ರಜತ ಉಳ್ಳಾಗಡ್ಡಿಮಠ, ಗುರುನಾಥ ಉಳ್ಳಿಕಾಶಿ ನೇತೃತ್ವ
ಹುಬ್ಬಳ್ಳಿ: ನಗರದ ಆರ್‌ಜಿಎಸ್ ರೈಲ್ವೆ ಕಾಲೊನಿಯ ವಿನೋಬಾನಗರದ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಯನ್ನು ಗುರುವಾರ ತೆರವುಗೊಳಿಸಿದ ರೇಲ್ವೆ ಪೊಲೀಸರು, ಸ್ಥಳೀಯರ ಪ್ರತಿಭಟನೆಯ ಬಿಸಿಯ ಬಳಿಕ ಪುತ್ಥಳಿಯನ್ನು ಮತ್ತೆ ಅದೇ ಜಾಗದಲ್ಲಿ ತಂದು ಪ್ರತಿಷ್ಠಾಪಿಸಿದ್ದರು. ಇಂದು ಮತ್ತೆ ತೆರವಿಗೆ ಮುಂದಾಗ ಮತ್ತೆ ಪ್ರತಿಭಟನೆ ನಡೆಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರು ಹಾಗೂ ದಲಿತ ಸಂಘಟನೆಗಳು ಇಂದು ಮತ್ತೆ ಸಂವಿಧಾನ ಶಿಲ್ಪಿಯ ಪುತ್ಥಳಿ ತೆರವು ಮಾಡಲು ಮುಂದಾದಾಗ ಸುಮಾರು 2 ಗಂಟೆ ಕಾಲ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನೆ ಜೋರಾದಾಗ ರೇಲ್ವೆ ಪೊಲೀಸರು ತೆರವು ಕಾರ್ಯಾಚರಣೆ ಯಿಂದ ಹಿಂದೆ ಸರಿದರಲ್ಲದೇ ರೇಲ್ವೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸೋಮವಾರ ಪ್ರಧಾನ ವ್ಯವಸ್ಥಾಪಕರು ಈ ಬಗ್ಗೆ ಸಭೆ ಕರೆದಿದ್ದು ಅಲ್ಲಿ ಅಂತಿಮಗೊಳಿಸುವುದಾಗಿ ಹೇಳಿದ ನಂತರ ಪ್ರತಿಭಟನಾಕಾರರು ಅಂತ್ಯಗೊಳಿಸಿದರು.
ಕಾರ್ಪೋರೇಟರ್ ಸುವರ್ಣಾ ಕಲಕುಂಟ್ಲಾ, ವಿದ್ಯಾನಗರ ಬ್ಲಾಕ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಸಮತಾ ಸೇನೆ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ, ರೇಲ್ವೆ ಎಸ್‌ಸಿ/ಎಸ್‌ಟಿ ಸಂಘದ ರಾಹುಲ್ ಮುಂಗೇಕರ, ಮಹೇಶ ದಾಬಡೆ, ಸಚಿನ್ ಬಾಬು ಸೇರಿದಂತೆ ನೂರಾರು ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಇದ್ದರು.
ರೈಲ್ವೆಗೆ ಸೇರಿದ ಮೈದಾನದ ಬಳಿ ಕಟ್ಟೆಯೊಂದನ್ನು ನಿರ್ಮಿಸಿದ್ದ ಸ್ಥಳೀಯರು, ಅಲ್ಲಿ ಅಂಬೇಡ್ಕರ್ ಪುತ್ಥಳಿಯನ್ನು ಪ್ರತಿಷ್ಠಾಪಿಸಿದ್ದರು. ಗುರುವಾರ ಬೆಳಿಗ್ಗೆ ಕೇಶ್ವಾಪುರ ಠಾಣೆ ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ರೈಲ್ವೆ ರಕ್ಷಣಾ ದಳದ (ಆರ್‌ಪಿಎಸ್) ಸಿಬ್ಬಂದಿ ಪುತ್ಥಳಿಯನ್ನು ತೆರವುಗೊಳಿಸಿದ್ದರು. ಇದರಿಂದ ಅಂದು ಕೆರಳಿದ ಸ್ಥಳೀಯರು ಮಹಾನಗರ ಪಾಲಿಕೆ ಸದಸ್ಯ ಸುವರ್ಣಾ ಕಲ್ಲಕುಂಟ್ಲ ಹಾಗೂ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಶ್ವಾಪುರ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರಲ್ಲದೇ, ಪುತ್ಥಳಿ ಹಿಂದಿರುಗಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಅದಕ್ಕೆ ಮಣಿದ ಪೊಲೀಸರು, ಆರ್‌ಪಿಎಫ್ ಸಿಬ್ಬಂದಿ ವಶದಲ್ಲಿದ್ದ ಪುತ್ಥಳಿಯನ್ನು ಹಿಂದಿರುಗಿಸಿದ್ದರಲ್ಲದೇ, ಬಳಿಕ ಪ್ರತಿಭಟನಾಕಾರರು, ಪುತ್ಥಳಿಯನ್ನು ವಿನೋಬಾನಗರಕ್ಕೆ ತೆಗೆದು ಕೊಂಡು ಅದೇ ಜಾಗದಲ್ಲಿ ಮರು ಪ್ರತಿಷ್ಠಾಪಿಸಿದ್ದರು.