ಹುಬ್ಬಳ್ಳಿ: ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ವಿಚಾರದಲ್ಲಿ ಸರ್ಕಾರ ಯಾವ ನಿಲುವನ್ನು ತೆಗೆದುಕೊಳ್ಳುತ್ತದೋ ಒಬ್ಬ ಮಂತ್ರಿಯಾಗಿ ಅದಕ್ಕೆ ನನ್ನ ಒಪ್ಪಿಗೆ ಇದೆ ಎಂದು ಜವಳಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಹೇಳಿದರು.
ನಗರದ ಮಾಧ್ಯಮದವರೊಂದಿಗೆ ಮಾತನಾಡಿದ ಮುನೇನಕೊಪ್ಪ ಅವರು, ಈಗಾಗಲೇ ಶಿಕ್ಷಣ ಸಚಿವ ನಾಗೇಶ ಅವರು ಈ ವಿಚಾರದ ಬಗ್ಗೆ ಈ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್‌ನವರು ಚುನಾವಣೆ ದೃಷ್ಠಿಕೋನ ಇಟ್ಟುಕೊಂಡು ಈ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಯಾವಾಗಲೂ ಅವರದು ಓಟ್ ಬ್ಯಾಂಕ್ ರಾಜಕೀಯ ಎಂದರು.
ಪಂಚರಾಜ್ಯ ಚುನಾವಣೆಯಲ್ಲಿ ಇಡೀ ದೇಶದ ಜನರೇ ಅವರಿಗೆ ಪಾಠ ಕಲಿಸಿದ್ದಾರೆ. ಜನ ಅವರನ್ನು ತಿರಸ್ಕರಿಸಿದ್ದಾರೆ ಇನ್ನಾದರೂ ಅವರು ಬುದ್ದಿ ಕಲಿಯಲಿ. ಬಿಜೆಪಿಯವರ ಅಭಿವೃದ್ಧಿ ಕೆಲಸಗಳನ್ನು ಕಾಂಗ್ರೆಸ್‌ಗೆ ಸಹಿಸಲು ಆಗುತ್ತಿಲ್ಲ ಎಂದು ಹೇಳಿದರು.
ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿಷಯವನ್ನು ರಾಷ್ಟ್ರಮಟ್ಟದಲ್ಲಿ ಹಬ್ಬಿಸುವ ಅವಶ್ಯಕತೆ ಇರಲಿಲ್ಲ. ಕೋರ್ಟ್ ನೀಡಿದ ತೀರ್ಪು ವಿರೋಧಿಸಿ ಬಂದ್‌ಗೆ ಕರೆಕೊಟ್ಟಾಗ ಕಾಂಗ್ರೆಸ್ ಅದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಕಾಂಗ್ರೆಸ್‌ನ ಈ ನಡೆ ಸರಿಯಲ್ಲ. ಕಾಶ್ಮೀರ ಫೈಲ್ಸ್ ಚಿತ್ರ ದೇಶದ ಎಲ್ಲ ಭಾಷೆಗಳಲ್ಲಿ ಬಿಡುಗಡೆಯಾಗಬೇಕು. ಈ ಮೂಲಕ ದೇಶದ ಜನತೆಗೆ ಇತಿಹಾಸ ತಿಳಿಯಲಿದೆ ಎಂದರು.