ರಮ್ಜಾನ್ ತಿಂಗಳಲ್ಲಿ ತೊಂದರೆ ಕೊಡಬೇಡಿ: ಇಸ್ಮಾಯಿಲ್ ತಮಟಗಾರ ಮನವಿ
ಧಾರವಾಡ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಒಂದೇ ಸಮಾಜ ಗುರಿಯಿಟ್ಟು ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ, ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಹಿಜಾಬ್ ಪ್ರಕರಣ, ಹಿಂದೂಯೇತರ ವ್ಯಾಪಾರ ಆಯ್ತು. ಈಗ ಹಲಾಲ್-ಜಟ್ಕಾ ಎಂದು ಕೆಲವರು ವಿವಾದ ಸೃಷ್ಟಿಸಿ, ಸಮಾಜದಲ್ಲಿ ಶಾಂತಿ ಕದಡುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ಈ ವಿಚಾರಗಳು ಅಲ್ಲಲ್ಲಿ ನಡೆಯುತ್ತಿದ್ದರೂ ಸರಕಾರ ಏನೂ ಮಾಡದಿರುವುದು ಖಂಡನೀಯ ಎಂದರು.
ಮುಸಲ್ಮಾನರಿಗೆ ಗೊತ್ತಿಲ್ಲದ ಕೆಲವು ಶಬ್ದಗಳನ್ನು ವಿಶ್ವ ಹಿಂದುಪರಿಷತ್, ಶ್ರೀರಾಮ ಸೇನೆ, ಭಜರಂಗದಳದಂತಹ ಸಂಘಟನೆಗಳು ಪರಿಚಯಿಸುತ್ತಿವೆ. ಇದರಿಂದ ಮುಸ್ಲಿಂರಗಿಂತ ಬೇರೆಯವರೆ ಕುರಾನ್ ಓದುತ್ತಿದ್ದಾರೆ ಎನ್ನುವ ಭಾವನೆ ಬರುತ್ತಿದೆ. ಇದನ್ನು ನೋಡಿ ನಮಗೆ ನಾಚಿಕೆ ಆಗುತ್ತಿದೆ ಎಂದು ಹೇಳಿದರು.
ಬಿಜೆಪಿ ವಿವಾದಗಳಿಂದ ನಮ್ಮ ಸಮಾಜ ಜಾಗೃತವಾಗಿದೆ. ಅವರ ವಿವಾದ ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಿದ್ದಾರೆ. ಮೊದಲು ಚಂದಾ ಸಂಗ್ರಹಿಸಿ ನಮ್ಮವರು ಮಸೀದಿ ಕಟ್ಟುತ್ತಿದ್ದರು. ಆದರೆ, ಇನ್ನು ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜ್ ಆರಂಭಿಸುವತ್ತ ಚಿಂತನೆ ಮಾಡುತ್ತಿದ್ದಾರೆ.
ಮೊದಲು ಜಾತ್ರೆ ಇದ್ದಾಗ ಮಾತ್ರ ಮುಸ್ಲಿಮರು ಅಂಗಡಿ ಹಾಕುತ್ತಿದ್ದರು. ಜಾತ್ರೆಗಳು ಮುಗಿದ ಮೇಲೆ ಖಾಲಿ ಇರುತ್ತಿದ್ದರು. ಆದರೆ ಇವರು ಅಲ್ಲಿಯೂ ವಿವಾದ ಮಾಡಿದರು. ಈಗ ವರ್ಷವೀಡಿ ದುಡಿಯೋಕೆ ನಮ್ಮವರು ಮುಂದಾಗಿದ್ದಾರೆ ಎಂದರು.
ಇನ್ನು ಹಲಾಲ್-ಜಟ್ಕಾ ವಿವಾದ ಮಾಡಿದ್ದಾರೆ. ಜಟ್ಕಾ ತಿನ್ನುವುದಕ್ಕೆ ಯಾರೂ ಬೇಡ ಅಂದಿಲ್ಲ. ಯಾರಿಗೂ ಜಟ್ಕಾ ಅಂಗಡಿ ತೆಗೆಯಬೇಡಿ ಎಂದು ಹೇಳಿಲ್ಲ. ಈ ಜಟ್ಕಾ ಬಗ್ಗೆ ನಮ್ಮ ಸಮಾಜ ವಿರೋಧ ಕೂಡ ಮಾಡಿಲ್ಲ. ಯಾರು ಬೇಕಾದರೂ ತಮಗೆ ಬೇಕಿದ್ದರೆ ಜಟ್ಕಾ ಅಂಗಡಿಯಲ್ಲಿ ತೆಗೆದುಕೊಳ್ಳಿ. ಆದರೆ, ಮುಸಲ್ಮಾನರು ನಂಬಿರುವ ಹಲಾಲ್ ಅಂಗಡಿಗಳಿಗೆ ತೊಂದರೆ ಮಾಡಲು ಹೋಗಬೇಡಿ ಎಂದರು.
ಈಗ ರಮ್ಜಾನ್ ತಿಂಗಳು ಆರಂಭವಾಗಿದೆ. ಇದು ಬಸವಣ್ಣನವರ ನಾಡು. ಇಲ್ಲಿ ಎಲ್ಲರೂ ಸಹಬಾಳ್ವೆಯಿಂದ ಇರಬೇಕು. ರಮ್ಜಾನ್ ತಿಂಗಳಿನಲ್ಲಿ ಯಾರಿಗೂ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದರು.
ಅಂಜುಮನ್ ಅಧ್ಯಕ್ಷ ಇಕ್ಬಾಲ್ ಜಮಾದಾರ, ಕಾರ್ಯದರ್ಶಿ ನಜೀರ ಮನಿಯಾರ, ಬಶೀರ ಅಹ್ಮದ ಜಾಗೀರದಾರ, ರಿಯಾಜ್ ನನ್ನೇಸಾಬನವರ ಸುದ್ದಿಗೋಷ್ಠಿಯಲ್ಲಿದ್ದರು.
ವ್ಯಾಪಾರ ಬಹಿಷ್ಕಾರ
ನಮ್ಮ ಸಮಾಜದ ಮಸೀದಿ, ಕಾಂಪ್ಲೆಕ್ಸ್‌ಗಳಲ್ಲಿಯೂ ಹಿಂದೂಗಳ ಅಂಗಡಿಗಳೂ ಇವೆ. ಹಿಂದು ದೇವಸ್ಥಾನ, ಸ್ಥಳಗಳಲ್ಲಿ ಮುಸ್ಲಿಂರ ವ್ಯಾಪಾರ ವಿರೋಧಿಸುವರು, ಮುಸಲ್ಮಾನ ಸಂಸ್ಥೆಗಳಲ್ಲಿ ವ್ಯವಹಾರ ನಡೆಸುತ್ತಿರುವ ಹಿಂದೂಗಳಿಗೆ ತಾಕತ್ ಇದ್ದರೆ ಬೇಡ ಎನ್ನಲಿ ಎಂದು ಇಸ್ಮಾಯಿಲ್ ಸವಾಲು ಹಾಕಿದರು.