ಹುಬ್ಬಳ್ಳಿ: ಐಪಿಎಲ್ ಆರಂಭವಾಗುತ್ತಿದ್ದಂತೆಯೆ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೋರಾಗಿಯೇ ಆರಂಭಗೊಂಡಿದ್ದು ಬಹುತೇಕ ಹಳೆಯ ’ಕಿಲಾಡಿ’ಗಳು ಹೊಸ ಹುಡುಗರ ಅಥವಾ ಸಂಬಂಧಿಗಳ ಹೆಸರಲ್ಲಿ ತಮ್ಮ ಸುರಕ್ಷಿತ ಗೇಮ್ ಶುರು ಮಾಡಿದ್ದು ಮುಂಡಗೋಡ,ಪುಣೆ ಹಾಗೂ ಗೋವಾಗಳಲ್ಲೆ ಕುಳಿತು ನಿಯಂತ್ರಿಸುತ್ತಿದ್ದಾರೆನ್ನಲಾಗುತ್ತಿದೆ.
ತನ್ಮಧ್ಯೆ ಮಂಗಳವಾರ ರಾತ್ರಿ ಗೋಕುಲ ರಸ್ತೆಯ ಅಕ್ಷಯ ಪಾರ್ಕ ಬಳಿಯ ಕ್ಲಾಸಿಕ್ ಬಾರ್ ಸಮೀಪ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿ ಗೋಕುಲ ಠಾಣೆಗೆ ಹಸ್ತಾಂತರಿಸಿದ್ದು, 25280 ರೂ.ನಗದು ವಶಪಡಿಸಿಕೊಂಡಿದೆ.
ಪುಣೆಯಲ್ಲಿ ನಡೆದ ರಾಜಸ್ತಾನ ರಾಯಲ್ಸ್ ಹಾಗೂ ಸನ್ ರೈಸರ್ಸ ಹೈದ್ರಾಬಾದ್ ತಂಡಗಳ ನಡುವಿನ ಟಿ-20 ಪಂದ್ಯದ ಮೇಲೆ ಬೆಟ್ಟಿಂಗ್ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಇನ್ಸಪೆಕ್ಟರ್ ರಾಘವೇಂದ್ರ ಹಳ್ಳೂರ ನೇತ್ರತ್ವದ ತಂಡ ದಾಳಿ ಮಾಡಿದ್ದು ಹರ್ಷವರ್ಧನ ಕೋನೆರಿ,ಶ್ರೀಕಾಂತ ಮಾಳವದೆ, ಅರುಣ ಗುಜ್ಜರ,ಸಾಗರ ಗುಜ್ಜರ ಅವರನ್ನು ಸಹ ಬಂಧಿಸಲ್ಪಟ್ಟವರಾಗಿದ್ದಾರೆ.
ಖಡಕ್ ಆಯುಕ್ತ ಲಾಭೂರಾಮ್ ಅವರು ಎಲ್ಲ ಹಳೆಯ ಕುಳಗಳ ಜಾತಕ ತೆರೆಯಲು ಎಲ್ಲ ಠಾಣೆಗಳಿಗೆ ಸೂಚನೆ ನೀಡಿದಲ್ಲಿ ಅನೇಕ ಹಳಬರ ಹೊಸ ’ಮುಖ’ಗಳು ಬೆಳಕಿಗೆ ಬರುವುದು ಖಂಡಿತ ಎನ್ನಲಾಗುತ್ತಿದೆ.
ಉಪನಗರ ಬೇಟೆ : ಹೊಸೂರು ಕ್ರಾಸ್ ಬಳಿಯ ಪಾಲಿಕೆಯ ಖುಲ್ಲಾ ಜಾಗೆಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರನ್ನು ಸೋಮವಾರ ರಾತ್ರಿ ಉಪನಗರ ಇನ್ಸಪೆಕ್ಟರ್ ರವಿಚಂದ್ರ ನೇತೃತ್ವದ ತಂಡ ಬಂಧಿಸಿದೆ.
ಹೊಸೂರಿನ ಸಂಜು ರೋಣದ ಹಾಗೂ ಮನೀಷ ಕೊರವರ ಬಂಧಿತ ಆರೋಪಿಗಳಾಗಿದ್ದಾರೆ. ಅರುಣ ಕಠಾರೆ ಎಂಬಾತ ಪರಾರಿಯಾಗಿದ್ದಾನೆ. ಬಂಧಿತರಿಂದ 6100 ರೂ. ನಗದು, ಎರಡು ಮೊಬೈಲ್ ಪೋನ್ ವಶಪಡಿಸಿಕೊಂಡಿದ್ದಾರೆ.
ಮೂವರು ಅಂದರ್ : ಶಹರ ಪೊಲೀಸರು ಇನ್ಸಪೆಕ್ಟರ್ ಆನಂದ ಒನಕುದ್ರೆ ನೇತೃತ್ವದಲ್ಲಿ ಭಾನುವಾರ ರಾತ್ರಿ ತಬೀಬ ಲ್ಯಾಂಡ್ ಬಳಿ ದಾಳಿ ನಡೆಸಿ ದಾವಲಸಾಬ,ಅಯೂಬ ಖಾನ್, ನಾಗರಾಜ ಎಂಬವರನ್ನು ಬಂಧಿಸಿ 38200 ರೂ ವಶಪಡಿಸಿಕೊಂಡಿದ್ದಾರೆ.