ಹುಬ್ಬಳ್ಳಿ-ಧಾರವಾಡ ಸುದ್ದಿ
ಮೇಯರ್,ಉಪಮೇಯರ್ : 3-4 ತಿಂಗಳು ವಿಳಂಬ?

ಮೇಯರ್,ಉಪಮೇಯರ್ : 3-4 ತಿಂಗಳು ವಿಳಂಬ?

ಎಪ್ರಿಲ್‌ನಲ್ಲಿ ಪರಿಷತ್ ಚುನಾವಣೆಗೆ ಅಧಿಸೂಚನೆ
ಮುಂದುವರಿದ ಸದಸ್ಯರ ಗೆಜೆಟ್ ಪ್ರಕಟಣೆ ಗೊಂದಲ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮೇಯರ್ – ಉಪಮೇಯರ್ ಆಯ್ಕೆ ಪ್ರಕ್ರಿಯೆ ಇನ್ನೂ ಮೂರ್‍ನಾಲ್ಕು ತಿಂಗಳು ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾತುಗಳು ಬಿಜೆಪಿ ಆಂತರಿಕ ವಲಯಗಳಿಂದಲೇ ಕೇಳಿ ಬರಲಾರಂಭಿಸಿದೆ.
ಮಹಾನಗರ ಪಾಲಿಕೆ ಫಲಿತಾಂಶ ಪ್ರಕಟವಾಗಿ 6 ತಿಂಗಳು ಕಳೆದಿದ್ದರೂ ಇನ್ನೂ ಮೀಸಲಾತಿ ಗೊಂದಲ ಅಲ್ಲದೇ ರಾಜ್ಯಪತ್ರದ ಮರುಪ್ರಕಟಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಎಪ್ರಿಲ್ 15ರೊಳಗೆ ನಡೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
ತನ್ಮಧ್ಯೆ ಕಾಂಗ್ರೆಸ್ ಪಕ್ಷ ಈ ವಿಳಂಭವನ್ನು ಬಂಡವಾಳ ಮಾಡಿಕೊಳ್ಳಲು ಮುಂದಾಗಿದ್ದು, ದಿ.15ರೊಳಗೆ ಪ್ರಕ್ರಿಯೆ ಆರಂಭಗೊಳ್ಳದಿದ್ದರೆ ಧಾರವಾಡದಿಂದ ಹುಬ್ಬಳ್ಳಿಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲು ಮುಂದಾಗಿದೆ.
ತನ್ಮಧ್ಯೆ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಎಪ್ರಿಲ್ ಮೊದಲ ಮತ್ತು ಎರಡನೇ ವಾರದಲ್ಲಿ ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳುವ ಸಾಧ್ಯತೆ ಇರುವುದರಿಂದ ಜೂನ್ ಅಂತ್ಯಕ್ಕೆ ಅಥವಾ ಜುಲೈನಲ್ಲಿ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು ಪಾಲಿಕೆ ಅಧಿಕಾರ ಗದ್ದುಗೆ ಹಿಡಿಯಲು ಬಿಜೆಪಿ ಸನ್ನದ್ದವಾಗಿದ್ದರೂ ಮೀಸಲಾತಿ ಗೊಂದಲ ಅಲ್ಲದೇ ಪಾಲಿಕೆ ಸದಸ್ಯರ ಬದಲಾವಣೆಯ ಗೆಜೆಟ್ ಪ್ರಕಟಣೆ ವಿಚಾರದಲ್ಲಿ ಕಾಲಹರಣವಾಗುತ್ತಿರುವುದು ಸ್ವತಃ ಬಿಜೆಪಿಯ ಬಹುತೇಕ ಸದಸ್ಯರಿಗೆ ಇರಿಸು ಮುರಿಸು ಉಂಟಾಗುವಂತೆ ಮಾಡಿದೆ.
ಈ ಬಾರಿ ವಾರ್ಡಗಳ ಸಂಖ್ಯೆ ಹೆಚ್ಚಳವಾದ್ದರಿಂದ 82 ಸದಸ್ಯರು ಆಯ್ಕೆಯಾಗಿದ್ದು ಅವರಲ್ಲಿ67 ಜನ ಇದೇ ಮೊದಲ ಬಾರಿಗೆ ಬಲಗಾಲಿಟ್ಟವರಾಗಿದ್ದು ಗೆಲುವು ಸಾಧಿಸಿದಾಗ ಹುಮ್ಮಸ್ಸಿನಿಂದ ಇದ್ದ ಬಹುತೇಕರು 6 ತಿಂಗಳಾದರೂ ಅಧಿಕಾರ ಚಲಾಯಿಸುವ ಭಾಗ್ಯ ಇಲ್ಲದೇ ಕೈ ಕೈ ಹಿಸುಕಿಕೊಳ್ಳಲಾರಂಭಿಸಿದ್ದಾರೆ.ಅಲ್ಲದೇ ವಾರ್ಡುಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗಿದ್ದು ಸಾರ್ವಜನಿಕರು ಹಿಡಿಶಾಪ ಹಾಕಲಾರಂಬಿಸಿದ್ದಾರೆ.
ಬಿಜೆಪಿಯ 11 ಸದಸ್ಯರು ಪುನರಾಯ್ಕೆಯಾಗಿದ್ದು ಅವರಿಗೆ ಆಡಳಿತದ ಒಳ ಹೊರ ಗೊತ್ತಿರುವುದರಿಂದ ಅಲ್ಪಸ್ವಲ್ಪ ಕೆಲಸ ನಡೆಯುತ್ತಿದೆ.
ಸ್ವತಃ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತವರಲ್ಲೇ ಪಾಲಿಕೆ ಪ್ರಥಮ ಪ್ರಜೆ ಆಯ್ಕೆಗೆ ವಿಳಂಭವಾಗುತ್ತಿದ್ದು ಬಳ್ಳಾರಿ,ಕಲಬುರಗಿ ಮುಂತಾದೆಡೆಯೂ ಪ್ರಕ್ರಿಯೆ ಮುಂದಕ್ಕೆ ಹೋಗಿದೆ.
2019 ರಿಂದ ಪಾಲಿಕೆಯಲ್ಲಿ ಚುನಾಯಿತ ಆಡಳಿತ ಮಂಡಳಿ ಇಲ್ಲವಾಗಿದ್ದು ಅಧಿಕಾರಿಗಳ ಕಣ್ಗಾವಲಿನಲ್ಲೇ ಕೆಲಸ ಕಾರ್ಯಗಳು ನಡೆಯುತ್ತಿವೆ.
ಮೇಯರ್, ಉಪಮೇಯರ್ 21 ನೇ ಅವಧಿಗೆ ಚುನಾವಣೆ ನಡೆಸುವಂತೆ ಅಧಿಸೂಚನೆಯನ್ನು ಜನವರಿಯಲ್ಲಿ ಹೊರಡಿಸಿದಾಗ ಎಲ್ಲ ಗೊಂದಲಕ್ಕೆ ತೆರೆ ಬಿದ್ದಿತ್ತಾದರೂ ಈಗ ಮತ್ತೆ ಅದೇ ಮುಂದುವರಿಯುವುದೋ ಬದಲಾಗುವುದೊ ಎಂಬ ಗೊಂದಲ ಸಹ ಮೂಡುವಂತಾಗಿದೆ.
ಮೊದಲಿದ್ದ ಲೆಕ್ಕಾಚಾರದಂತೆ ಮೇಯರ್ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಹಾಗೂ ಉಪಮೇಯರ್ ಸ್ಥಾನ ಪರಿಶಿಷ್ಠ ಮಹಿಳೆಗೆ ಮೀಸಲಾಗಿತ್ತು. ಮೇಯರ್ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವರ ಪರಮಾಪ್ತ ಈರೇಶ ಅಂಚಟಗೇರಿ, ತಿಪ್ಪಣ್ಣ ಮಜ್ಜಗಿ, ರಾಮಣ್ಣ ಬಡಿಗೇರ, ಸತೀಶ ಹಾನಗಲ್, ಉಮೇಶ ಕೌಜಗೇರಿ ಮುಂತಾದವರು ಹೆಸರು ಕೇಳಿ ಬಂದಿದ್ದವಲ್ಲದೇ ಉಪ ಮೇಯರ್ ಪಟ್ಟ ಪಕ್ಷಕ್ಕೆ ಮರು ಸೇರ್ಪಡೆಯಾದ ಯುವ ಮುಖಂಡ ಶಶಿ ಬಿಜವಾಡರ ಪತ್ನಿಯೊಬ್ಬಳೆ ಏಕೈಕ ಎಸ್ ಸಿ ಮಹಿಳೆಯಾದ್ದರಿಂದ ಅವರಿಗೇ ನಿಕ್ಕಿಯಾಗಿತ್ತು.
ಜನವರಿಯಲ್ಲಿ ಪ್ರಕಟವಾದ ಮೀಸಲಾತಿಯನ್ವಯ ಹಿರಿತನದ ಆಧಾರದ ಮೇಲೆ ಈಗಾಗಲೇ ಮೇಯರ್ ಆಗಿ ಅನುಭವವಿರುವ ವೀರಣ್ಣ ಸವಡಿ, (ನಾಲ್ಕನೇ ಬಾರಿಗೆ ಆಯ್ಕೆ) ಅಲ್ಲದೇ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಪ್ರಥಮ ಪ್ರಜೆಯ ಗಾದಿಯ ಆಳ ಅಗಲ ಬಲ್ಲ ಶಿವು ಹಿರೇಮಠ, ಜೆಡಿಎಸ್‌ನಲ್ಲಿದ್ದು ವಿಪಕ್ಷ ನಾಯಕನ ಸ್ಥಾನ ನಿರ್ವಹಿಸಿರುವ ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಗುಂಡೂರ, ವಿಜಯಾನಂದ ಶೆಟ್ಟಿ, ಉಮೇಶ ಕೌಜಗೇರಿ ಇವರ ಹೆಸರುಗಳು ಮುಂಚೂಣಿಯಲ್ಲಿ ಬಂದಿದ್ದವು.
ಸಾಮಾನ್ಯ ಮೀಸಲಾತಿಯಲ್ಲಿ ಉಳಿದವರಿಗೂ ಮುಕ್ತ ಅವಕಾಶವಿದ್ದು ಈರೇಶ ಅಂಚಟಗೇರಿ, ನಾಲ್ಕನೆ ಬಾರಿ ಗೆಲುವು ಸಾಧಿಸಿರುವ ರಾಮಣ್ಣ ಬಡಿಗೇರ, ತಿಪ್ಪಣ್ಣ ಮಜ್ಜಗಿ ಮುಂತಾದವರು ಸಹ ಪರಿಗಣನೆಗೆ ಬಂದಿದ್ದವು.

administrator

Related Articles

Leave a Reply

Your email address will not be published. Required fields are marked *