ಹಳೇಹುಬ್ಬಳ್ಳಿ ಗಲಾಟೆ: ಬಂಧಿತರ ಸಂಖ್ಯೆ 127ಕ್ಕೆ
ಹುಬ್ಬಳ್ಳಿ: ಕಳೆದ ಶನಿವಾರ ಇಲ್ಲಿನ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಹಾಗೂ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಡಿದ್ದ ಪ್ರಮುಖ ಆರೋಪಿ ಎನ್ನಲಾದ ಎಐಎಂಐಎಂ ಮುಖಂಡ ಮಹಮ್ಮದ್ ಆರಿಫ್‌ನನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಮಾಸ್ಟರ್ ಮೈಂಡ್ ಕೂಡ ಎನ್ನಲಾಗುತ್ತಿರುವ ಎಐಎಂಐಎಂ ಮುಖಂಡ ಮಹಮ್ಮದ್ ಆರಿಫ್ ಗಲಭೆ ನಡೆದ ದಿನ ಘಟನಾ ಸ್ಥಳದಲ್ಲಿದ್ದು, ಮೌಲ್ವಿ ವಾಸಿಂ ಪಠಾಣ್ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದ ಎನ್ನಲಾಗಿದೆ.
ಗಲಭೆಯ ನಂತರ ನಗರದ ಮಂಟೂರ ರಸ್ತೆ ಮಿಲ್ಲತ್ ನಗರದ ಲಾರಿ ಚಾಲಕ, ಮೌಲ್ವಿ ವೇಷಧಾರಿ ಮಹಮ್ಮದ್ ಆರಿಫ್ ತಲೆಮರೆಸಿಕೊಂಡು ಹೈದರಾಬಾದ್‌ನಲ್ಲಿ ಅವಿತುಕೊಂಡಿದ್ದಾನೆಂಬ ಮಾಹಿತಿ ಆಧರಿಸಿ ತೀವ್ರ ಹುಡಕಾಟ ನಡೆಸಿ ಅಲ್ಲಿಗೆ ತೆರಳಿದ ಪೊಲೀಸರು ಕೊನೆಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಆದರೆ, ಈ ಪ್ರಕರಣದಲ್ಲಿ ಪ್ರಮುಖ ಮತ್ತೊಬ್ಬ ಆರೋಪಿಯಾಗಿರುವಂತ ವಾಸೀಂ ಎಂಬಾತ ಇನ್ನೂ ನಾಪತ್ತೆಯಾಗಿದ್ದು, ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸರು ಮುಂದುವರೆಸಿದ್ದಾರೆ.
ಗಲಭೆಗೆ ಪ್ರಚೋದನೆ ಹಾಗೂ ಭಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಇದುವರೆಗೆ ಒಟ್ಟು 127 ಜನರನ್ನು ವಶಕ್ಕೆ ತೆಗೆದುಕೊಂಡಿದ್ದು, ಇನ್ನೂ ಹಲವರನ್ನು ವಶಕ್ಕೆ ಪಡೆಯುವ ಕೆಲಸವನ್ನು ಮುಂದುವರೆಸಿದ್ದಾರೆ.
ನಗರ ಮಾತ್ರವಲ್ಲದೇ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಈ ಘಟನೆಯಲ್ಲಿ ಭಾಗಿಯಾದ ಎಲ್ಲರನ್ನು ಬಂಧಿಸಿ ಕಂಬಿಯ ಹಿಂದೆ ಕಳಿಸಲು ಖಾಕಿ ಪಡೆ ಮಗ್ನವಾಗಿದೆ. ಈಗಾಗಲೇ ಹಲವರು ನಗರದಿಂದ ಕಾಲ್ಕಿತ್ತಿದ್ದು, ಅವರನ್ನು ಕೂಡ ಬಂಧಿಸುವ ನಿಟ್ಟಿನಲ್ಲಿ ಕಮೀಶ್ನರೇಟ್ ಪೊಲೀಸರು ಮುಂದಾಗಿದ್ದಾರೆ.
ಶೀಘ್ರ ಪೊಲೀಸರಿಗೆ ಶರಣು
ರಹಸ್ಯ ಸ್ಥಳದಿಂದ ವಾಸೀಂ ವಿಡಿಯೋ ರವಾನೆ
ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿ ಗಲಭೆಯ ಮಾಸ್ಟರ್ ಮೈಂಡ್ ಎನ್ನಲಾದ ಮೌಲ್ವಿ. ವಾಸೀಂ ಪಠಾಣ ರಹಸ್ಯ ಸ್ಥಳದಲ್ಲಿ ಕುಳಿತು ವೀಡಿಯೋ ಹರಿಬಿಟ್ಟಿದ್ದು, ಆದಷ್ಟು ಶೀಘ್ರ ಪೊಲೀಸರಿಗೆ ಶರಣಾಗುವುದಾಗಿ ಹೇಳಿದ್ದಾನೆ.
’ಗಲಭೆಗೆ ನಾನು ಪ್ರಚೋದನೆ ನೀಡಿಲ್ಲ. ಗಲಭೆಕೋರರನ್ನು ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದೆ. ಪ್ರತಿಭಟನೆ ಸಂದರ್ಭ ಕರೆಂಟ್ ಹೋಯ್ತು. ಕೆಲ ಜನ ಮುಖಕ್ಕೆ ಮಾಸ್ಕ್ ಹಾಕಿಕೊಂಡವರನ್ನು ನಾನು ನೋಡಿದ್ದೆ’ ಎಂದು ವಿಡಿಯೋ ಮೂಲಕ ಹೇಳಿದ್ದಾನೆ.
’ಉದ್ರಿಕ್ತರನ್ನು ಶಾಂತಿಯಿಂದ ಕೂಡುವಂತೆ ತಿಳಿ ಹೇಳುತ್ತಿದ್ದೆ. ಪೊಲೀಸರೇ ನನ್ನನ್ನು ವಾಹನದ ಮೇಲೆ ಹತ್ತುವಂತೆ ಸೂಚಿದರು. ನಾನು ಪ್ರಚೋದನಾತ್ಮಕ ಭಾಷಣ ಮಾಡಿಲ್ಲ’ ಎಂದು ಮೌಲ್ವಿ ತಿಳಿಸಿದ್ದಾನೆ.