ಹಸಿರುಪಥ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಶೆಟ್ಟರ್
ಹುಬ್ಬಳ್ಳಿ : ಸ್ಮಾರ್ಟ್ ಸಿಟಿ ಯೋಜನೆಯಡಿ 80ಕೋಟಿ ರೂ. ವೆಚ್ಚದಲ್ಲಿ 9.2 ಕಿ.ಮೀ. ಉದ್ದದ ಹಸಿರು ಸಂಚಾರಿ ಪಥ(ಗ್ರೀನ್ ಮೋಬಿಲಿಟಿ ಕಾರಿಡಾರ್) ಕಾಮಗಾರಿಯು ದೇಶದ 100 ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮೊದಲನೆ ಯದಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯ ಉಣಕಲ್ ನಾಲಾ ಹಿಂಭಾಗದ ಜಲಮಂಡಳಿ ಕಚೇರಿ, ಲಿಂಗರಾಜ ನಗರದ ಹತ್ತಿರ ಸ್ಮಾರ್ಟ್ ಸಿಟಿ ಯೋಜನೆಯ ಕೈಗೊಂಡಿರುವ ಹಸಿರುಪಥ (ಗ್ರೀನ್ ಮೋಬಿಲಿಟಿ) ನಿರ್ಮಾಣ ಕಾಮಗಾರಿಯನ್ನು ಫ್ರೆಂಚ್ ಅಭಿವೃದ್ಧಿ ಏಜೆನ್ಸಿಯ ನಿಯೋಗದ ಸದಸ್ಯರೊಂದಿಗೆ ವೀಕ್ಷಿಸಿ ಮಾತನಾಡಿದರು.
ಮೊದಲ ಹಂತದಲ್ಲಿ 7.2 ಕೋಟಿ ವೆಚ್ಚದಲ್ಲಿ 640 ಮೀಟರ್ ಉದ್ದದ ನಾಲಾ ಅಭಿವೃದ್ಧಿ ಹಾಗೂ ಸೈಕಲ್ ಪಾತ್ ನಿರ್ಮಾಣ ಮಾಡಲಾಗಿದೆ. ಮುಂದಿನ 15 ದಿನಗಳಲ್ಲಿ ಉದ್ಘಾಟನೆ ಮಾಡಿ, ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಲಾಗುತ್ತದೆ ಎಂದರು.
ಫ್ರಾನ್ಸ್‌ದಿಂದ ಆಗಮಿಸಿರುವ ಸುಸ್ಥಿರ ನಗರಾಭಿವೃದ್ಧಿ ಕಾರ್ಯಗಳ ತಂಡದ ನಿಯೋಗವು ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಹಸಿರು ಸಂಚಾರಿ ಪಥ(ಗ್ರೀನ್ ಮೋಬಿಲಿಟಿ ಕಾರಿಡಾರ್) ಕಾಮಗಾರಿಯು ವೀಕ್ಷಿಸುತ್ತಿದೆ. ಯುರೋಪ್ ಯುನಿಯನ್ ದೇಶಗಳಲ್ಲಿ ಕೈಗೊಂಡ ಕಾಮಗಾರಿಗಿಂತ ಭಿನ್ನವಾಗಿದೆ ಎಂದು ತಿಳಿಸಿದೆ. ನಾಲಾ ಪಕ್ಕದಲ್ಲಿ ಸೈಕಲ್ ಪಾತ್, ಗಾರ್ಡನ್ ಅಭಿವೃದ್ಧಿ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರು ಮಧ್ಯರಾತ್ರಿವರೆಗೆ ವಾಕ್ ಮಾಡಬಹುದು. ಸ್ಮಾರ್ಟ್ ಸಿಟಿ ಆಗಲು ಹುಬ್ಬಳ್ಳಿ ಧಾರವಾಡ ದಾಪುಗಾಲು ಇಡುತ್ತಿದೆ ಎಂದರು.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್ ನಿಯೋಗದ ನಿರ್ದೇಶಕ ಹಿತೇಶ್ ವೈದ್ಯ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಈ ತರಹದ ಕಾಮಗಾರಿಯನ್ನು ಕೈಗೊಂಡಿರುವುದು ಬಹಳ ಸಂತಸ ತಂದಿದೆ ಎಂದರು.
ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ಚೇರ್ಮನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಆರ್.ವಿಶಾಲ್ ಅವರು ತಂಡಕ್ಕೆ ಮಾಹಿತಿ ನೀಡಿದರು.
ಕಾರ್ಯಪಡೆಯ ನಾಯಕಿ ಜ್ಯೂಲಿಯೆಟ್ ಲಿ ಪ್ಯಾನೆರರ್, ಸಹನಾಯಕ ಜ್ಯೂಲಿಯೆನ್ ಬೊಗಿಲೆಟ್ಟೊ, ಸ್ಮಾರ್ಟ್ ಸಿಟಿ ವಲಯದ ವ್ಯವಸ್ಥಾಪಕಿ ಫ್ಯಾನಿ ರಗೋಟ್, ನಯೀಮ್ ಕೇರುವಾಲಾ, ವಿವೇಕ್ ಸಂಧು, ಡಾ.ಶಾಲಿನಿ ಮಿಶ್ರಾ, ಡಾ.ಮಹ್ಮದ್ ಆರೀಫ್, ಆಕಾಂಕ್ಷ ಲಾರೊಯಿಯಾ, ಇಂದರ್‌ಕುಮಾರ್ ಅವರು ಉಣಕಲ್ ನಾಲಾ ಹಿಂಭಾಗದ ಬಳಿ ನಿರ್ಮಿಸುತ್ತಿರುವ ಗ್ರೀನ್ ಮೊಬಿಲಿಟಿ ಕಾಮಗಾರಿ ವೀಕ್ಷಿಸಿದರು.
ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೆಶಕ ಶಕೀಲ್ ಅಹ್ಮದ್ ಮತ್ತಿತರರು ಕಾಮಗಾರಿಗಳ ಮಾಹಿತಿಯನ್ನು ನಿಯೋಗಕ್ಕೆ ಒದಗಿಸಿದರು.