ಶಿರಗುಪ್ಪಿ ಬಳಿ ಅವಘಡ – ಎಂಟು ಜನರಿಗೆ ಗಂಭೀರ ಗಾಯ
ಹುಬ್ಬಳ್ಳಿ: ಗದಗ ರಸ್ತೆಯಲ್ಲಿ ತಾಲೂಕಿನ ಶಿರಗುಪ್ಪಿ ಬಳಿ ಐರಾವತ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ, ಕಾರು ಚಾಲಕ ಹಾಗೂ ಅವರ ತಾಯಿ ಸ್ಥಳದಲ್ಲೇ ಮೃತಪಟ್ಟು, ಎಂಟು ಜನ ತೀವ್ರ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರು ಗುಜರಾತ್ ಮೂಲದ ಹುಬ್ಬಳ್ಳಿ ನಿವಾಸಿ ಗಳಾದ ದವಲ್ ರಮೇಶಬಾಯ್ ಪಡಸಾಲ(35), ಶಾರದಾಬೆನ್ ರಮೇಶಬಾಯ್ ಪಡಸಾಲ(60) ಆಗಿದ್ದಾರೆ.
ದಯಾ ಪಡಸಾಲ(34), ದಿಯೇಯ(7), ದಕ್ಷ(2), ರಮೇಶಬಾಯ್ ಪಡಸಾಲ(62), ನೀತಾಬೆನ್(38), ದೃಷ್ಠಿ ಪಟೋಲಿಯಾ(15), ರಿದಂ ಪಟೋಲಿಯಾ(13), ಜಾನವಿ ಪಟೋಲಿಯಾ(7) ಗಾಯಗೊಂಡವರಾಗಿದ್ದಾರೆ.
ಹುಬ್ಬಳ್ಳಿಯಿಂದ ಹಂಪಿಗೆ ಮಹೀಂದ್ರಾ ಎಕ್ಸಯುವಿ ವಾಹನದಲ್ಲಿ ಕುಟುಂಬ ಸಮೇತರಾಗಿ ಪ್ರವಾಸಕ್ಕೆ ಹೊರಟಿದ್ದಾಗ ಗದಗ ಕಡೆಯಿಂದ ಹುಬ್ಬಳ್ಳಿ ಕಡಗೆ ವೇಗವಾಗಿ ರಾಂಗ್ ಸೈಡ್‌ನಲ್ಲಿ ಬರುತ್ತಿದ್ದ ಐರಾವತ ಬಸ್ ಢಿಕ್ಕಿ ಹೊಡೆದಿದ್ದರಿಂದ ಅವಘಡ ಸಂಭವಿಸಿದೆ.
ಐರಾವತ್ ಬಸ್ಸಿನ ಚಾಲಕನ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ನಡೆದಿದ್ದು, ಗಾಯಾಳುಗಳನ್ನ ಶಿರಗುಪ್ಪಿಯವರೇ ಆ ಬಿಜೆಪಿ ಮುಖಂಡ ರಾಜು ಕಂಪಿ ಹಾಗೂ ಇತರರು ಹುಬ್ಬಳ್ಳಿಯ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸ್ವತಃ ಕಂಪ್ಲಿ ತಾವೇ ಕಾರು ಚಾಲನೆ ಮಾಡಿ, ಮಾನವೀಯತೆ ಮೆರೆದಿದ್ದಾರೆ.
ಸ್ಥಳಕ್ಕೆ ಗ್ರಾಮೀಣ ಠಾಣೆ ಇನ್ಸ್ ಪೆಕ್ಟರ್ ರಮೇಶ ಗೋಕಾಕ ಮತ್ತು ಸಿಬ್ಬಂದಿ ತೆರಳಿ ಪರಿಶೀಲಿಸಿದ್ದಾರೆ.
ಕಲಘಟಗಿ ರಸ್ತೆಯಲ್ಲಿ ನಿನ್ನೆ ಮಳೆಯಿಂದಾಗಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರ ತೆರವುಗೊಳಿಸುವ ಸಂದರ್ಭದಲ್ಲಿ ಓರ್ವ ಕಾನಸ್ಟೇಬಲ್ ಸೇರಿ ಮೂವರು ಮೃತಪಟ್ಟಿರುವ ಘಟನೆ ಬೆನ್ನ ಹಿಂದೆಯೇ ಈ ಅವಘಡ ಸಂಭವಿಸಿದೆ.