ಹುಬ್ಬಳ್ಳಿ-ಧಾರವಾಡ ಸುದ್ದಿ

14ನೇ ಜಿಲ್ಲಾ ಅಕ್ಷರ ಜಾತ್ರೆಗೆ ಅದ್ಧೂರಿ ಚಾಲನೆ

ಉ.ಕ.ದಲ್ಲಿ ಮಾತ್ರ ಕನ್ನಡ ಜೀವಂತ : ಹೊರಟ್ಟಿ
ಕಸಾಪ ರಂಗಮಂದಿರಕ್ಕೆ 75 ಲಕ್ಷ ಅನುದಾನ ಭರವಸೆ

ಧಾರವಾಡ: ಸಾಹಿತ್ಯದ ತವರೂರು ಧಾರವಾಡದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ರಂಗಮಂದಿರ ಇಲ್ಲದಿರುವುದು ಖೇದಕರ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೊಂದಿಗೆ ಚರ್ಚಿಸಿ 75 ಲ.ರೂ.ಅನುದಾನ ಕೊಡಿಸುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಭರವಸೆ ನೀಡಿದರು.
ಇಲ್ಲಿನ ಸಾಹಿತ್ಯ ಪರಿಷತ್ ಆವರಣದಲ್ಲಿಂದು ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಧಾರವಾಡ ಸಾಹಿತ್ಯ ಪರಿಷತ್ ರಾಜ್ಯಕ್ಕೆ ಮಾದರಿ. ಧಾರವಾಡ ಗೋಕಾಕ್ ಚಳವಳಿಗೆ ನಾಂದಿ ಹಾಡಿತು. ಅದರಲ್ಲಿ  ಸಾಕಷ್ಟು ಓಡಾಡಿ ದ್ದೇವೆ. ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ, ಧಾರವಾಡದಲ್ಲಿ ಮಾತ್ರ ಕನ್ನಡ ಭಾಷೆ ಜೀವಂತ ಇದೆ. ಅಚ್ಚಗನ್ನಡ ಭಾಷೆಯು ಉಳಿದಿದ್ದು ಧಾರವಾಡ, ಗದಗ, ಹಾವೇರಿ ಸೇರಿ ಉತ್ತರ ಕರ್ನಾಟಕದಲ್ಲಿ ಮಾತ್ರ ಎಂದರು.


ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ ಸಮ್ಮೇಳನ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಆಚಾರ್ ಹಾಲಪ್ಪ, ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್.ವಿ.ಸಂಕನೂರ, ಕವಿವ ಸಂಘದ ಅಧ್ಯಕ್ಷ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಸಮ್ಮೇಳನದ ಸರ್ವಾಧ್ಯಕ್ಷ ಡಾ. ರಮಾಕಾಂತ ಜೋಶಿ, ಮಾಜಿ ಸಭಾಪತಿ ವೀರಣ್ಣ ಮತ್ತೀಕಟ್ಟಿ, ಡಾ.ಶರಣಪ್ಪ ಕೊಟಗಿ ವೇದಿಕೆಯ ಲ್ಲಿದ್ದರು.
ಹಿರಿಯ ಲೇಖಕ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಆಶಯ ನುಡಿಗಳನ್ನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಡಿ.ಎಂಹಿರೇಮಠ, ಮಾಜಿ ಸಂಸದ ಐ.ಜಿ.ಸನದಿ, ಸಾಹಿತಿ ಪ್ರೊ.ಮಾಲತಿ ಪಟ್ಟಣಶೆಟ್ಟಿ, ನಿಂಗಣ್ಣ ಕುಂಟಿ, ಡಾ.ಶರಣಮ್ಮ ಗೋರವಾಳ, ಡಾ.ಜಿನದತ್ತ ಹಡಗಲಿ, ಮಾರ್ತಾಂಡಪ್ಪ ಕತ್ತಿ, ಅಜಿತಕುಮಾರ ದೇಸಾಯಿ, ಚನಬಸಪ್ಪ ಧಾರವಾಡಶೆಟ್ರು ಸೇರಿದಂತೆ ಅನೇಕ ಸಾಹಿತಿಗಳು, ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿದ್ದರು.
ಕಾರ್ಯಕ್ರಮಕ್ಕೂ ಮುಂಚೆ ತಾಯಿ ಭುವನೇಶ್ವರಿಯ ಮೆರವಣಿಗೆಗೆ ಮನಸೂರು ರೇವಣಸಿದ್ದೇಶ್ವರ ಮಠದ ಶ್ರೀ ಬಸವರಾಜ ದೇವರು ಚಾಲನೆ ನೀಡಿದರು. ಡೊಳ್ಳು ಕುಣಿತ,ಜಗ್ಗಲಿಗೆ,ಕರಡಿ ಮಜಲು ಸಹಿತ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.

administrator

Related Articles

Leave a Reply

Your email address will not be published. Required fields are marked *