ಹುಬ್ಬಳ್ಳಿ-ಧಾರವಾಡ ಸುದ್ದಿ
ಬಿರು ಬೇಸಿಗೆಯಲ್ಲಿ ’ಕೃಷಿ ಮೇಳ’ಕ್ಕೆ ತರಾತುರಿ!

ಬಿರು ಬೇಸಿಗೆಯಲ್ಲಿ ’ಕೃಷಿ ಮೇಳ’ಕ್ಕೆ ತರಾತುರಿ!

ಅವಧಿ ಮುಗಿಯುವುದರೊಳಗೆ ’ಜಾತ್ರೆ’ ಮಾಡುವ ಹುನ್ನಾರ
ಖಾಲಿ ಹುದ್ದೆ ನೇಮಕಾತಿಗೂ ಚಿಂತನೆ

ಧಾರವಾಡ : ಇಲ್ಲಿನ ಕೃಷಿ ವಿಶ್ವವಿದ್ಯಾಲಯವು ಬರುವ ಎಪ್ರೀಲ್ ತಿಂಗಳಲ್ಲಿ ಕೃಷಿ ಮೇಳ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ವಿಷಯ ಇದೀಗ ತೀವ್ರ ಚರ್ಚೆಗೊಳಗಾಗಿದೆ.
ಕಳೆದ ವರ್ಷ ಕೋವಿಡ್‌ನಿಂದ ಕೃಷಿ ಮೇಳ ನಡೆಸಲು ಸಾಧ್ಯವಾಗಿರಲಿಲ್ಲ ಎಂಬ ಕಾರಣದಿಂದ ಈ ಬಾರಿ ಮಾಡಲು ತಯಾರಿ ನಡೆದಿಸುವುದಾಗಿ ಗೊತ್ತಾಗಿದೆ. ಕೃಷಿ ವಿಶ್ವವಿದ್ಯಾಲಯವು ಪ್ರತಿವರ್ಷ ಸೆಪ್ಟಂಬರ್ ಕೊನೆಯ ವಾರದಲ್ಲಿ ಕೃಷಿ ಮೇಳ ಆಯೋಜಿಸುತ್ತ ಬಂದಿದೆ. ಕೃಷಿಕರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಮಧ್ಯೆ ಕೃಷಿ ಮೇಳ ಏರ್ಪಡಿಸುತ್ತ ಬಂದಿದೆ. ಅಲ್ಲದೇ ಹಿಂಗಾರಿ ಬೀಜ ಖರೀದಿಗೂ ಅನುಕೂಲವಾಗುತ್ತಿತ್ತು.

mahadev_chetti_kvv

ಆದರೆ, ಕೋವಿಡ್ ಕಾರಣದಿಂದ ಕಳೆದ ವರ್ಷ ನಡೆಯದ ಕೃಷಿ ಮೇಳವನ್ನು ಈ ಬಾರಿ ಎಪ್ರೀಲ್ ತಿಂಗಳಲ್ಲಿ ಏರ್ಪಡಿಸಲು ಹೊರಟಿದೆ. ಈ ಸಮಯದಲ್ಲಿ ರೈತರ ಹೊಲಗಳಲ್ಲಿ ಯಾವುದೇ ಬೆಳೆಗಳು ಇರುವುದಿಲ್ಲ. ಹೀಗಾಗಿ ಮೇಳದಿಂದ ರೈತರಿಗೆ ಯಾವುದೇ ತರಹದ ಪ್ರಯೋಜನ ಆಗುವ ಸಾಧ್ಯತೆ ಇಲ್ಲ. ಅಲ್ಲದೇ ಬಿರುಬಿಸಿಲು ಇರುವುದು ಕೃಷಿ ಮೇಳಕ್ಕೆ ರೈತರ ಆಗಮನ ಕೂಡ ಕಷ್ಟ. ಆದಾಗ್ಯೂ ಎಪ್ರೀಲ್ ತಿಂಗಳಲ್ಲಿ ಆಯೋಜಿಸುವ ಸಲುವಾಗಿ ಆವರಣದಲ್ಲಿನ ಸಣ್ಣಪುಟ್ಟ ಕೆಲಸಗಳು ನಡೆಯುತ್ತಿರುವುದು ಅಚ್ಚರಿ ಮೂಡಿಸಿದೆ.
ಇನ್ನು ಹಲವಾರು ಕಾರಣಗಳಿಂದ 2015 ರಿಂದ ನೆನೆಗುದಿಗೆ ಬಿದ್ದಿದ್ದ ’ಸಿ’ ಗ್ರುಪ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತರಾತುರಿಯಲ್ಲಿ ಪೂರ್ಣಗೊಳಿಸಲು ಕೃವಿವಿ ಮುಂದಾಗಿದೆ. ನೇಮಕಾತಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಕೂಡ ಪಾಲಿಸದಿರುವುದು ಅನುಮಾನಕ್ಕೆಡೆ ಮಾಡಿದೆ.
ಇದೇ ವೇಳೆ ಕೃಷಿ ವಿಶ್ವವಿದ್ಯಾಲಯದಲ್ಲಿನ ಅಧಿಕಾರಿಗಳ ನೇಮಕಾತಿ ವಿಷಯದಲ್ಲಿ ಕುಲಪತಿ ಡಾ.ಮಹದೇವ ಚೆಟ್ಟಿ ಅವರ ನಡೆ ಅನುಮಾನ ಮೂಡಿಸಿದೆ. ಅಧಿಕಾರಿಗಳ ನೇಮಕಾತಿಯಲ್ಲಿ ಇರುವ ನಿಯಮಾವಳಿಗಳನ್ನು ಪಾಲಿಸಲು ವಿಶ್ವವಿದ್ಯಾಲಯಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೃಷಿ ವಿಶ್ವವಿದ್ಯಾಲಯದ ಶಿಕ್ಷಕರ ಸಂಘ ನ್ಯಾಯಾಲದ ಮೊರೆ ಹೋಗಿತ್ತು. ಸಂಘದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಸೂಕ್ತ ನಿಯಮಾವಳಿಗಳನ್ನು ಪಾಲಿಸುವಂತೆ ಆದೇಶ ನೀಡಿತ್ತು.
ಆದರೆ, ಅಧಿಕಾರಿಗಳ ನೇಮಕಾತಿ ಬದಲು ಪ್ರಭಾರ ಜವಾಬ್ದಾರಿ ವಹಿಸಲು ಕುಲಪತಿ ಡಾ.ಚೆಟ್ಟಿ ಮುಂದಾದರು.ಅಧಿಕಾರಿಗಳ ಹುದ್ದೆಗೆ ಹೆಚ್ಚುವರಿಯಾಗಿ ಪ್ರಭಾರ ಜವಾಬ್ದಾರಿ ನೀಡುವ ವಿಷಯದಲ್ಲಿಯೂ ಕುಲಪತಿ ಡಾ.ಚೆಟ್ಟಿ ನಿಯಮ ಪಾಲಿಸಲು ಆಸಕ್ತಿ ತೋರಿಸಲಿಲ್ಲ.


ಹುದ್ದೆಗಳ ಭರ್ತಿಗೆ ವಿಳಂಬವಾದರೆ, ಜೇಷ್ಠತೆಯ ಆಧಾರದ ಮೇಲೆ ಪ್ರಭಾರಿಯಾಗಿ ನಿಯೋಜಿಸುವಂತೆ ಸರಕಾರ ಕೂಡ ನಿರ್ದೇಶನ ನೀಡಿದೆ.
ಆದರೆ, ಸಕಾರದ ನಿರ್ದೇಶನವನ್ನು ಕುಲಪತಿಗಳು ಅಲಕ್ಷಿಸಿ, ಕಿರಿಯರಿಗೆ ಪ್ರಭಾರ ಹೊಣೆ ನಿಭಾಯಿಸಲು ನೇಮಕ ಮಾಡಲು ಯತ್ನಿಸಿದ್ದರು. ಕುಲಪತಿಗಳ ಈ ತೀರ್ಮಾನವನ್ನು ಪ್ರಶ್ನಿಸಿ ಡಾ.ಡಿ.ಪಿ.ಬಿರಾದಾರ ನ್ಯಾಯಾಲಯದ ಮೆಟ್ಟಿಲೇರಿದ್ದರು.ನ್ಯಾಯಾಲಯವು ಜೇಷ್ಠತೆಯ ಆಧಾರದ ಮೇಲೆ ಪ್ರಭಾರಿಯಾಗಿ ನಿಯೋಜಿಸುವಂತೆ ಸೂಚಿಸಿದೆ. ಆದರೆ, ಆಯಕಟ್ಟಿನ ಜಾಗೆಗಳಲ್ಲಿ ತಮಗೆ ಬೇಕಾದವರನ್ನು ಪ್ರತಿಷ್ಠಾಪಿಸುವ ಕೆಲಸವನ್ನು ಸದ್ದಿಲ್ಲದೇ ಮುಂದುವರೆಸಿದ್ದಾರೆ.

ಕಳೆದ 15-20 ವರ್ಷಗಳಿಂದ ದುಡಿಯುತ್ತಿರುವ ದಿನಗೂಲಿ ಕಾರ್ಮಿಕರನ್ನು ಖಾಯಂಗೊಳಿಸಲು ಸರಕಾರದ ಕಡೆಗೆ ಬೆರಳು ತೋರಿಸುವುದನ್ನು ಡಾ.ಚೆಟ್ಟಿ ರೂಢಿಸಿಕೊಂಡಿದ್ದಾರೆ.ಅತ್ಯಂತ ಕಡಿಮೆ ವೇತನದಲ್ಲಿ ದಿನಗೂಲಿ/ಗುತ್ತಿಗೆ ಆಧಾರದಲ್ಲಿ ದುಡಿಯುವ ಕಾರ್ಮಿಕರನ್ನು ಮಾನವೀಯತೆಯ ದೃಷ್ಟಿಯಿಂದಲಾದರೂ ಕಾಣುವ ಗೋಜಿಗೆ ಕುಲಪತಿಗಳು ಹೋಗಿಲ್ಲ.
ಮುಂಬರುವ ಜೂನ್ 30 ಕ್ಕೆ ಕುಲಪತಿ ಡಾ.ಮಹದೇವ ಚೆಟ್ಟಿ ಅವರ ಅವಧಿ ಮುಗಿಯಲಿದ್ದು, ಅಷ್ಟರೊಳಗೆ ಕೃಷಿ ಮೇಳ ಆಯೋಜನೆ, ಅಲ್ಲದೇ ಮತ್ತೊಂದು ಘಟಿಕೋತ್ಸವ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಮುಂದಾಗಿರುವುದು ಸಂಶಯಕ್ಕೆಡೆ ಮಾಡಿದೆ.

ಮೇಳದ ಸಿದ್ಧತೆ ಇಲ್ಲ
ಕೃಷಿ ವಿಶ್ವವಿದ್ಯಾಲಯದಲ್ಲಿ ಎಪ್ರೀಲ್ ತಿಂಗಳಲ್ಲಿ ಕೃಷಿ ಮೇಳ ಆಯೋಜಿಸಲು ಯಾವುದೇ ತಯಾರಿ ನಡೆಯುತ್ತಿಲ್ಲ. ಎಪ್ರೀಲ್ ತಿಂಗಳು ಮೇಳ ಆಯೋಜಿಸಲು ಸೂಕ್ತ ಸಮಯ ಕೂಡ ಅಲ್ಲ. ಅಲ್ಲದೇ ಈ ಬಗ್ಗೆ ಕುಲಪತಿಗಳಿಂದ ನಮಗೆ ಯಾವುದೇ ನಿರ್ದೇಶನವೂ ಇಲ್ಲ.

ಡಾ.ಬಿ.ಕೆ.ನಾಯಕ
ವಿಸ್ತರಣಾ ನಿರ್ದೇಶಕರು

administrator

Related Articles

Leave a Reply

Your email address will not be published. Required fields are marked *