ಹುಬ್ಬಳ್ಳಿ ಗಲಭೆ : ಎಐಎಂಐಎಂ ಕಾರ್ಪೋರೇಟರ್ ಪೊಲೀಸ್ ವಶಕ್ಕೆ
ಇನ್ನೋರ್ವ ಮಾಸ್ಟರ್ ಮೈಂಡ್ ಮೊಹ್ಮದ ಆರೀಫ್ ಬಂಧನ
ಹುಬ್ಬಳ್ಳಿ: ಹಳೇಹುಬ್ಬಳ್ಳಿ ಗಲಭೆ ಪ್ರಕರಣದ ’ಅಸಲಿ ಸೂತ್ರಧಾರ’ರಿಗಾಗಿ ಬೆನ್ನು ಬಿದ್ದಿರುವ ಪೊಲೀಸರು ಯಶಸ್ಸು ಕಾಣುತ್ತಿದ್ದು, ಇಂದು ಎಐಎಂಐಎಂ ಪಾಲಿಕೆ ಸದಸ್ಯ ನಜೀರ ಹೊನ್ಯಾಳನನ್ನು ವಶಕ್ಕೆ ಪಡೆದಿದ್ದಾರೆ.
ಎಐಎಂಐಎಂ ಮಹಾನಗರ ಜಿಲ್ಲಾ ಅಧ್ಯಕ್ಷನಾಗಿರುವ ನಜೀರ್ ಹೊನ್ಯಾಳ 71 ನೇ ವಾರ್ಡಿನ ಸದಸ್ಯನಾಗಿದ್ದು, ಗಲಭೆಗೆ ದೊಡ್ಡ ಪ್ರಮಾಣದಲ್ಲಿ ಜನರನ್ನು ಪ್ರಚೋದಿಸಿ ಕಳುಹಿಸಿರುವ ಹಿಂದೆ ಇವರ ಪಾತ್ರ ಇದೆ ಎಂಬ ಹಿನ್ನೆಲೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪೊಲೀಸರು ವಶಕ್ಕೆ ಪಡೆದು ಹಳೇ ಹುಬ್ಬಳ್ಳಿ ಠಾಣೆಗೆ ಕರೆತಂದಿದ್ದಾರೆ. ವಿಚಾರಣೆ ಬಳಿಕ ಅವರ ಪಾತ್ರ ಖಚಿತ ಪಟ್ಟು, ದಾಖಲೆ ದೊರೆತಲ್ಲಿ ನ್ಯಾಯಾಂಗವಶಕ್ಕೆ ಒಪ್ಪಿಸುವ ಸಾಧ್ಯತೆಗಳಿವೆ.
ಮಾಸ್ಟರ್ ಮೈಂಡ್ ಎನ್ನಲಾಗಿರುವ ಆರೋಪಿ ವಾಸಿಂ ಪಠಾಣನನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದು ದಕ್ಷಿಣ ವಿಭಾಗದ ಎಸಿಪಿ ಆರ್.ಕೆ. ಪಾಟೀಲ ನೇತೃತ್ವದಲ್ಲಿ ತೀವ್ರ ವಿಚಾರಣೆ ನಡೆಸಿರುವಾಗಲೇ ಮತ್ತೋರ್ವ ಮಾಸ್ಟರ್ ಮೈಂಡ್ ಆನಂದ ನಗರದ ಮೊಹ್ಮದ ಆರೀಪ್‌ನನ್ನು ನಿನ್ನೆ ರಾತ್ರಿ ಬಂಧಿಸಲಾಗಿದ್ದು ಬಂಧಿತರ ಸಂಖ್ಯೆ 136 ನ್ನು ದಾಟಿದೆ.
ಮೊಹಮ್ಮದ್ ಆರೀಫ್ ಗಲಭೆ ನಂತರ ನಾಪತ್ತೆಯಾಗಿದ್ದನು. ಗಲಭೆಗೆ ಕಾರಣರಾದವರು ಸೃಷ್ಟಿ ಮಾಡಿದ್ದ ವಾಟ್ಸಪ್ ಗ್ರೂಪ್‌ನಲ್ಲಿ ಕೆಲವೊಂದು ವಾಯ್ಸ್ ಮೆಸೇಜ್ ಮತ್ತು ಸಂದೇಶಗಳನ್ನು ಆಧರಿಸಿ ಇದೀಗ ಆತನನ್ನು ಬಂಧಿಸಲಾಗಿದೆ.
4 ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವಸೀಮನನ್ನು ಹಾಜರುಪಡಿಸಿದ ಪೊಲೀಸರು 10 ದಿನ ವಶಕ್ಕೆ ನೀಡುವಂತೆ ಕೋರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 5 ದಿನ ಪೊಲೀಸ್ ವಶಕ್ಕೆ ನೀಡಿದೆ. ಇನ್ನೊಬ್ಬ ಆರೋಪಿ ತುಫೆಲ್ ಮುಲ್ಲಾನನ್ನೂ ನ್ಯಾಯಾಲಯ ಪೊಲೀಸ್ ವಶಕ್ಕೆ ಒಪ್ಪಿಸಿದ್ದು ಆತನ ಡ್ರಿಲ್ಲಿಂಗ್ ಸಹ ನಡೆದಿದೆ.
’ಆವತ್ತು ಜನರನ್ನು ಸೇರಿಸಿದ್ದು ನಾನೇ’ ಎಂದು ವಾಸೀಂ ಪಠಾಣ ಪೊಲೀಸ್ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ವಾಸೀಂ ಪಠಾಣ ಮಿಲ್ಲತ್ ನಗರದ ನಿವಾಸಿಯಾಗಿದ್ದು, ಮಸೀದಿಯಲ್ಲಿ ಆಜಾನ್ ಕೂಗುತ್ತಿದ್ದ ಈತ, ಸಮುದಾಯದಲ್ಲಿ ಮೊಬಾಲೀಕ್ ಆಗಿ ಗುರುತಿಸಿಕೊಂಡಿದ್ದ. 1978 ರಲ್ಲಿ ಕಟ್ಟರ್ ಮುಸ್ಲಿಂವಾದಿಗಳಿಂದ ಅಸ್ತಿತ್ವಕ್ಕೆ ಬಂದಿರುವ ಮುಂಬೈ ಮೂಲದ ರಜಾ ಆಕಾಡೆಮಿ ಮುಖಂಡನಾಗಿ ಹುಬ್ಬಳ್ಳಿ ಯಲ್ಲೂ ಸಂಘಟನೆ ಮಾಡುತ್ತಿದ್ದ. ರೌಡಿಶೀಟರ್ ಮೊಹಮ್ಮದ ಬೇಪಾರಿ, ತೌಫೀಲ್ ಮುಲ್ಲಾ ಮತ್ತಿತರ ಜತೆ ಸೇರಿ ಸಂಘಟನೆ ಕಟ್ಟುತ್ತಿದ್ದ ಎನ್ನಲಾಗಿದೆ.
ಹುಬ್ಬಳ್ಳಿ ಗಲಭೆ; ಕೈ ಮುಖಂಡರೇ ಪ್ರತ್ಯಕ್ಷ ಸಾಕ್ಷಿ
ಭಾಗಿಯಾದವರೆಲ್ಲರ ಬಂಧಿಸಿ – ಗೂಂಡಾ ಕೇಸ್ ದಾಖಲಿಸಿ
ಹುಬ್ಬಳ್ಳಿ: ಕಳೆದ ಶನಿವಾರ ನಡೆದ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಅವರೇ ಪ್ರಕರಣ ದಾಖಲಿಸಿ ತನಿಖೆಗೆ ಸಹಕರಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.
ದಿಡ್ಡಿ ಹನುಮಂತ ದೇವಸ್ಥಾನ ಸೇರಿದಂತೆ ಗಲಭೆ ನಡೆದ ಸ್ಥಳಕ್ಕೆ ಇಂದು ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಲಭೆ ಸಂದರ್ಭದಲ್ಲಿ ಮಹಾನಗರ ಜಿಲ್ಲಾ ಅಧ್ಯಕ್ಷರು ಪೊಲೀಸ್ ಜೀಪ್ ಹತ್ತಿ ಮಾತನಾಡಿದ್ದಾರೆ. ಉದ್ರಿಕ್ತರನ್ನು ನಿಯಂತ್ರಿಸಲು ಜೀಪ್ ಹತ್ತಿದ್ದೆ ಎನ್ನುವ ಅವರೇ, ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಗಲಭೆಯಲ್ಲಿ ಯಾರ್‍ಯಾರು ಇದ್ದಾರೆ ಎನ್ನುವುದು ಅವರಿಗೆ ಸ್ಪಷ್ಟವಾಗಿ ತಿಳಿದಿದೆ. ಅವರೇ ಪ್ರತ್ಯೇಕ ಪ್ರಕರಣ ದಾಖಲಿಸಿ ಪೊಲೀಸ್ ತನಿಖೆಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಗಲಭೆಯಲ್ಲಿ ದೇವಸ್ಥಾನ, ಪೊಲೀಸ್ ಠಾಣೆ, ಮನೆಗಳ ಮೇಲೂ ಕಲ್ಲು ತೂರಾಟ ನಡೆದಿದೆ. ಪೊಲೀಸ್ ಜೀಪ್ ಸೇರಿದಂತೆ ಸಾರ್ವಜನಿಕರ ಬೈಕ್‌ಗಳು ಸಹ ಹಾನಿಯಾಗಿವೆ. ಒಂದೂವರೆ ತಾಸಿನಲ್ಲಿ ಇಷ್ಟೆಲ್ಲ ಆಗುತ್ತದೆ ಎಂದರೆ ಇದೊಂದು ಪೂರ್ವ ನಿಯೋಜಿತ ಕೃತ್ಯ. 140 ಮಂದಿಯನ್ನಷ್ಟೇ ಬಂಧಿಸಲಾಗಿದೆ. ಯಾರ್‍ಯಾರು ಪ್ರಕರಣದಲ್ಲಿ ಭಾಗಿಯಾಗಿದ್ದಾರೋ ಅವರೆಲ್ಲರ ನ್ನೂ ಬಂಧಿಸಿ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ, ಹುಬ್ಬಳ್ಳಿಯಂಥ ಸೂಕ್ಷ್ಮ ಪ್ರದೇಶವನ್ನೇ ದುಷ್ಕರ್ಮಿಗಳು ಗಲಭೆಗೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಶಾಂತಿ ನೆಲೆಸಬೇಕು. ಶಾಂತಿ ಭಂಗ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.
ಮುಖಂಡರಾದ ಸಂಜಯ ಕಪಟಕರ, ಲಿಂಗರಾಜ ಪಾಟೀಲ, ತಿಪ್ಪಣ್ಣ ಮಜ್ಜಗಿ, ನಾರಾಯಣ ಜರತಾರಘರ, ದತ್ತಮೂರ್ತಿ ಕುಲಕರ್ಣಿ, ರವಿ ನಾಯ್ಕ, ಲಿಂಗರಾಜ ಪಾಟೀಲ, ಬಸವರಾಜ ಅಮ್ಮಿನಬಾವಿ ಇತರರಿದ್ದರು.