ಅಣ್ಣಿಗೇರಿ ಬಳಿ ನಾಲ್ವರ ತಂಡದಿಂದ ದುಷ್ಕೃತ್ಯ
ಅಣ್ಣಿಗೇರಿ : ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಸಮೀಪದ ಆರೇರ ಸೇತುವೆ ಮೇಲೆ ನಂಬರ್ ಇಲ್ಲದ ನೀಲಿ ಬಣ್ಣದ ಟಾಟಾ ಎ.ಸಿ ವಾಹನದಲ್ಲಿ ಬಂದ 4 ಜನರ ತಂಡ ಹುಬ್ಬಳ್ಳಿಯ ಐಸರ್ ವಾಹನ ಅಡ್ಡಗಟ್ಟಿ ಚಾಲಕ,ಸುಪರ್‌ವೈಸರ್ ಮೇಲೆ ಖಾರದ ಪುಡಿ ಎರಚಿ,ಸುತ್ತಿಗೆಯಿಂದ ಹಲ್ಲೆ ನಡೆಸಿ 1.22ಲಕ್ಷ ರೂ ನಗದು ಕಿತ್ತು ಪರಾರಿಯಾದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಸೋಮವಾರ ರಾತ್ರಿ 8-50ರ ಸುಮಾರಿಗೆ ಈ ಘಟನೆ ನಡೆದಿದ್ದು ಐಸರ್ ವಾಹನ ಸಂಖ್ಯೆಕೆಎ 63/8284 ಅಡ್ಡಗಟ್ಟಿದ ನಾಲ್ಕು ಜನರಿದ್ದ ತಂಡ ವಾಹನದಲ್ಲಿದ್ದ ಚಾಲಕನ ಹಾಗೂ ಸೂಪರ್ ವೈಸರ್ ಮುಖಕ್ಕೆ ಖಾರದ ಪುಡಿ ಮತ್ತು ಸಣ್ಣ ಸುತ್ತಿಗೆಯಿಂದ ಮೂಗು ಮುಖಕ್ಕೆ ಎಲ್ಲೆಂದರಲ್ಲಿ ಹೊಡೆದಿದೆಯಲ್ಲದೇ 1 ಲಕ್ಷದ 22 ಸಾವಿರ ರೂಗಳನ್ನು ಕಿತ್ತುಕೊಂಡು ಕಾಲ್ಕಿತ್ತಿದೆ. ಹುಬ್ಬಳ್ಳಿಯ ಸಿದ್ಧಾರೂಢ ಸ್ವೀಟ್ ಮತ್ತು ನಮಕೀನ್ಸ್ ಫ್ಯಾಕ್ಟರಿಯ ವಾಹನ ಇದಾಗಿದ್ದು, ಬ್ಯಾಹಟ್ಟಿ, ಯಮನೂರ, ನವಲುಗುಂದ, ಮಲ್ಲಾಪುರ, ರೋಣ ಗದಗ ಇನ್ನಿತರ ಕಡೆ ಹೋಲಸೇಲ್ ರೂಪದಲ್ಲಿ ಸಿಹಿ ತಿಂಡಿ ಖಾರಾ ಮತ್ತಿತರ ವಸ್ತು ಪೂರೈಸಿ ಹಣ ಪಡೆದು ಮರಳುವಾಗ ಬಂಗಾರಪ್ಪನಗರ ದಾಟಿದ ನಂತರ ಬರುವ ಆರೇರ ಸೆತುವೆ ಮೇಲೆ ನಡೆದಿದೆ .ಚಾಲಕ ಮತ್ತು ಸುಪರ್ ವೈಸರ್ ಇಬ್ಬರೂ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಸಿಪಿಐ ಸಿ.ಜಿ. ಮಠಪತಿ ಹಾಗೂ ಸ್ಥಳೀಯ ಠಾಣಾಧಿಕಾರಿ ಎಲ್. ಕೆ. ಜೂಲಕಟ್ಟಿ ಪರಿಶೀಲಿಸಿ ಪ್ರಕರಣದ ದಾಖಲಿಸಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಪದೇ ಪದೇ ಇಂತಹ ಪ್ರಕರಣಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.