ಹುಬ್ಬಳ್ಳಿ-ಧಾರವಾಡ ಸುದ್ದಿ
ಹೊರಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ ಸತಾರೆ ಸಸ್ಪೆಂಡ್ ಎಸ್‌ಪಿ ಸಹಿತ ಹಿರಿಯ ಅಧಿಕಾರಿಗಳ ಮೇಲೂ ತೂಗುಗತ್ತಿ

ಹೊರಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ ಸತಾರೆ ಸಸ್ಪೆಂಡ್ ಎಸ್‌ಪಿ ಸಹಿತ ಹಿರಿಯ ಅಧಿಕಾರಿಗಳ ಮೇಲೂ ತೂಗುಗತ್ತಿ

ಧಾರವಾಡ : ಸಭಾಪತಿ ಬಸವರಾಜ ಹೊರಟ್ಟಿ ಅವರ ವಿರುದ್ಧ ಸರ್ಕಾರದ ಅನುಮತಿ ಪಡೆಯದೇ , ನಿಯಮ ಪಾಲಿಸದೇ ಜಾತಿನಿಂದನೆ ಪ್ರಕರಣ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಧಾರವಾಡ ಗ್ರಾಮಿಣ ಸಿಪಿಐ ಶ್ರೀಧರ ಸತಾರೆ ಅಮಾನತುಗೊಂಡಿದ್ದಾರೆ.
ಈ ಸಂಬಂಧ ಡಿಜಿ-ಐಜಿಪಿ ಪ್ರವೀಣ್ ಸೂದ್ ಅವರು ಆದೇಶ ಹೊರಡಿ ಸಿದ್ದು, ಜನವರಿ 25ರಂದು ನಡೆದಂತ ಗಲಾಟೆ ಪ್ರಕರಣದಲ್ಲಿ, ನಿಯಮ ಬಾಹಿರವಾಗಿ ಸಭಾಪತಿ ಬಸವರಾಜ ಹೊರಟ್ಟಿಯವರ ವಿರುದ್ಧ ಪ್ರಕರಣ ದಾಖಲಿಸಿದ ಕಾರಣದಿಂದಾಗಿ ಅಮಾನತುಗೊಳಿಸಿದ್ದಾರೆ.
ಧಾರವಾಡದ ಸರ್ವೋದಯ ಶಿಕ್ಷಣ ಸಂಸ್ಥೆಯ ಮಾಲಿಕತ್ವದ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಸಭಾಪತಿಯೂ ಆಗಿರುವ ಜಿಲ್ಲೆಯ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ, ಹೊರಟ್ಟಿಯೂ ಸೇರಿದಂತೆ ಹಲವರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಲಾಗಿತ್ತು.
ದೂರಿನನ್ವಯ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಇನ್ನಿತರರ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು.
ಬಳಿಕ ಸಭಾಪತಿಯಂತಹ ಸಾಂವಿಧಾನಿಕ ಹುದ್ದೆಯಲ್ಲಿರುವ ಹೊರಟ್ಟಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ ವಿಷಯ ಸದನದಲ್ಲಿಯೂ ಪ್ರತಿಧ್ವನಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು, ಗೃಹಸಚಿವರು ಇರುಮುರುಸು ಅನುಭವಿಸುವಂತಾಗಿತ್ತು. ಈ ವಿಷಯದಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳ ಮೇಲೆಯೂ ಕ್ರಮ ಜರುಗಿಸಬೇಕು ಎಂದು ಸದನದಲ್ಲಿ ಒತ್ತಾಯ ಕೇಳಿ ಬಂದಿತ್ತು.
ಇನ್ನೊಂದೆಡೆ ಜಿಲ್ಲಾ ಪೊಲೀಸ್ ಅಧಿಕಾರಿಗಳ ಮೇಲೆಯೂ ಕ್ರಮ ಜರುಗಿಸಬೇಕು ಎಂಬ ಒತ್ತಡ ಸರಕಾರದ ಮೇಲಿದ್ದು, ಮುಂದೆ ಯಾವ ಕ್ರಮ ಜರುಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

administrator

Related Articles

Leave a Reply

Your email address will not be published. Required fields are marked *