ಹುಬ್ಬಳ್ಳಿ: ಆಯುರ್ವೇದವನ್ನು ವಾಣಿಜ್ಯೀಕರಣಗೊಳಿಸುವುದು ತುಂಬಾ ಅಪಾಯಕಾರಿ. ಇದರಿಂದ ಆಯುರ್ವೇದಕ್ಕೆ ಯಾವುದೇ ರೀತಿಯ ಅನುಕೂಲವಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಗೋಕುಲ ರಸ್ತೆಯಲ್ಲಿರುವ ಕೆ.ಎಸ್. ಶರ್ಮಾ ಕ್ಯಾಂಪಸ್ನಲ್ಲಿ ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆಯೋಜಿಸಿರುವ ಆಯುರ್ವೇದ ವಸ್ತುಗಳ ಪ್ರದರ್ಶನ ’ಆಯುರ್ ಎಕ್ಸ್ಪೋ’ದ 2ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಯುರ್ವೇದ ಔಷಧಿಗಳನ್ನು ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಇದು ಆಯುರ್ವೇದದ ಮೂಲ ಸಿದ್ಧಾಂತಕ್ಕೆ ವಿರುದ್ಧವಾದದ್ದು. ಆಯುರ್ವೇದಕ್ಕೆ ಒಳ್ಳೆಯ ಭವಿಷ್ಯವಿದೆ. ಇಂತಹ ಅವಕಾಶ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು. ಅಲೋಪಥಿ ಚಿಕಿತ್ಸೆ ದುಬಾರಿಯಾಗಿದ್ದು, ಆಯುರ್ವೇದವು ಬಡವರ ಔಷಧಿಯಾಗಿದೆ. ಇದನ್ನು ವ್ಯಾಪಕವಾಗಿ ಹಾಗೂ ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಶರ್ಮಾ, ಆಸ್ಪತ್ರೆ ಅಧ್ಯಕ್ಷ ಮೋಹನ ಲಿಂಬಿಕಾಯಿ, ಪ್ರಾಚಾರ್ಯ ಡಾ. ಎಸ್.ಕೆ. ಬನ್ನಿಗೋಳ, ಡಾ. ಮಹೇಶ ದೇಸಾಯಿ, ಡಾ. ಸೋಮಶೇಖರ ಹುದ್ದಾರ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಇನ್ನಿತರರಿದ್ದರು.