ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ವೀಕ್ಷಕರು ಫಲಿತಾಂಶಕ್ಕೂ ಮುನ್ನ ಗೋವಾಕ್ಕೆ ಹಾಗೂ ಉತ್ತರಾಖಂಡಕ್ಕೆ ಯಾಕೆ ಹೋಗಿದ್ದರು ಎನ್ನುವುದು ಇನ್ನೂ ಅರ್ಥವಾಗಿಲ್ಲ. ಅವರೇನು ತೋಳುಬಲ ತೋರಿಸಲು, ಗೂಂಡಾಗಿರಿ ಮಾಡಲು ಹೋಗಿದ್ದರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಗೋವಾಕ್ಕೆ ಹಾಗೂ ಉತ್ತರಾಖಂಡಕ್ಕೆ ೧೩ ವೀಕ್ಷಕರು ಬಂದಿದ್ದರು. ಚುನಾವಣೆಯನ್ನು ಕಾಂಗ್ರೆಸ್ ಕುಸ್ತಿಯ ಕಣ, ಡಬ್ಲ್ಯುಡಬ್ಲ್ಯುಎಫ್ ಎಂದುಕೊಂಡಿದೆಯಾ ಜನ ತೀರ್ಪು ಕೊಡುವ ಮುನ್ನವೇ ಇವರು ಅಲ್ಲಿಗೆ ತೆರಳಿದ್ದಾರೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರು ಎಂಬಂತೆ ಕಾಂಗ್ರೆಸ್ ನಡೆಯಾಗಿದೆ. ಫಲಿತಾಂಶ ಬರುವ ಮುನ್ನವೇ ಅಲ್ಲಿಗೆ ಹೋಗಿ ಗೂಂಡಾಗಿರಿ ಮಾಡಲು ತಯಾರಿ ಮಾಡಿದ್ದರೆ. ಕಾಂಗ್ರೆಸ್‌ನ ಈ ನಡೆ ಗೊತ್ತಾಗುತ್ತಿಲ್ಲ ಎಂದರು.
ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ವಿಸರ್ಜಿಸಬೇಕೆಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು. ಅದನ್ನು ರಾಹುಲ್ ಗಾಂಧಿ ಕಾರ್ಯರೂಪಕ್ಕೆ ತರುತ್ತಿದ್ದಾರೆ. ಅದಕ್ಕೆ ಅವರಿಗೆ ಶುಭ ಕೋರುವೆ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ಬಗ್ಗೆ ಜನ ನಂಬಿಕೆ ಇಟ್ಟಿದ್ದಾರೆ: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅದ್ದೂರಿ ಗೆಲುವು ಸಾಧಿಸಿದೆ. ಜಗತ್ತಿನ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ದೇಶದ ಜನರು ಪ್ರಧಾನಿ ಮೋದಿ ಮೇಲೆ ಇಟ್ಟ ವಿಶ್ವಾಸ ಕಂಡು ನಾನು ಬೆರಗಾಗಿದ್ದೇನೆ. ಉತ್ತರಾಖಂಡಕ್ಕೆ ಪ್ರಧಾನಿ ನಾಲ್ಕು ದಿನ ಭೇಟಿ ಕೊಟ್ಟಿದ್ದು ಪಕ್ಷದ ಗೆಲುವಿಗೆ ಕಾರಣವಾಯಿತು. ಅದಕ್ಕೆ ನಾನೊಬ್ಬನೇ ಕಾರಣ ಅಂತ ಹೇಳುವುದಿಲ್ಲ. ಅಲ್ಲಿ ೮೦ ಸಾವಿರ ಸಭೆಗಳನ್ನು ಮಾಡಿದ್ದು ಮೈಲುಗಲ್ಲಾಯಿತು. ಉತ್ತರಾಖಂಡ ರಾಜ್ಯ ಅಭಿವೃದ್ಧಿ ಕಂಡಿದ್ದೆ ಕಳೆದೈದು ವರ್ಷದಲ್ಲಿ. ಕಾಂಗ್ರೆಸ್ ಇನ್ನಾದರೂ ನೆಗೆಟಿವ್ ಪ್ರಚಾರ ಮಾಡುವುದನ್ನು ಬಿಡಬೇಕು ಎಂದರು.
ಪಂಜಾಬ್‌ನಲ್ಲಿ ನಾವು ಅಕಾಲಿದಳದ ಜೊತೆಗೆ ಜ್ಯೂನಿಯರ್ ಪಾಟ್ನರ್ ಆಗಿದ್ದೇವು. ಹೀಗಾಗಿ ಅಲ್ಲಿ ನಮಗೆ ಹಿನ್ನಡೆಯಾಗಿದೆಯಷ್ಟೆ. ಮುಂದಿನ ಚುನಾವಣೆ ವೇಳೆಗೆ ಅಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತದೆ. ಬಿಜೆಪಿ ಗೆಲುವು ಸಾಧಿಸಿದ ನಾಲ್ಕು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಆಯ್ಕೆ ಪ್ರಕ್ರಿಯೆ ಮುಗಿಸಬೇಕಿದೆ ಎಂದರು.
ಅಧಿವೇಶನ ನಂತರ ಸಂಪುಟ ವಿಸ್ತರಣೆ
ಅಧಿವೇಶನದ ನಂತರ ಮಂತ್ರಿ ಮಂಡಲ ವಿಸ್ತರಣೆ ಚರ್ಚೆ ಆಗಲಿದೆ. ಮುಖ್ಯಮಂತ್ರಿಗಳು ದೆಹಲಿಗೆ ಬಂದು ಪಕ್ಷದ ಹಿರಿಯ ಮುಖಂಡರ ಜೊತೆಗೆ ಚರ್ಚೆ ಮಾಡಲಿದ್ದಾರೆ. ಏಪ್ರಿಲ್ ೮ರ ವರೆಗೆ ಅಧಿವೇಶನ ಇದೆ. ಅದರ ನಂತರ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಬೆಳವಣಿಗೆ ಆಗಲಿದೆ. ಸದ್ಯ ಯಾವುದೇ ಪ್ರಕ್ರಿಯೆ ಆಗಲ್ಲ ಎಂದರು.
ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದ ಸಂದರ್ಭದಲ್ಲೂ ಆ ದೇಶಗಳೊಂದಿಗೆ ಪ್ರಧಾನಿ ಮಾತುಕತೆ ನಡೆಸಿ ದೇಶದ ೨೨ಸಾವಿರ ಜನರನ್ನು ರಕ್ಷಿಸಿ, ದೇಶಕ್ಕೆ ಕರೆತಂದರು. ಇದು ಮೋದಿ ಅವರ ವ್ಯಕ್ತಿತ್ವದ ಗಟ್ಟಿತನ ತೋರಿಸುತ್ತದೆ ಎಂದರು.
ಜೋಶಿಗೆ ಅದ್ದೂರಿ ಸ್ವಾಗತ
ಹುಬ್ಬಳ್ಳಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಮೊದಲ ಬಾರಿಗೆ ಇಂದು ನಗರಕ್ಕೆ ಆಗಮಿಸಿದ ಉತ್ತರಾಖಂಡ ರಾಜ್ಯದ ಉಸ್ತುವಾರಿ ಯಾಗಿ ಭಾರತೀಯ ಜನತಾ ಪಕ್ಷದ ಅಭೂತಪೂರ್ವ ವಿಜಯದ ರೂವಾರಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಬೆಳಿಗ್ಗೆ 10 ಗಂಟೆಗೆ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜೋಶಿ ಅವರಿಗೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಆರತಿ ಬೆಳಗುವ ಮೂಲಕ ಸ್ವಾಗತಿಸಿದರು.
ಬಳಿಕ ಜೋಶಿ ಅವರನ್ನು ಬೈಕ್ ರ್‍ಯಾಲಿ ಮೂಲಕ ವಿಮಾನ ನಿಲ್ದಾಣನಿಂದ ಹೊಸೂರು ಕ್ರಾಸ್, ದೇಶಪಾಂಡೆ ನಗರದ ಶಾರದಾ ಹೋಟೆಲ್, ಭವಾನಿ ನಗರ ಮಾರ್ಗ ಮೂಲಕ ಅವರ ಮನೆಯವರೆಗೆ ಕರೆದೊಯ್ಯಲಾಯಿತು.
ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಮಹಾನಗರ ಅಧ್ಯಕ್ಷ ಸಂಜಯ ಕಪಟಕರ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ, ಸಂತೋಷ ಚವ್ಹಾಣ, ಬೀರಪ್ಪ ಖಂಡೇಕಾರ, ಶಿವು ಮೆಣಸಿನಕಾಯಿ, ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ, ಶ್ರೀನಿವಾಸ ಶಾಸ್ತ್ರಿ, ಲಕ್ಷ್ಮೀಕಾಂತ ಘೋಡಕೆ, ಮಣಿಕಂಠ ಶ್ಯಾಗೋಟಿ, ಪ್ರೀತಮ್ ಅರಕೇರಿ, ರಾಜು ಜರತಾರಘರ ಸೇರಿದಂತೆ ಅನೇಕರು ಮೆರವಣಿಗೆಯಲ್ಲಿದ್ದರು.