ಧಾರವಾಡ: ಸರಕಾರಿ ನೌಕರಿ ಕೊಡಿಸುವುದಾಗಿ ಹಣ ಪಡೆದು ಹಣವೂ ಮರಳಿಸದೆ ವಂಚಿಸಲಾಗಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಕೇಂದ್ರ ಸರ್ಕಾರ ಎನ್.ಇ.ಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಕಾಯ್ದೆ ಅಡಿ ಜಾರಿಗೆ ತಂದಿರುವ ’ಒಂದು ದೇಶ ಒಂದು ಪಠ್ಯ’ ತರಬೇತಿಗೆ ಸಾವಿರಾರು ವಿದ್ಯಾರ್ಥಿಗಳಿಗೆ ಸಜ್ಜುಗೊಳಿಸುವ ಜವಾಬ್ದಾರಿ ರಾಘವೇಂದ್ರ ಕಟ್ಟಿ ಅವರ ಎಸ್.ಜಿ.ಎಸ್.ಎಸ್ ಮಾನವ ಸಂಪನ್ಮೂಲ ಸೇವಾ ಸಂಸ್ಥೆ (ಎಸ್.ಜಿ.ಎಸ್.ಎಸ್ ಮಾನವ ಸಂಪನ್ಮೂಲ ಕನ್ಸಲ್ಟೆನ್ಸಿ )ಗಿದೆ ಎಂದು ಕೇವಲ ಮೂವರು ವಿದ್ಯಾರ್ಥಿಗಳಿಂದಲೇ 22.65 ಲ.ರೂ. ಪಡೆದು ನೌಕರಿ ಕೊಡಿಸದೆ ಹಣವೂ ಮರಳಿಸದೆ ವಂಚನೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ ಎಂದು ಆರೋಪಿಸಿದರು.
ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಕರ್ನಾಟಕ ರಾಜ್ಯ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಪೂರೈಕೆ ಪ್ರಾಧಿಕಾರ ನಮಗೆ ಕೊಟ್ಟಿದೆ ಎಂದು ಅದರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಆ ದಾಖಲೆ ನೋಡಿ ಅನೇಕರು ಮೋಸ ಹೋಗಿದ್ದಾರೆ. ಆದರೆ, ಅಚ್ಚರಿ ಸಂಗತಿಯೆಂದರೆ ಜಿಲ್ಲೆಯ ಹಲವು ಹಿರಿಯ ಅಧಿಕಾರಿಗಳಿಗೆ ವಿಚಾರಿಸಿದಾಗ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಮಾನವ ಸಂಪನ್ಮೂಲ ಹಾಗೂ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವದಲ್ಲಿಯೇ ಇಲ್ಲ ಎಂಬುದು ಗೊತ್ತಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರು ಕೂಡ ರ್ದುಬಳಕೆ ಮಾಡಿಕೊಂಡಿರುವ ರಾಘವೇಂದ್ರ ಕಟ್ಟಿ ಅವರು ನನ್ನೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ. ವೀಡಿಯೋ ಕಾಲ್‌ನಲ್ಲಿ ಮಾತನಾಡುತ್ತೇವೆ. ಎಲ್ಲ ಚಲನವಲನಗಳನ್ನು ಆನ್‌ಲೈನ್‌ನಲ್ಲಿ ಗಮನಿಸುತ್ತಾರೆ. ಸುಮಾರ ೭೫ ಸಾವಿರ ಅಭ್ಯರ್ಥಿಗಳಿಗೆ ಈವರೆಗೆ ನೇಮಕ ಮಾಡಲಾಗಿದೆ ಎಂದು ಹೇಳಿ ವಂಚಿಸಿದ್ದಾರೆ ಎಂದರು.
ರಾಘವೇಂದ್ರ ಕಟ್ಟಿ ಅವರ ಬಳಿ ಕರೆದುಕೊಂಡು ಹೋದ ಮಧ್ಯವರ್ತಿಗಳಾದ ಶರಣಪ್ಪ ತಿಕೋಟಿಕರ, ಸತೀಶ ಹೊಸಮನಿ ಹಾಗೂ ಪ್ರೇಮಾ ಪ್ರಭಾಕರ ಪುದುರ ಅವರು ವಿದ್ಯಾರ್ಥಿಗಳನ್ನು ಪುಸಲಾಯಿಸಿ ದಾರಿ ತಪ್ಪಿಸಿದ್ದಾರೆ.
ಈಗಾಗಲೇ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕಳೆದ ಫೆಬ್ರುವರಿ ತಿಂಗಳಿನಲ್ಲಿಯೇ ದೂರು ದಾಖಲಾಗಿದೆ. ಆ ಕುರಿತು ಪೊಲೀಸರು ಗಂಭೀರವಾದ ತನಿಖೆ ನಡೆಸದಿರುವುದು ಗೊತ್ತಾಗಿದೆ.
ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ರಾಜ್ಯ ಸರಕಾರ ವಿಶೇ ಮುತುವರ್ಜಿಯಿಂದ ತನಿಖೆಗೆ ಒಪ್ಪಿಸಬೇಕು. ಇಲ್ಲದಿದ್ದರೆ ಜನ ಬೀದಿಗಿಳಿದು ಉಗ್ರಹೋರಾಟ ನಡೆಸಬೇಕಾಗುತ್ತದೆ ಎಂದು ಕೊರವರ ಎಚ್ಚರಿಸಿದ್ದಾರೆ
ಜನ ಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.