವರು ಇಲ್ಲ/
ಅನ್ನ ಕಿಂ ಹಿರಿದಾವುದಿಲ್ಲ ಲೋಕಕ್ಕೆ /
ಅನ್ನವೇ ದೈವ.
“ಜೋಳವನು ತಿಂಬುವನು ತೋಳದಂತಾಗುವನು
ಬೇಳೆ ಬೆಲ್ಲಗಳ ನುಂಬುವನು ಬಹುಕಾಲ
ಬಾಳನೆಂದರಿಗು ಸರ್ವಜ್ಞ”
ಇಲ್ಲಿ ಜೋಳ ಎಂದರೆ ಊಟ ಎಂದೇ ಅರ್ಥ.ಆಹಾರ ಎನ್ನುವದು ಒಂದು ವಿಜ್ಞಾನ. ನಾವು ಹೇಗೆ ವಿಜ್ಞಾನದಲ್ಲಿ ಸಮ ಪ್ರಮಾಣದ chemical ತಯಾರಿಸಿದಾಗ ಸರಿಯಾದ ಫಲಿತಾಂಶ ಬರುತ್ತದೆಯೋ, ಅದೇ ರೀತಿ ಸಮ ಪ್ರಮಾಣದಲ್ಲಿ ಪದಾರ್ಥಗಳನ್ನು ಸೇರಿಸಿ ಪ್ರೀತಿಯಿಂದ ಅಡುಗೆ ತಯಾರಿಸಿದಾಗ, ಅದು ಹಿತ-ಮಿತವಾದ,ರುಚಿಕಟ್ಟಾದ ಎಲ್ಲರೂ ಇಷ್ಟ ಪಡುವ ಅಡುಗೆಯಾಗಿ ಇಷ್ಟವಾಗುತ್ತದೆ.
ಅಡುಗೆಯೊಂದು ಕಲೆ.ಅದಕ್ಕೆ ಅನ್ನುವದು,ಕೈ ರುಚಿ ಎಂದು.ತಾಯಿಯ ಕೈತುತ್ತಿನಲ್ಲಿರುವ ರುಚಿಯ ಮುಂದೆ ಯಾವುದು ಸಮವಲ್ಲ, ಎಂಬುದಂತು ಸತ್ಯ. ಅದನ್ನೇ ಸರ್ವಜ್ಞ ಕವಿ ಈರೀತಿ ಹೇಳುತ್ತಾರೆ.
“ಅಂದವಿಲ್ಲದಾ ಊಟ/ಹಂದರಿಲ್ಲದ ಮದುವೆ
ಕಂದನಿಲ್ಲದಳ ಮನೆವಾರ್ತೆ ಇವು ಮೂರು
ಚಂದವಿಲ್ಲವಯ್ಯಾ/
ಊಟದಲ್ಲಿ ಹಲವಾರು ರೀತಿ. ಪ್ರತಿದಿನ ಸೇವಿಸುವ ಆಹಾರ,ಅದರಲ್ಲೂ ಪ್ರಾದೇಶಿಕತೆ.ನಮ್ಮ ಕರ್ನಾಟಕ್ಕೆ ಬಂದರೆ ಉತ್ತರ ಕರ್ನಾಟಕದಲ್ಲಿ ಪ್ರತಿದಿನ ಜೋಳದ ರೊಟ್ಟಿ,ಬೇಳೆ ಅದಕ್ಕೆ ಮೇಲೆ ಖಾರದ ಹಿಂಡಿ,ತುಪ್ಪ ಇಲ್ಲವೇ ಎಣ್ಣೆ .ಜತೆಗೊಂದಿಷ್ಟು ಉಳ್ಳಾಗಡ್ಡಿ,ಸವತೆಕಾಯಿ ಇದರಷ್ಟೇ ಸಾಕು. ದಕ್ಷಿಣದಲ್ಲಿ ರಾಗಿ ಮುದ್ದೆ ಸೊಪ್ಪಿನ ಸಾರು.ಅದೇ ಹಬ್ಬ ಹರಿದಿನಗಳಲ್ಲಿ ವಿಶೇಷವಾದ ಭೋಜನವಿರುತ್ತದೆ. ಅದು ಪಾಯಸವಿರಬಹುದು,ಪಾಯಸದಲ್ಲಂತೂ ಹಲವು ತರಹ.ಹೋಳಿಗೆಯಿರಬಹುದು,ಆ ಹೋಳಿಗೆಗಳಲ್ಲಿ ಶೆಂಗಾ, ಎಳ್ಳು, ಕಡಲೆ ಬೇಳೆ, ಕೊಬ್ಬರಿ, ಸಜ್ಜಕದ ಹೀಗೆ ಹಲವಾರು ತರಹ. ಕಡಬು ಇರಬಹುದು, ಚಿರೋಟಿ ಇರಬಹುದು,ವಿಶೇಷ ಕೋಸಂಬರಿಗಳು,ಹೋಳಿಗೆ ಸಾರು, ವಿಶೇಷ ಬಜಿಗಳು, ನಾನು ಹೀಗೆ ಅಡುಗೆ ಪಟ್ಟಿ ಹೇಳುತ್ತಾ ಹೋದರೆ, ಪೇಜ ತುಂಬೇ ಹೋಗಿ ಬಿಡಬಹುದು.ಆದರೆ ಇವೆಲ್ಲವನ್ನೂ ಅತ್ಯಂತ ಪ್ರೀತಿಯಿಂದ ಒಬ್ಬ ಸ್ತ್ರೀ ಹೆಂಡತಿಯಾಗಿ, ತಾಯಿಯಾಗಿ, ಸಹೋದರಿಯಾಗಿ, ಮಗಳಾಗಿ, ಸೊಸೆಯಾಗಿ , ಅತ್ತಿಗೆಯಾಗಿ, ನಾದಿನಿಯಾಗಿ, ಹೀಗೆ ಹಲವಾರು ಪಾತ್ರಗಳಲ್ಲಿ ತುಂಬಾ ಪ್ರೀತಿಯಿಂದ ಅಡುಗೆ ಮಾಡುತ್ತಾರೆ.ಒಮ್ಮೊಮ್ಮೆ ಕೆಲಸದ ಒತ್ತಡ ದಲ್ಲಿ ತಾನು ಸರಿಯಾಗಿ ಊಟ ಮಾಡದಿದ್ದರೂ ಎಲ್ಲರೂ ಪ್ರೀತಿಯಿಂದ ಊಟ ಮಾಡಿ ಸಂತೃಪ್ತರಾದಾಗ,ತಾನೆ ಊಟ ಮಾಡಿದಷ್ಟು ಸಂತೋಷ ಪಡುವದು, ಅವಳೇ ಅಲ್ಲವೆ. ಅಷ್ಟೊಂದು ಅಡುಗೆ ಮಾಡಿ ಸುಸ್ತಾದರೂ ಮತ್ತೇ ಅದೇ ಪ್ರೀತಿಯಿಂದ ಊಟ ಬಡಿಸುತ್ತಾಳೆ.ಇದನ್ನು ಮಾಡಲು ಅವಳು ಯಾವುದೇ ಪದವಿ ಪಡೆಯುವ ಅವಶ್ಯಕತೆಯಿಲ್ಲ.
ಕೇವಲ ಇದಕ್ಕೆ ಸ್ತ್ರೀ ಸಾಮಾನ್ಯ ಮಮತೆ, ಪ್ರೀತಿ,ಸಹನೆ,ಕಾಳಜಿಯಷ್ಟೇ ಇದ್ದರೆ ಸಾಕು.ಅವಳು ಅದರಲ್ಲಿ success ಆದ ಹಾಗೆಯೇ.ಇಷ್ಟೆಲ್ಲಾ ಮಾಡುವ ಮಹಿಳೆ ನಿಜವಾಗಲೂ ತನ್ನ ಬದುಕಿನ ಯಶಸ್ವಿ ವ್ಯಕ್ತಿಯೇ ಸರಿ. ಹೀಗಾಗಿ ಮಹಿಳಾ ದಿನಾಚರಣೆಯಂದು ಅವಳಿಗೊಂದು ಸಲಾಮು.ಬಹಳಷ್ಟು ಪುರುಷರ ಪ್ರಶ್ನೆಯೊಂದೇ ಮಹಿಳೆಗೊಂದು ದಿನವಿದ್ದರೆ ಪುರುಷರಿಗೇಕಿಲ್ಲ? ಅದು ಪುರುಷರನ್ನು ಧಿಕ್ಕರಿಸಲೆಂದೇ? ಎಂದು. ಅದು ಹಾಗಲ್ಲ ಮೇಲೆ ಹೇಳಿದಂತೆ ಮನೆಯ ಸದದ್ಯರಿಗೆಲ್ಲಾ ಮಾಡುವ ಅವಳು ಏಂದಾದರೂ ಪುರುಷನ್ನು ಧಿಕ್ಕರಿಸಲು ಸಾಧ್ಯವೇ? ಮತ್ತೇ ಇಷ್ಟೆಲ್ಲಾ ಮಾಡುವ ಅವಳಿಗೆ ತನ್ನದೇ ಅಸ್ತಿತ್ವ ನೆನಪಿಸಲು,ತನ್ನ ಅಸ್ಮಿತೆ ಗುರುತಿಸುವ ಸಲುವಾಗಿ,ಇದೊಂದು ದಿನವಷ್ಟೇ.ಹಾಗೆ ನೋಡಿದರೆ ಪ್ರತಿದಿನವೂ ಅವಳ ದಿನವೇ.Hats up for all women once again ನಮ್ಮ ನಮ್ಮ ತಾಯಿಯನ್ನು ಒಳಗೊಂಡಂತೆ.